23/12/2024
IMG_20240223_233348

ಬೆಳಗಾವಿ-23: ಬೆಳಗಾವಿಯಲ್ಲೂ ಶೇ.60ರಷ್ಟು ನಾಮಫಲಕದಲ್ಲಿ ಕನ್ನಡ ಕಡ್ಡಾಯಗೊಳಿಸದಿದ್ದರೆ ಬೆಂಗಳೂರಿನಲ್ಲಿ ಆದ ಹೋರಾಟ ಬೆಳಗಾವಿಯಲ್ಲಿ ಮರುಕಳಿಸಲಿದೆ. ಬೆಂಗಳೂರಿಗೆ ಆದ ಗತಿ ಬೆಳಗಾವಿಗೂ ಆಗಲಿದೆ. ಫೆ.28ರ ಬಳಿಕ 31 ಜಿಲ್ಲೆಗಳಲ್ಲೂ ಹೋರಾಟ ನಡೆಯಲಿದ್ದು, ಮತ್ತೆ ಜೈಲಿಗೆ ಹೋದರೂ ಹೆದರುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಗುಡುಗಿದರು.

IMG 20240221 WA0004 2 -ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲ ಕನ್ನಡಿಗರು ಒಟ್ಟಾರೆ ಬೆಂಬಲಿಸಿದ್ದು ಕನ್ನಡ ನಾಮಫಲಕ ಕಡ್ಡಾಯ ಹೋರಾಟವನ್ನು. ಅದು ಕೇವಲ ಬೆಂಗಳೂರಿಗೆ ಅಷ್ಟೇ ಅಲ್ಲದೇ ರಾಜ್ಯದಾಧ್ಯಂತ ಶೇ.60ರಷ್ಟು ಕನ್ನಡ ಬಳಕೆ ಮಾಡುವಂತೆ ಒತ್ತಡ ಹಾಕಿದ್ದೇವು. ಬೆಂಗಳೂರು ಅಷ್ಟೇ ಕನ್ನಡೀಕರಣ ಆಗಬಾರದು ಇಡೀ ಕರ್ನಾಟಕ ಕನ್ನಡೀಕರಣ ಆಗಬೇಕಿದೆ.‌ ಫೆ.28ರವರೆಗೆ ಸರ್ಕಾರಕ್ಕೆ ಗಡುವು ಕೊಟ್ಟಿದ್ದೇವೆ. ಸರ್ಕಾರದ ನಿರ್ಧಾರದ ಬಳಿಕ 31 ಜಿಲ್ಲೆಗಳಲ್ಲಿ ನನ್ನ ನೇತೃತ್ವದಲ್ಲೆ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದರು.

ಕನ್ನಡದ ಗಟ್ಟಿ ಹೋರಾಟವನ್ನು ಸರ್ಕಾರ ಸಹಿಸಲಿಲ್ಲ. ಉದ್ಯಮಿಗಳ ಒತ್ತಡಕ್ಕೆ ಮಣಿದು ನಮಗೆ 14 ದಿನ ಜೈಲಿಗೆ ಕಳಿಸಿದರು. 6ನೇ ಬಾರಿ ನಾನು ಜೈಲಿಗೆ ಹೋಗಿ ಬಂದಿದ್ದೇನೆ. ಆದರೆ ಸಿದ್ದರಾಮಯ್ಯ ಸರ್ಕಾರ ನಡೆದುಕೊಂಡಷ್ಟು ಕಟುವಾಗಿ ಯಾವ ಸರ್ಕಾರವೂ ನಡೆದುಕೊಂಡಿಲ್ಲ. ನನ್ನ ಮೇಲೆ ಇಲ್ಲ ಸಲ್ಲದ ಪ್ರಕರಣಗಳನ್ನು ದಾಖಲಿಸಿದರು. ನಮ್ಮ ಹೋರಾಟ ಸಮರ್ಥಿಸಿಕೊಂಡು, ಖುಷಿ ಪಡಬೇಕಿತ್ತು. ನನ್ನ ಇಬ್ಬರು ಮಕ್ಕಳು ಹುಟ್ಟುವಾಗಲೂ ನಾನು ಜೈಲಲ್ಲೆ ಇದ್ದೆ. ಜೈಲು, ಕೋರ್ಟ್ ನನಗೇನು ಹೊಸತಲ್ಲ. ಮೂರು ತಿಂಗಳು ಜೈಲಿನಿಂದ ಹೊರಗೆ ಬರದಂತೆ ಷಡ್ಯಂತ್ರ ಮಾಡಿದ್ದರು. ಆದರೆ ನಮ್ಮ ವಕೀಲರು ದೊಡ್ಡ ಹೋರಾಟ ಮಾಡಿ ಜೈಲಿನಿಂದ ಹೊರಗೆ ಕರೆ ತಂದರು. ನಾರಾಯಣಗೌಡರ ಧ್ವನಿಯನ್ನು ನೂರು ಸಿದ್ದರಾಮಯ್ಯ ಸರ್ಕಾರ ಬಂದರೂ ಅಡಗಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರದ ಚಿಂತನೆ ಕರ್ನಾಟಕ ಸರ್ಕಾರಕ್ಕೆ ಬರುತ್ತಿಲ್ಲ. ಗಡಿ ವಿವಾದ ಸುಪ್ರೀಂಕೋರ್ಟ್ ನಲ್ಲಿ ಇರೋದರಿಂದ ಇಲ್ಲಿ ನಾಮಫಲಕ ಕಡ್ಡಾಯಗೊಳಿಸಬಾರದು ಎಂದು ಎಂಇಎಸ್ ನವರು ಸುಪ್ರೀಗೆ ಹೋಗುತ್ತೇವೆ ಎಂದು ಹೇಳಿದೆ. ಆದರೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಇದು ಕೂಡ ಕನ್ನಡಮಯವಾಬೇಕು. ಅದಕ್ಕೆ ನಮ್ಮ ಹೋರಾಟ ಗಟ್ಟಿಯಾಗಿ ಇರಲಿದೆ. ಒಂದು ವೇಳೆ ಎಂಇಎಸ್‌ ವಿರೋಧ ವ್ಯಕ್ತಪಡಿಸಿದರೆ ಬೆಂಗಳೂರು ಮಾದರಿಯಲ್ಲಿ ಹೋರಾಟ ಮಾಡುತ್ತೇವೆ. ನಮ್ಮ ಹೋರಾಟಕ್ಕೆ ಎಂಇಎಸ್ ಆಗಲಿ, ಶಿವಸೇನೆ ಆಗಲಿ ವಿರೋಧಿಸಿದ್ರೆ ನಾವು ಜಗ್ಗಲ್ಲ. ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್‌ ಸರ್ವನಾಶವಾಗಲಿ ಎಂದು ನಾರಾಯಣಗೌಡ ಗುಡುಗಿದರು.

ಬೆಳಗಾವಿ ಗಡಿ ವಿವಾದ, ಸರ್ಕಾರಿ ಕಚೇರಿಗಳ ಸ್ಥಳಾಂತರ ಸೇರಿ ಅನೇಕ ವಿಚಾರಗಳಿಗೆ ಸಂಬಂಧಿಸಿದಂತೆ ನಾವು ಅನೇಕ ಬಾರಿ ಆಯಾ ಸರ್ಕಾರದ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಹಕ್ಕೊತ್ತಾಯಿಸಿದ್ದು, ಅನೇಕ ಬಾರಿ ಹೋರಾಟ ಮಾಡಿದ್ದೇವೆ ಎಂದ ನಾರಾಯಣಗೌಡ, 24ರಂದು ಬೆಳಗಾವಿಯಲ್ಲಿ ಕರವೇ ರಾಜ್ಯ ಕಾರ್ಯಕಾರಿಣಿ ಸಭೆ ಹಮ್ಮಿಕೊಂಡಿದ್ದೇವೆ. ಸಭೆಯಲ್ಲಿ ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ಮೀಸಲು ಸೇರಿ ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸಿ, ನಿರ್ಣಯ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಬೆಳಗಾವಿ ಅಖಂಡ ಜಿಲ್ಲೆ ಆಗಿರಬೇಕು. ಅಭಿವೃದ್ಧಿ ವಿಚಾರಕ್ಕೆ ಇಲ್ಲಿನ ಜನಪ್ರತಿನಿಧಿಗಳ ಭಾವನೆ ತಿಳಿದುಕೊಳ್ಳಬೇಕಾಗುತ್ತದೆ. ಅದರ ಸಾಧಕ, ಬಾಧಕ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ನಾರಾಯಣಗೌಡರು ತಿಳಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಮಹಾದೇವ ತಳವಾರ್, ದೀಪಕ್ ಗುಡಗನಟ್ಟಿ, ಸುರೇಶ ಗವಣ್ಣವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!