ಬೆಳಗಾವಿ-21: ಮುಂಬರುವ ಕೆಡಿಪಿ ಸಭೆಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಗ್ರ ಮಾಹಿತಿಯೊಂದಿಗೆ ಕಡ್ಡಾಯವಾಗಿ ಹಾಜರಾಗಬೇಕು. ಸಭೆಗೆ ಗೈರು ಹಾಜರಾದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಎಚ್ಚರಿಕೆ ನೀಡಿದರು.
ನಗರದ ಹಳೆ ಜಿಪಂ ಸಭಾಭವನದಲ್ಲಿ ಬುಧವಾರ ಜಿಲ್ಲೆಯ ಕೆಡಿಪಿ ಸಭೆಯ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬರಗಾಲ ಎದುರಾಗಿದ್ದು, ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಮತ್ತು ಪಶುಪಾಲನಾ ಇಲಾಖೆಯ ಅಧಿಕಾರಿಗಳು ಬರಗಾಲ ಎದುರಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ಜೊತೆಗೆ ಎಲ್ಲ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಬರಗಾಲ ಎದುರಿಸಲು ಬೇಕಾಗುವಂತಹ ಕ್ರಮಗಳ ಕುರಿತು ಸಮಗ್ರ ಮಾಹಿತಿ ತಯಾರಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ ಬರಗಾಲ ಎದುರಾಗಿರುವುದರಿಂದ ಕುಡಿಯುವ ನೀರು ಅಭಾವ ಕಂಡು ಬಂದಲ್ಲಿ ಟ್ಯಾಂಕರ್ ಮೂಲಕ ಪೂರೈಸಬೇಕು. ಜತೆಗೆ ಖಾಸಗಿ ಬೋರವೆಲ್ಗಳನ್ನು ಪ್ರತಿ ಗ್ರಾಮ ಪಂಚಾಯತಿಗೆ ಎರಡರಂತೆ ಗುರುತು ಮಾಡಿ ನೀರಿನ ಕೊರತೆ ನಿಗಿಸಬೇಕು. ಬಹುಗ್ರಾಮ ಕುಡಿಯುವ ನೀರು ಯೋಜನೆಯ ಸ್ಥಳಗಳನ್ನು ಎಇಇ ಮತ್ತು ಇಒಗಳು ಪರಿಶೀಲನೆ ಮಾಡಬೇಕು ಎಂದು ಸೂಚಿಸಿದರು.
ಗ್ರಾಮಗಳಲ್ಲಿ ಕುಡಿಯುವ ನೀರನ್ನು ಪೂರೈಯಿಸಲು ಟೆಂಡರ್ ಆಗುವವರೆಗೂ ಕಾಯುವ ಅವಶ್ಯಕತೆ ಇಲ್ಲ. ಏಳು ದಿನಗಳ ಕಾಮಗಾರಿಯ ಆದೇಶ ಪಡೆದು ಟೆಂಡರ್ ಪ್ರಕ್ರಿಯೆ ಮಾಡಿ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಯಿಸಬೇಕು. ಆರೋಗ್ಯ ಇಲಾಖೆಯಡಿ ಗ್ರೂಪ್ –ಡಿ ಹಂತದಲ್ಲಿ ಹೊರಗುತ್ತಿಗೆ ಮುಖಾಂತರ ಸಿಬ್ಬಂದಿಯನ್ನು ನೇಮಿಸಿಕೊಂಡು ಗ್ರಾಮೀಣ ಜನರಿಗೆ ಉತ್ತಮ ಸೇವೆ ನೀಡಬೇಕು. ಈ ಸಭೆಗೆ ಗೈರು ಹಾಜರು ಆಗಿರುವ ಅಧಿಕಾರಿಗಳಿಗೆ ಕಾರಣ ಕೇಳುವ ನೋಟಿಸ್ ಜಾರಿ ಮಾಡಲು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ರೇಖಾ ಡೊಳ್ಳಿನವರ ಉಪಕಾರ್ಯದರ್ಶಿ (ಆಡಳಿತ), ಬಸವರಾಜ ಅಡವಿಮಠ ಉಪಕಾರ್ಯದರ್ಶಿ (ಅಭಿವೃದ್ಧಿ), ರವಿ ಎನ್ ಬಂಗಾರೆಪ್ಪನವರ ಯೋಜನಾ ನಿರ್ದೇಶಕರು, ಪರಶುರಾಮ ದುಡಗುಂಟಿ ಮುಖ್ಯ ಲೆಕ್ಕಾಧಿಕಾರಿಗಳು, ಗಂಗಾಧರ ದಿವಟರ್ ಮುಖ್ಯ ಯೋಜನಾಧಿಕಾರಿಗಳು ಹಾಗೂ ಜಿಲ್ಲೆಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲ ತಾಲ್ಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳು ಉಪಸ್ಥಿತಿ ರಿದ್ದರು.