ಬದುಕಿನ ಪಯಣದ ವಿವಿಧ ಅನುಭವಗಳ ಸಹಜ ಸುಂದರ ಚಿತ್ರಣ.
ಕೃತಿಯ ಹೆಸರು: ಕಾರ್ಮೋಡ ಕರಗಿದಾಗ…
ಲೇಖಕರು: ರೂಪಕಲಾ ಕೆ. ಎಂ. (ಕಾವ್ಯ ನಾಮ)
ಪ್ರಕಾಶಕರು: ಸಾಗರ್ ಎಂಟರ್ ಪ್ರೈಸಸ್,
ನಂ ೮೯೩/ ಡಿ, ಗ್ರೌಂಡ್ ಫ್ಲೋರ್, 3 ನೇ ಕ್ರಾಸ್,
ಪೂರ್ವ ಬಡಾವಣೆ, ನೆಹರು ನಗರ
ಮಂಡ್ಯ ೫೬೧೪೦೧.
ಪುಟಗಳು – ೧೨೮, ಬೆಲೆ ೧೫೦/-
ಕೃತಿಗಳಿಗೆ ಸಂಪರ್ಕ:
: ೮೩೨೮೦೨೭೧೩೨
************************
ಸಮಸ್ತ ಜಗದ ಬದುಕು ಬದಲಾವಣೆಯ ತೀವ್ರತೆಯೊಳಗಿದೆ. ಅದರಂತೆ ಅಭಿವ್ಯಕ್ತಿ ಮಾಧ್ಯಮಗಳಾದ ಸಾಹಿತ್ಯ, ಸಂಗೀತ, ಕಲೆ, ಸಿನೆಮಾ, ದೂರದರ್ಶನದೊಳಗಿನ ವಿವಿಧ ಕಾರ್ಯಕ್ರಮಗಳು, ಜಾಲತಾಣಗಳು ಮುಂತಾದವುಗಳಲ್ಲಿ ಹೊಸ ಹೊಸ ಕಸರತ್ತು, ಕರಾಮತ್ತು , ಕೈಚಳಕ, ನಟನೆಯ ಮೋಹಕತೆ, ಹಿನ್ನೆಲೆ-ಮುನ್ನೆಲೆಯ ಬೆಳಕು-ಥಳಕುಗಳು ಪೈಪೋಟಿಯೊಳಗಿವೆ. ಒಂದು ಅರ್ಥದಲ್ಲಿ ಮಾನವನ ಸಹಜ ಬದುಕನ್ನು ಎಲ್ಲೆಲ್ಲೂ ಸುತ್ತಾಡಿಸುವುದು, ತಿರುಗಾಡಿಸುವುದು, ಮುಕ್ತಿ,, ಶಮುಕ್ತಿ,, ಶಕ್ತಿ, ಕುಶಕ್ತಿಗಳ ವಿಪರೀತ ಆಟ- ಪಯಣದೊಳಗೆ ತೊಡಗಿಸುವ ಅಭಿವ್ಯಕ್ತಿ ಮಾಧ್ಯಮ ಇತಿಮಿತಿಗಳು ಹೀಗೆ ಎಂದು ಛಂದೋಬದ್ಧಗೊಳಿಸಲಾಗದು. ಸಾಹಿತ್ಯ ರಚನೆಯ ವಲಯವನ್ನು ಸೀಮಿತವಾಗಿ ಅಭಿವ್ಯಕ್ತಿ ಮಾಧ್ಯಮ ಕುರಿತು ಬಲ್ಲ- ಬಲ್ಲವರು ದಿಕ್ಕೆಟ್ಟು ಹೋಗುವಂತಾಗಿದೆ.ಮುಖ್ಯವಾಗಿ ಈಗೀಗ ಪ್ರಕಟವಾಗಿ ಹೊರಬರುತ್ತಿರುವ ಕೃತಿಗಳ ಕೃತಿ ಶೀರ್ಷಿಕೆಗೂ, ಒಳಗಿನ ವಿಷಯಕ್ಕೂ ಸಂಬಂಧವೇ ಇರದಂತಿದೆ. ಕೆಲವು ಕೃತಿಗಳು ಕೃತಿ ಚೌರ್ಯದ ವಸ್ತು – ವಿಷಯ ಹೊಂದುರುವುದು ಸಹಜವಾಗಿದೆ. ಕೃತಕ ಬುದ್ಧಿ ಮತ್ತೆಗೂ ಮೀರಿದ ಆಲೋಚನಾ ಕ್ರಮಗಳು ಸಾಹಿತ್ಯ ಕ್ಷೇತ್ರವನ್ನು ಆಳುವಷ್ಟು ಪ್ರಬಲವಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಕೆಲವು ಕೃತಿಗಳು ಇತಿಹಾಸವನ್ನು ತಿರುಚುವ ಹಂಬಲದಿಂದಲೂ ಪ್ರಸಿದ್ಧಿ ಪಡೆಯುತ್ತಲಿವೆ. ಕನ್ನಡ ಸಾಹಿತ್ಯದಲ್ಲಿ ಕಾವ್ಯ ಪ್ರಕಾರ ಕವಲುದಾರಿಯೊಳಗಿದೆ. ಕಥಾ ಸಾಹಿತ್ಯದೊಳಗೆ ವಸ್ತು-ವಿಷಯದ ಕೊರತೆಯಿಂದಾಗಿ ಗ್ರಹಣ ಹಿಡಿದಿದೆ. ಕಾದಂಬರಿ ಸಾಹಿತ್ಯವಂತೂ ಮೊದಲಿನ ಹಿರಿಮೆ-ಗರಿಮೆಗಳಿಂದ ದೂರಾಗಿ ಉಳಿದಿದೆ. ಹೀಗಿದ್ದರೂ ಕಾವ್ಯ,ಕಥೆ, ಕಾದಂಬರಿ ರಚನೆ ಇಂದಿಗೂ ತೀರ ಪೈಪೋಟಿಯೊಳಗಿದೆ. ನಾಟಕ ರಚನೆ- ಪ್ರದರ್ಶನ ಜನಪ್ರಿಯವಾಗಿಲ್ಲೆಂದರೂ ನಾಟಕ ರಚನೆ, ನಾಟಕ ಪ್ರದರ್ಶನ ಎಂದಿನಂತೆ ಜೀವಂತವಿಡಬೇಕೆಂಬ ಛಲಗಾರಿಕೆ ಕಡಿಮೆಯಾಗಿಲ್ಲ. ಕನ್ನಡ ಸಾಹಿತ್ಯದೊಳಗೆ ಕಾದಂಬರಿ ಸಾಹಿತ್ಯಕ್ಕೆ ಅದರದೇ ಆಗಿರುವ ಜಾಗ, ಸ್ಥಾನ-ಮಾನವಿದೆ. ಸ್ವಾತಂತ್ರ್ಯ ಪಡೆದ ನಂತರ ಮತ್ತು ಮಹಿಳೆಯರು ಸಾಹಿತ್ಯ ಕೃಷಿಯೊಳಗೆ ತೊಡಗಿದಾಗ ಕನ್ನಡ ಕಾದಂಬರಿ ಲೋಕವು ಮಿಂಚಿದ್ದು ಇತಿಹಾಸವೇ ಆಗಿದೆ. ಕೆಲವು ಕನ್ನಡ ನಿಯತಕಾಲಿಕೆಗಳು ಕಾದಂಬರಿಗಳನ್ನು ಧಾರವಾಹಿಗಳನ್ನಾಗಿ ಪ್ರಕಟಿಸಿ, ಕಾದಂಬರಿ ಓದುವ ಹವ್ಯಾಸ ಬೆಳೆಸಿದ್ದು ಒಂದು ಸರಿ ನೆನಪಾಗಿ ಇಂದಿಗೂ ಉಳಿದಿದೆ. ಇಂದು ಕನ್ನಡ ಕಾದಂಬರಿಗಳನ್ನು ಮಹಿಳಾ ಸಾಹಿತಿಗಳು ರಚಿಸುತ್ತ ಅದಕ್ಕೊಂದು ಜೀವಂತಿಕೆಯ ಸಹೃದಯ ಓದುಗರಾಗಿ ಉಳಿದುಕೊಂಡಿದ್ದಾರೆ. ಮಹಿಳಾ ಸಾಹಿತಿಗಳ ಕಾದಂಬರಿಗಳು ಕೇವಲ ಮಹಿಳಾ ಸಂವೇದನೆಗಳಾಗಿರದೆ ಜೀವನಪರ, ಬದುಕಿನಪರ, ಜನಪರವಾಗಿ ಹೊರ ಹೊಮ್ಮುತ್ತಿರುವುದು ಸಂತಸದ ಸಂಗತಿ.
ಪ್ರಸ್ತುತ “ಕಾರ್ಮೋಡ ಕರಗಿದಾಗ” ….. ಕಾದಂಬರಿಯು ಕೌಟುಂಬಿಕ, ಸಾಮಾಜಿಕ, ಆರ್ಥಿಕ, ಆಡಳಿತ ಹೊರ-ಒಳ ನೋಟಗಳನ್ನೊಳಗೊಂಡ ಮಾನವನ ಬದುಕಿನ ವಿವಿಧ ಆಯಾಮಗಳನ್ನು ಅನುಭವಿಸಿ ಮುನ್ನಡೆಯಬೇಕೆಂಬುದನ್ನು ಸಾದರಪಡಿಸುತ್ತದೆ. ಈ ಕೃತಿಗೆ ಮುನ್ನುಡಿ ಬರೆದಿರುವ ನಾಡಿನ ಹೆಸರಾಂತ ಪ್ರಮುಖ ಕಥೆಗಾರರೂ ಆಧ್ಯಾತ್ಮ ಚಿಂತಕರೂ ಆದ ಶ್ರೀ ವಿದ್ಯಾಧರ ಮುತಾಲಿಕ ದೇಸಾಯಿ ಅವರು ಹೇಳಿದಂತೆ ಈ ಕಾದಂಬರಿಯೊಳಗೆ ಖಳನಾಯಕಿಯಂತೆ ಕಾಣುವ “ಶ್ರೀಜಾ” ಳ ಸಂಸ್ಕಾರ ನೋಡಬಹುದು. ಅದೊಂದು ಕುಸಂಸ್ಕಾರ ಎನ್ನಬಹುದು. ಮಕ್ಕಳ ಜತೆ ಮುಂಬಯಿ ಮಹಾನಗರದಲ್ಲಿ ಸುತ್ತಾಟ , ಅಲ್ಲಿಯ ಬೀಚ್, ನೆಹರೂ ಪ್ಲಾನಿಟೋರಿಯಮ್ ತೋರಿಸಿದಾಗ ಮಕ್ಕಳಿಗೆ ಒಂದಿಷ್ಟು ಖುಷಿಯ ಜೊತೆಗೆ ಖಗೋಳ ಶಾಸ್ತ್ರದ ಜ್ಞಾನವೂ ಸಿಗುವುದು. ವಡಾ-ಪಾವ್, ಊಟ, ಇನ್ನಿತರ ತಿಂಡಿ ತಿನ್ನುವಾಗ ವಿಭಿನ್ನ ಪ್ರದೇಶಗಳ ವಿಭಿನ್ನ ಸಂಸ್ಕೃತಿ, ಪರಿಸರ ಸಂಸ್ಕಾರಗಳ ಪರಿಚಯ ದೊರೆಯುವುದು. ಪ್ರೇಮಿಗಳಿಗೆ ಪೋಷಕ ಪಾತ್ರವಾದ ‘ಮರಿಯ’ ಮನರಂಜನೆ ಹಾಗೂ ಜವಾಬ್ದಾರಿ ಎರಡನ್ನೂ ನಿಭಾಯಿಸುವನು. ಮಮತೆ, ಪ್ರೀತಿ, ವಿನಯಾದಿ ಸಂಸ್ಕಾರಗಳ ಒಂದು ಭಾಗವಾಗಿ ‘ಹೇಮಾ’ ಪ್ರತಿನಿಧಿಯಾದರೆ ,ಅಪ್ಪಟ ಮೌನ ಪ್ರೇಮಿಯಾಗಿ ‘ಪೂರ್ಣ’, ಪಶ್ಚಾತ್ತಾಪದಲ್ಲಿ ಬೆಂದಿರುವ ಶಾನುಭೋಗರು,
ಇವೆಲ್ಲ ಸಮಾಜ, ಅದರ ಸಂಸ್ಕೃತಿ, ಆಚಾರ- ವಿಚಾರಗಳನ್ನು ದಾಖಲಿಸುತ್ತವೆ. ಪತ್ರಕರ್ತ, ಬರೆಹಗಾರ ಶ್ರೀ ದತ್ತಾತ್ರೇಯ ಹೆಗಡೆ ಅವರು ಈ ಕಾದಂಬರಿಯೊಳಗೆ ಕಾದಂಬರಿಗಾರ್ತಿ ‘ಶ್ರೀಮತಿ ರೂಪಕಲಾ ಕೆ ಎಂ’ ಇವರು ಬದುಕಿನ ವಿವಿಧ ಸಂದರ್ಭ, ಸನ್ನಿವೇಶ, ಘಟನೆಗಳನ್ನು ತಿಳಿ ನೀರಿನ ಪ್ರತಿಬಿಂಬಗಳಾಗಿರಿಸಿದ್ದಾರೆಂದಿದ್ದಾರೆ.
ಬೆಳದಿಂಗಳ ಆ ರಾತ್ರಿ……. ಎಂಬ ರೋಚಕ ಸನ್ನಿವೇಶದಿಂದ ಆರಂಭಗೊಂಡಿರುವ ಈ ಕಾದಂಬರಿಯು ಬದುಕಿನ ವಿವಿಧ ಭಾವ-ಭಾವನೆ, ಸಂಘರ್ಷ, ಸಂವಾದ, ವೇದನೆ, ಕಲಹ, ಜಗಳ, ಅಹಂಕಾರ, ಮೌನ, ಶಾಂತಿ, ಸಮಾಧಾನ ಮುಂತಾದ ಪಯಣಗಳಲ್ಲಿ ಸುತ್ತಾಡಿ ಸುತ್ತಾಡಿಸಿ “ಹೇ….. ಮಾಮಂಗೆ ಮದುವೆಯಂತೆ… ಹೇ” ಕೂಗುತ್ತಲೇ ಮಕ್ಕಳಿಬ್ಬರು ಅವರಿಬ್ಬರ ಸುತ್ತ ಸುತ್ತಿದರು. ಎಲ್ಲರ ಮುಖದಲ್ಲಿ ನಗುವಿನ ಹೊಳೆ ಹರಿಯಿತು. ಆಕಾಶದಲ್ಲಿ ಕಾರ್ಮೋಡ ಕರಗಿ ಧಾರಾಕಾರ ಮಳೆ ಸುರಿಯಲು ಆರಂಭಿಸಿತು. ತಣ್ಣನೆಯ ಗಾಳಿ ವಾತಾವರಣವನ್ನು ತಂಪೇರಿಸಿತು’, ಎಂಬಲ್ಲಿ ಮುಕ್ತಾಯಗೊಂಡಿದೆ.
“ಕಾರ್ಮೋಡ ಕರಗಿದಾಗ ” ಎಂಬ ಈ ಕಾದಂಬರಿಯೊಳಗೆ ಶ್ರೀಮತಿ ರೂಪಕಲಾ ಕೆ ಎಂ ಇವರು ಕೌಟುಂಬಿಕ ಬದುಕು ಹಲವಾರು ಅನಿರೀಕ್ಷಿತ, ನಿರೀಕ್ಷಿತ ಘಟನಾವಳಿಗಳನ್ನು ಎದುರಿಸುತ್ತಲೇ ಬದುಕನ್ನು ಕಟ್ಟಿಕೊಳ್ಳಬೇಕಾಗುತ್ತದೆಂಬುದನ್ನು ಅತ್ಯಂತ ತರ್ಕಬದ್ಧವಾಗಿ ಮತ್ತು ಸಹಜವಾಗಿ ನಿರೂಪಿಸಿದ್ದಾರೆ. ಪಾತ್ರಗಳು, ಸನ್ನಿವೇಶಕ್ಕೆ ತಕ್ಕಂತೆ ಸಂವಾದದೊಳಗಿರುವುದು ಕಂಡು ಬರುತ್ತದೆ. *ಇದೊಂದು ಕಲಾ ನಿರೂಪಣೆಯಾಗಿದೆ.
ಕಾದಂಬರಿಯ ತುಂಬ ಅಲ್ಲಲ್ಲಿ ಮಾತುಕತೆಗಳು, ಅವುಗಳ ಓಘ, ಅವು ನೀಡುವ ಕಾತುರ, ಅನುಭವ್ಯತೆಯೊಂದಿಗೆ ಕತೆಯನ್ನು ಉನ್ನತಕ್ಕೇರಿಸಲು ಸಹಕಾರಿಯಾಗಿವೆ. ಅಂಥ ಒಂದು ಸನ್ನಿವೇಶವನ್ನು ಸಹೃದಯರ ಓದಿಗಾಗಿ ದಾಖಲಿಸಲಾಗಿದೆ.
“ದೇವರು ನಮ್ಮ ಬದುಕನ್ನು ಹಾಳು ಮಾಡಲೆಂದೇ ಬಿರುಗಾಳಿಯನ್ನು ಎಬ್ಬಿಸುವುದಿಲ್ಲ ಆಂಟಿ, ನಮ್ಮ ದಾರಿಯನ್ನು ಸ್ವಚ್ಛಗೊಳಿಸಲೂ ಎಬ್ಬಿಸಿರಬಹುದು ಅಲ್ಲವೇ!?,
ಇದು ಇದೊಂದು ಲೇಖಕಿಯ ಅನುಭವ ಜನ್ಯ ಮಾತು.
ಇಂತಹ ಬಹುವಿಧ ಸಂಭಾಷಣೆ ಗಮನ ಸೆಳೆಯುವುದು.
ಇಂಥಹ ಕಾರಣಗಳಿಂದಲೇ ಕಾದಂಬರಿ ಇಷ್ಟವಾಗುತ್ತ ಸಾಗುವುದು.
ಈ ಕೃತಿ ಬಹುಶಃ ನಾವು ಓದಬೇಕಿಲ್ಲ,ತಾನೇ ಬನ್ನಿ ಎಂದು ಕೈಮಾಡಿ ಬದುಕನ್ನು ತೋರಿಸುತ್ತದೆ.
“ನಮಗೆ ಜೀವನದಲ್ಲಿ ತಾಳ್ಮೆಯಿರಬೇಕು. ತಾಳ್ಮೆ ಇಲ್ಲದಿದ್ದರೆ ಬಿರುಗಾಳಿಗೆ ಕೊಚ್ಚಿ ಹೋಗ್ತೀವಿ ಅಷ್ಟೇ!.”
“ಅದೆಲ್ಲ ಈಗ ಯೋಚಿಸಿ ಫಲವೇನು ಹೇಳಿ? ನಾವು ಮನುಷ್ಯರು ಅನ್ನೋದು ಮರೆಯಬಾರದು. ದ್ವೇಷಕ್ಕೆ ದ್ವೇಷ ಸಾಧಿಸುತ್ತ ಹೋದರೆ ಮಾನವೀಯತೆಗೆ ಬೆಲೆ ಎಲ್ಲಿರುತ್ತೆ ?”
“ಪೂರ್ಣ ಯಾವುದನ್ನೂ ಬಲವಂತವಾಗಿ ಪಡೆಯಬಾರದು, ಕಿತ್ತು ತಿನ್ನುವುದರಲ್ಲಿ ಸುಖ, ತೃಪ್ತಿ ಇರುವುದಿಲ್ಲ”.
“ಅದೆಲ್ಲ ಯೋಚನೆ ಮಾಡಬಾರದು ಆಂಟಿ, ಮನುಷ್ಯ ಜನ್ಮ ಸಿಗೋದೇ ಒಂದು ಅದೃಷ್ಟ. ಅಂತದ್ದರಲ್ಲಿ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಕಷ್ಟ ಪಡೋದು ನೋಡಿಯೂ ಸ್ಪಂದಿಸಿಲ್ಲಾಂದ್ರೆ ಮಾನವೀಯತೆ ಇಲ್ಲ ಅಂತಾನೇ ಅರ್ಥ”
“ಒಬ್ಬರಿಗೆ ಒಬ್ಬರು ಆಗದಿದ್ದರೆ…! ಮನುಷ್ಯನಾಗಿ ಹುಟ್ಟಿದ ಮೇಲೆ ಏನು ಪ್ರಯೋಜನ ಹೇಳಿ. ಏನೋ ಆ ಸಮಯಕ್ಕೆ ನನಗೆ ತೋಚಿದ್ದು ನಾನು ಮಾಡಿದೆ, ಊರವರು ಮೆಚ್ಚಲಿ ಅಂತಲ್ಲ, ದೇವರಿಗೆ ಮೆಚ್ಚುಗೆ ಆದ್ರೆ ಸಾಕು”.
ಇಲ್ಲಿ ಸಾಮಾಜಿಕ ಬದುಕನ್ನು ಅವರು ಪರಿಭಾವಿಸಿ ಅನುಭವಿಸಿದ ರೀತಿ ಕಾದಂಬರಿಯಲ್ಲಿ ಅವಿರ್ಭವಿಸಿದೆ.
“ಕಾರ್ಮೋಡ ಕರಗಿದಾಗ “… ಈ ಕೃತಿಯೊಳಗೆ ಅಮಾನುಷ್ಯನ ನಡುವೆಯೂ ಮಾನವೀಯತೆ ಅಂತಃಕರಣ, ಸಹಾಯ, ಸಹಕಾರಗಳನ್ನು, ತಾಳ್ಮೆ,, ಮಮತೆ, ಸಂಬಂಧ, ಬದ್ಧತೆ, ಸುಖ-ದುಃಖ ಹಂಚಿಕೊಳ್ಳುವ ಗುಣ, ಈ ವಿಶೇಷತೆಗಳೆಲ್ಲವೂ
ಅನಾವರಣಗೊಂಡಿವೆ.
ಇಲ್ಲಿ ಮಾತುಕತೆ ಇದೆ, ಮಾತಿನೊಳಗೆ ಕಾರ್ಮೋಡ ಕರಗಿಸುವ ಕಳಕಳಿ, ಕಾಳಜಿಯೂ ಇದೆ. ಇದೊಂದು ಸರಳ ಶೈಲಿಯ ಮಾನವೀಯ ಗುಣಗಳನ್ನು ಪ್ರತಿಪಾದಿಸುವ ಕೃತಿಯಾಗಿದೆ.
ರೂಪಕಲಾ ಇವರಿಂದ ಇನ್ನೂ ಹೆಚ್ಚೆಚ್ಚು ಹದಗೊಂಡು ಇನ್ನಷ್ಟು ಕೃತಿಗಳು ಹೊರಬರಲಿ.ಎಂದು ಹಾರೈಸೋಣ.
ಕೊಂಡು ಓದುವ ನಮ್ಮ ಸಂಸ್ಕೃತಿ ಮರೆಯದಿರೋಣ.
ಸ.ರಾ.ಸುಳಕೂಡೆ
#೧೩೧೯,ಶ್ರೀ ಶಿವ ಪ್ರಸಾದ ಋ
ರಾಮ ತೀರ್ಥ ನಗರ ಬೆಳಗಾವಿ-೧೫
—————————————————–
