19/07/2026
IMG-20260718-WA0017

ಬೆಳಗಾವಿ-18:ಜಂತರ್ ಮಂತರ್‌ನಿಂದ ಸೋನಂ ವಾಂಗ್‌ಚುಕ್ ಅವರನ್ನು ಬಲವಂತವಾಗಿ ತೆರವುಗೊಳಿಸಿರುವುದನ್ನು ಮತ್ತು ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಎಐಡಿಎಸ್ಓ ನೇತೃತ್ವದಲ್ಲಿ ಶನಿವಾರ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಸಾಹಿತಿಗಳು ಹಾಗೂ ಬಸವರಾಜ್ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಯಲ್ಲಪ್ಪ ಹಿಮ್ಮಡಿ ಮಾತನಾಡಿ, ನೀಟ್ ಪರೀಕ್ಷೆಯಲ್ಲಿ ಆಗಿರುವ ಅಕ್ರಮಗಳನ್ನು ಖಂಡಿಸಿ, ದೇಶದ ಪರಿಸರ ತಜ್ಞ ಹಾಗೂ ಶಿಕ್ಷಕ ಸೋನಂ ವಾಂಗ್‌ಚುಕ್ ಅವರು ಕಳೆದ 20 ದಿನಗಳಿಂದ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಇಲ್ಲಿಯವರೆಗೂ 20 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವುಗಳಿಗೆ ನ್ಯಾಯ ಸಿಗಬೇಕು ಮತ್ತು ದೇಶದ ಶಿಕ್ಷಣ ವ್ಯವಸ್ಥೆ ಉಳಿಯಬೇಕು ಎಂಬ ಕೂಗಿನೊಂದಿಗೆ ಅವರು ಹೋರಾಟ ನಡೆಸಿದ್ದಾರೆ. ಆದರೆ ಸರ್ಕಾರ ಮಾತ್ರ ಕಿಂಚಿತ್ತೂ ಸ್ಪಂದಿಸುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದುವರೆದು, “ಪಂಚೇಂದ್ರಿಯಗಳನ್ನು ಕಳೆದುಕೊಂಡಿರುವ ಕೇಂದ್ರ ಸರ್ಕಾರ ಹೋರಾಟವನ್ನು ಹತ್ತಿಕ್ಕುತ್ತಿದೆ. ಇಲ್ಲಿಯವರೆಗೂ ಹೋರಾಟಗಾರದೊಂದಿಗೆ ಯಾವುದೇ ಸಂವಾದ ನಡೆಸದ ಸರ್ಕಾರ, ವಾಂಗ್ಚುಕ್ ಅವರನ್ನೇ ಹೋರಾಟದ ಸ್ಥಳದಿಂದ ಕರೆದುಕೊಂಡು ಹೋಗಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ!” ಎಂದು ಅವರು ಸರ್ಕಾರವನ್ನು ಖಂಡಿಸಿದರು.

ಎಐಡಿಎಸ್ಓ ಜಿಲ್ಲಾ ಸಂಚಾಲಕರಾದ ಮಹಾಂತೇಶ ಬಿಳೂರ್ ಮಾತನಾಡಿ, “ಭಾರತದ ವಿದ್ಯಾರ್ಥಿ ಸಮುದಾಯವು ಕಳೆದ ಕೆಲವು ತಿಂಗಳುಗಳಿಂದ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ NTA ಯಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದೆ. ನಾವು ಸರ್ಕಾರದಿಂದ ಹೊಣೆಗಾರಿಕೆಯನ್ನು ಆಗ್ರಹಿಸುತ್ತಿದೇವೆ. ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ನೀಡಬೇಕು ಹಾಗೂ NTA ಅನ್ನು ರದ್ದುಗೊಳಿಸಬೇಕೆಂದು ಈ ಹೋರಾಟದ ಬೇಡಿಕೆ. ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡದ ಸರ್ಕಾರವು ಹೊಣೆಗೇಡಿ ಆಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಸೋನಂ ವಾಂಗ್‌ಚುಕ್ ಮತ್ತು ಇತರ ಅನೇಕ ವಿದ್ಯಾರ್ಥಿಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವು ಭಾರತದ ವಿದ್ಯಾರ್ಥಿ ಸಮುದಾಯದಲ್ಲಿ ಬೆಳೆಯುತ್ತಿರುವ ಆಕ್ರೋಶದ ಅಭಿವ್ಯಕ್ತಿಯಾಗಿದೆ. ವಾಂಗ್‌ಚುಕ್ ಅವರ ಕ್ಷೀಣಿಸುತ್ತಿರುವ ಆರೋಗ್ಯವು ಭಾರತದ ಎಲ್ಲಾ ಪ್ರಜ್ಞಾವಂತ ನಾಗರಿಕರಿಗೆ ಕಳವಳದ ಸಂಗತಿಯಾಗಿದೆ. ಪ್ರತಿಭಟನಾಕಾರರ ಬೇಡಿಕೆಗಳಿಗೆ ಕಿವಿಗೊಡದೆ ಮತ್ತು ಅವರೊಂದಿಗೆ ಸಂವಾದವನ್ನು ಆರಂಭಿಸದೆ, ಅವರನ್ನು ಪ್ರತಿಭಟನಾ ಸ್ಥಳದಿಂದ ಬಲವಂತವಾಗಿ ತೆರವುಗೊಳಿಸಿರುವುದು ಕೇವಲ ಪ್ರಜಾಪ್ರಭುತ್ವ ವಿರೋಧಿ ಮಾತ್ರವಲ್ಲ, ಇದು ಸರ್ಕಾರವು ತನ್ನ ನಾಗರಿಕರ ಬಗ್ಗೆ ಹೊಂದಿರುವ ನಿರಂಕುಶ ಮತ್ತು ಅಮಾನವೀಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಪೊಲೀಸ್ ಆಡಳಿತದ ಈ ಕ್ರಮವನ್ನು AIDSO ತೀವ್ರವಾಗಿ ವಿರೋಧಿಸುತ್ತದೆ ಹಾಗೂ ಭಾರತದ ನಾಗರಿಕರಿಗೆ ಮತ್ತು ವಿಶೇಷವಾಗಿ ವಿದ್ಯಾರ್ಥಿ ಸಮುದಾಯಕ್ಕೆ ಧೈರ್ಯದಿಂದ ಮುಂದೆ ಬಂದು ಪ್ರಸ್ತುತ ನಡೆಯುತ್ತಿರುವ ಚಳುವಳಿಯನ್ನು ತೀವ್ರಗೊಳಿಸಲು ಕರೆ ನೀಡುತ್ತದೆ. ಹೋರಾಟದ ಧ್ವನಿಗಳನ್ನು ಹತ್ತಿಕ್ಕುವುದನ್ನು ನಿಲ್ಲಿಸಿ, ಸೋನಂ ವಾಂಗ್‌ಚುಕ್ ಮತ್ತು ಪ್ರತಿಭಟನಾಕಾರರೊಂದಿಗೆ ತಕ್ಷಣ ಸಂವಾದವನ್ನು ಆರಂಭಿಸಬೇಕು” ಎಂದು ಆಗ್ರಹಿಸಿದರು.

ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿಗೆ ತೆರಳಿ, ಕೂಡಲೇ ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿ ಹೋರಾಟಗಾರರ ಬೇಡಿಕೆಗಳನ್ನು ಆಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಆಗ್ರಹಿಸಿರುವ ಹೋರಾಟದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಎಸ್ ಜಿ ಚಿಕ್ಕನರಗುಂದ, ಹಿರಿಯ ಹೋರಾಟಗಾರರಾದ ಶ್ರೀ ಜಿ ವಿ ಕುಲಕರ್ಣಿ, ಡಾ. ಕೆ ಎಸ್ ಜನಾರ್ಧನ, ಶ್ರೀ ಎಚ್ಎಸ್ ದುಂಡಿ , ವಿದ್ಯಾರ್ಥಿಗಳಾದ ಅಂಕುಶ್ ಪಾಟೀಲ್, ಗಜಾನಂದ, ಅಶ್ವಿನಿ ಯಕ್ಕಮ್ಮವರ, ಭೂಮಿಕಾ ರಾಥೋಡ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!