ಬೆಳಗಾವಿ-18: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಶೂ ಭಾಗ್ಯ’ ಯೋಜನೆಯಡಿ 2026-27ನೇ ಸಾಲಿನ ಶೂ ಮತ್ತು ಸಾಕ್ಸ್ ಪೂರೈಕೆಯ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಅಖಿಲ ಕರ್ನಾಟಕ ಚರ್ಮಕಾರ ಸಮಾಜ ಮಹಾ ಒಕ್ಕೂಟ, ಸ್ಥಳೀಯ ಉದ್ಯಮಿಗಳಿಗೆ ಅನ್ಯಾಯವಾಗಿದ್ದು, ಟೆಂಡರ್ ರದ್ದುಗೊಳಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಶುಕ್ರವಾರ ಸುದ್ಧಿಗೋಷ್ಠಿ ಯಲ್ಲಿ ಅನಿಲ್ ಸೌದಾಗರ ಹಾಗೂ
ಪ್ರೇಮಾ ಭಂಡಾರೆ, ಮಾತನಾಡಿ,
ರಾಜ್ಯದ 36.56 ಲಕ್ಷ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ ಪೂರೈಸಲು ಅಂದಾಜು 104 ಕೋಟಿ ರೂಪಾಯಿ ಮೊತ್ತದ ಟೆಂಡರ್ ಅನ್ನು ದೆಹಲಿ ಮೂಲದ ಖಾಸಗಿ ಕಂಪನಿಗೆ ನೀಡಲಾಗಿದೆ ಎಂದು ಆರೋಪಿಸಿದರು. ಇದರಿಂದ ಕರ್ನಾಟಕದ ಲಕ್ಷಾಂತರ ಚರ್ಮೋದ್ಯಮಿಗಳು, ಪಾದರಕ್ಷೆ ವ್ಯಾಪಾರಿಗಳು ಹಾಗೂ ಕಾರ್ಮಿಕರ ಬದುಕಿಗೆ ಸಂಕಷ್ಟ ಎದುರಾಗಲಿದೆ ಎಂದು ಅವರು ಹೇಳಿದರು.
ಕಳೆದ ಹತ್ತು ವರ್ಷಗಳಿಂದ ಈ ಯೋಜನೆಯನ್ನು ಶಾಲೆಗಳ ಎಸ್‌ಡಿಎಂಸಿ, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸ್ಥಳೀಯ ಮಟ್ಟದಲ್ಲೇ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿತ್ತು. ಆದರೆ ಈ ಬಾರಿ ಟೆಂಡರ್‌ನಲ್ಲಿ ಭಾಗವಹಿಸಲು 500 ಕೋಟಿ ರೂಪಾಯಿ ವಹಿವಾಟು (ಟರ್ನ್‌ಓವರ್) ಹಾಗೂ 3 ಕೋಟಿ ರೂಪಾಯಿ ಇಎಂಡಿ (EMD) ಕಡ್ಡಾಯಗೊಳಿಸಿರುವುದು ಸ್ಥಳೀಯ ಉದ್ಯಮಿಗಳನ್ನು ಹೊರಗಿಡುವ ಉದ್ದೇಶದಿಂದಲೇ ಎಂದು ಒಕ್ಕೂಟ ಆರೋಪಿಸಿದೆ.
ಕಾಂಗ್ರೆಸ್ ಸರ್ಕಾರವು ದಲಿತರು, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಪರ ಎಂದು ಹೇಳಿಕೊಳ್ಳುತ್ತಿದ್ದರೂ, ವಾಸ್ತವದಲ್ಲಿ ಸ್ಥಳೀಯ ಉದ್ಯಮಿಗಳ ಹಿತಾಸಕ್ತಿಗೆ ಧಕ್ಕೆ ತಂದಿದೆ ಎಂದು ಮುಖಂಡರು ವಾಗ್ದಾಳಿ ನಡೆಸಿದರು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಕುರಿತು ನೈತಿಕ ಹೊಣೆ ಹೊತ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶೂಗಳ ಅಳತೆ, ಗುಣಮಟ್ಟ ಪರಿಶೀಲನೆ ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ ಶಿಕ್ಷಕರ ಸಮಯ ವ್ಯರ್ಥವಾಗುತ್ತಿದ್ದು, ವಿದ್ಯಾರ್ಥಿಗಳ ಶಿಕ್ಷಣದ ಮೇಲೂ ಪರಿಣಾಮ ಬೀರುತ್ತಿದೆ. ಸರ್ಕಾರಿ ಶಾಲೆಗಳ ಮೇಲಿನ ಸಾರ್ವಜನಿಕರ ವಿಶ್ವಾಸ ಕುಸಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಒಕ್ಕೂಟ ಕಳವಳ ವ್ಯಕ್ತಪಡಿಸಿತು.
ಈ ಕುರಿತು ಈಗಾಗಲೇ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು, ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ ಒಕ್ಕೂಟ, ಟೆಂಡರ್ ಅನ್ನು ತಕ್ಷಣ ರದ್ದುಗೊಳಿಸಿ ಹಳೆಯ ಮಾದರಿಯಂತೆ ಸ್ಥಳೀಯ ಸಂಸ್ಥೆಗಳು ಅಥವಾ ಜಿಲ್ಲಾವಾರು ಟೆಂಡರ್ ಮೂಲಕ ಕನ್ನಡಿಗ ಉದ್ಯಮಿಗಳಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿತು.
ಬೇಡಿಕೆ ಈಡೇರಿಸದಿದ್ದರೆ ಶ್ರೀ ಶಿವಶರಣ ಹರಳಯ್ಯ ಚರ್ಮ ಉತ್ಪಾದಕರ ಸಹಕಾರಿ ಸಂಘ ಹಾಗೂ ಬೆಳಗಾವಿ ಜಿಲ್ಲಾ ಫುಟ್‌ವೇರ್ ವ್ಯಾಪಾರಸ್ಥರ ಮಹಾ ಒಕ್ಕೂಟದ ಸಹಯೋಗದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಒಕ್ಕೂಟ ಎಚ್ಚರಿಕೆ ನೀಡಿದೆ.
ಈ ವೇಳೆ ಅನೀಲ್ ಸೌದಾಗರ್,ಶಿವಾನಂದ ಸೌದಾಗರ್, ಪ್ರೇಮಾ ಭಂಡಾರೆ, ನತಫಥ್ ರಜಪೂತ,ಲತಾ ಮಾಣೆ, ಅಕ್ಬರ್ ಪಚ್ಚಾಪೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
