21/05/2026
IMG-20260521-WA0031

ಬೆಳಗಾವಿ-21: ಆನ್‌ಲೈನ್‌ ಔಷಧಗಳ ಮಾರಾಟ ಜಾಲವನ್ನು ಬಂದ್ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಔಷಧ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘ, ರಿಟೇಲ್ ಫಾರ್ಮಸಿ ಅಸೋಸಿಯೇಷನ್ ಹಾಗೂ ವಿವಿಧ ಸಂಘಟನೆಗಳ ಮುಖಂಡರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಜಮಾವಣೆಗೊಂಡು ಪ್ರತಿಭಟನಕಾರರು ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಡಿಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಸಂಜೆಯವರೆಗೆ ಧರಣಿ ನಡೆಸಿ, ಆನ್‌ಲೈನ್‌ ಫಾರ್ಮಸಿಗಳ ವಿರುದ್ಧ ಘೋಷಣೆ ಕೂಗಿದರು.

“ಆನ್‌ಲೈನ್‌ನಲ್ಲಿ ಯಾವುದೇ ನಿಯಂತ್ರಣವಿಲ್ಲದೆ ಔಷಧಗಳ ಮಾರಾಟ ನಡೆಯುತ್ತಿದೆ. ಆ್ಯಂಟಿಬಯೊಟಿಕ್ ಹಾಗೂ ವ್ಯಸನಕಾರಿ ಔಷಧಗಳ ದುರುಪಯೋಗ ಹೆಚ್ಚುತ್ತಿದೆ. ನಕಲಿ ಔಷಧ ಚೀಟಿಗಳ ಬಳಕೆ ಹೆಚ್ಚಳವಾಗಿದ್ದು, ಯುವಕರು ಡ್ರಗ್ಸ್‌ಗೆ ದಾಸರಾಗುತ್ತಿದ್ದಾರೆ” ಎಂದು ಪ್ರತಿಭಟನಕಾರರು ಆರೋಪಿಸಿದರು.

“ಜೀವರಕ್ಷಕ ಔಷಧಿಗಳ ಮೇಲೂ ಅತಿಯಾದ ರಿಯಾಯಿತಿ ನೀಡಲಾಗುತ್ತಿದೆ. ಇದರಿಂದ ಸಣ್ಣಪುಟ್ಟ ಔಷಧ ಅಂಗಡಿಗಳು ಮುಚ್ಚುವ ಹಂತಕ್ಕೆ ತಲುಪಿವೆ. ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಆದ್ದರಿಂದ ಆನ್‌ಲೈನ್‌ ಔಷಧ ವ್ಯಾಪಾರವನ್ನು ಬಂದ್ ಮಾಡಬೇಕು. ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧ ಸರಬರಾಜು ಆಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಬಂಡು ಸದಲಗೆ, ಕಾರ್ಯದರ್ಶಿ ಸುಧೀರ ನಂಜಣ್ಣವರ ಹಾಗೂ ಖಜಾಂಚಿ ನಿತಿನ್ ಝನ್ವರ್ ನೇತೃತ್ವ ವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!