
ಬೆಳಗಾವಿ-19: ಕುಂದಾನಗರಿ ಬೆಳಗಾವಿಯ ರೈಲ್ವೆ ಪ್ರಯಾಣಿಕರ ದಶಕಗಳ ಕನಸು ಕೊನೆಗೂ ನನಸಾಗಿದೆ. ಬೆಳಗಾವಿ ರೈಲು ನಿಲ್ದಾಣದಲ್ಲಿ ಸೋಮವಾರ ಮಧ್ಯಾಹ್ನ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ಅವರು ಬೆಳಗಾವಿ – ಸಿಕಂದರಾಬಾದ್ ನೂತನ ಸಾಪ್ತಾಹಿಕ ರೈಲು ಸೇವೆಗೆ ಹಸಿರು ನಿಶಾನೆ ತೋರುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.
ಬೆಳಗಾವಿ ರೈಲು ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ಸಂಸದ ಜಗದೀಶ್ ಶೆಟ್ಟರ್ ಅವರು ನೂತನ ರೈಲಿಗೆ ಹಸಿರು ನಿಶಾನೆ ತೋರಿದರು.
ಬಳಿಕ ಮಾತನಾಡಿದ ಅವರು, ಬೆಳಗಾವಿಯಿಂದ ಹೈದರಾಬಾದ್ ಹಾಗೂ ಸಿಕಂದರಾಬಾದ್ ಸೇರಿದಂತೆ ಒಟ್ಟು ಮೂರು ಹೊಸ ರೈಲುಗಳ ಸೇವೆ ಆರಂಭಗೊಳ್ಳುತ್ತಿದ್ದು, ಇವು ವಾರಕ್ಕೆ ಮೂರು ಬಾರಿ ಸಂಚರಿಸಲಿವೆ ಎಂದರು. ಕಳೆದ ಎರಡು ವರ್ಷಗಳಿಂದ ಈ ರೈಲು ಸೇವೆಗಳಿಗಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿತ್ತು. ಇದೀಗ ಬೆಳಗಾವಿ ಜನರ ಕೂಗಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅವರಿಗೆ ಬೆಳಗಾವಿ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಶೆಟ್ಟರ್ ತಿಳಿಸಿದರು.
ಈಗಾಗಲೇ ಬೆಳಗಾವಿ- ಬೆಂಗಳೂರು ವಂದೇ ಭಾರತ ರೈಲು ಸೇವೆ ಯಶಸ್ವಿಯಾಗಿ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಬೆಂಗಳೂರಿನಿಂದ ಮುಂಬೈಗೆ ತೆರಳುವ ಹೈಸ್ಪೀಡ್ ರೈಲಿಗೂ ಚಾಲನೆ ಸಿಕ್ಕಿರುವುದು ಈ ಭಾಗದ ಜನರಿಗೆ ಮತ್ತಷ್ಟು ಅನುಕೂಲಕರವಾಗಲಿದೆ. ಮುಂಬರುವ ದಿನಗಳಲ್ಲಿ ಬೆಳಗಾವಿಯಿಂದ ಚನ್ನೈ ಹಾಗೂ ತಿರುಪತಿ ರೈಲು ಸೇವೆಗಳನ್ನು ಆರಂಭಿಸಲು ಪ್ರಾಮಾಣಿಕ ಪ್ರಯತ್ನ ಮುಂದುವರಿಸಲಾಗುವುದು ಎಂದು ಭರವಸೆ ನೀಡಿದರು.
ಮಂಗಳವಾರ ಬೆಳಗಾವಿ ರೈಲು ನಿಲ್ದಾಣದಲ್ಲಿ ರೈಲು ಸಂಖ್ಯೆ 17074 ಬೆಳಗಾವಿ–ಸಿಕಂದರಾಬಾದ್ ವಾರಾಂತ್ಯ ಎಕ್ಸ್‌ಪ್ರೆಸ್ ರೈಲಿಗೆ ಸೇವೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗೌರವಾನ್ವಿತ ಶ್ರೀ ಜಗದೀಶ ಶೆಟ್ಟರ ಅವರು, ಈ ಹೊಸ ರೈಲು ಸೇವೆಯಿಂದ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ನಡುವಿನ ರೈಲು ಸಂಪರ್ಕ ಮತ್ತಷ್ಟು ಬಲಪಡಲಿದ್ದು, ಪರಸ್ಪರ ಆರ್ಥಿಕ ಬಲವರ್ಧನೆಗೂ ಸಹಕಾರಿಯಾಗುವುದರೊಂದಿಗೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
ಇಂದು ಉದ್ಘಾಟನೆಗೊಂಡ ಸಂಖ್ಯೆ 17074 ಬೆಳಗಾವಿ–ಸಿಕಂದರಾಬಾದ್ ವಾರಾಂತ್ಯ ಎಕ್ಸ್‌ಪ್ರೆಸ್ ರೈಲು ಇಂದಿನಿಂದ ನಿಯಮಿತ ಸಂಚಾರ ಆರಂಭಿಸಲಿದೆ. ರೈಲು ಪ್ರತಿ ಮಂಗಳವಾರ ಮಧ್ಯಾಹ್ನ 01:00 ಗಂಟೆಗೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಿಗ್ಗೆ 07:15 ಗಂಟೆಗೆ ಸಿಕಂದರಾಬಾದ್ ತಲುಪಲಿದೆ. ಮರಳಿ ರೈಲು ಸಂಖ್ಯೆ 17073 ಸಿಕಂದರಾಬಾದ್–ಬೆಳಗಾವಿ ವಾರಾಂತ್ಯ ಎಕ್ಸ್‌ಪ್ರೆಸ್ ಪ್ರತಿ ಸೋಮವಾರ ಸಿಕಂದರಾಬಾದ್‌ನಿಂದ 04:30 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 10:30 ಗಂಟೆಗೆ ಬೆಳಗಾವಿಗೆ ತಲುಪಲಿದೆ.
ಈ ಚಾಲನಾ ಸಮಾರಂಭದಲ್ಲಿ ಗೌರವಾನ್ವಿತ ಶಾಸಕರಾದ ಶ್ರೀ ಅಭಯ ಪಾಟೀಲ ಹಾಗೂ ಮಾಜಿ ಶಾಸಕ ಅನೀಲ ಬೆನಕೆ , ವಿಭಾಗೀಯ ರೈಲ್ವೆ ಹೆಚ್ಚುವರಿ ವ್ಯವಸ್ಥಾಪಕರಾದ ಪ್ರೇಮಚಂದ್ರ ಹಾಗೂ ಹಿರಿಯ ರೈಲ್ವೆ ಅಧಿಕಾರಿಗಳು ಹಾಜರಿದ್ದರು.
