18/05/2026



ಬೆಳಗಾವಿ-17 : ವಿಮಾನ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಟರ್ಮಿನಲ್ ಕಾಮಗಾರಿ ಜುಲೈ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಆಗಸ್ಟ್-ಸಪ್ಟಂಬರ್ ಮಧ್ಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ನಾಗರಿಕರ ವಿಮಾನಯಾನ ಸಚಿವರಿಂದ ವರ್ಚ್ಯುವಲ್ ಮೂಲಕ ಉದ್ಘಾಟನೆಗೊಳಿಸಲು ಪ್ರಯತ್ನಿಸಲಾಗುವುದು ಎದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ನೂತನ ಟರ್ಮಿನಲ್ ಕಾಮಗಾರಿ ಪರಿಶೀಲಿಸಿದ ಬಳಿಕ ವಿಮಾನ ನಿಲ್ದಾಣ ಸಲಹಾ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿ ಮನಾತನಾಡಿದ ಅವರು, ನೂತನ ಟರ್ಮಿನಲ್ ಕಮಲ ಬಸದಿ ಮಾದರಿಯಲ್ಲಿ ಆಗುತ್ತಿದೆ. ಮುಖ್ಯ ರಸ್ತೆ ಚತುಷ್ಪಥ ಆಗಲಿದ್ದು ಜತೆಗೆ ಅಲಿಂದ ತಿರುವು ಪಡೆಯುವಾಗಿನ ಪ್ರಮುಖ ರಸ್ತೆಯ ಪ್ರವೇಶ ದ್ವಾರವನ್ನೂ ಆಕರ್ಷವಾಗಿ ಮಾಡಲು ನಿರ್ಧರಿಸಿದ್ದೇವೆ. ಇದಕ್ಕೆ ಸಂಬಂಧಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದರು.
ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ ಎಸಿ ಬಸ್ ಸೌಲಭ್ಯವಿದೆ. ಅದನ್ನು ಇಲ್ಲೂ ಕೊಡಿ ಎಂದು ವಿಮಾನ ನಿಲ್ದಾಣದ ನಿರ್ದೇಶಕರಿಂದ ಕೇಳಿದ್ದಾರೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸುವಿಕೆ, ಪ್ರತ್ಯೇಕ ಕಾರ್ಗೋ ಸೌಲಭ್ಯ ಒದಗಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವೂ ಪತ್ರ ಬರೆದು ಕೇಳಿದ ಈ ವಿಚಾರ ಸೇರಿದಂತೆ ಉಡಾನ್ ಯೋಜನೆ ಮರಳಿ ಆರಂಭಿಸುವಂತೆಯೂ ಪ್ರಧಾನಿಗಳ ಗಮನಕ್ಕೆ ತಂದಿದ್ದೇನೆ. ಈಗಾಗಲೇ ನನ್ನ ಮನವಿ ಮೇರೆಗೆ ಇಂಡಿಗೋದವರು ಬೆಳಗಾವಿ-ನವೀ ಮುಂಬೈಗೆ ವಿಮಾನ ಆರಂಭಿಸಿದ್ದಾರೆ. ಮುಂಬೈಗೆ ಸ್ಟಾರ್ ಏರ್ ವಿಮಾನ ಮತ್ತೇ ಆರಂಭವಾಗಿದೆ. ಆದರೆ ಅಧದಷ್ಟು ಮಾತ್ರ ಪ್ರಯಾಣಿಕರು ಭರ್ತಿಯಾಗುತ್ತಿದ್ದಾರೆ. ಆದರೆ ದೆಹಲಿ, ಬೆಂಗಳೂರು ವಿಮಾನಗಳು ಶೇ.90ರಷ್ಟು ಭರ್ತಿಯಾಗಿ ಚೆನ್ನಾಗಿ ನಡೆದಿದೆ. ಮುಂದೆ ಅಹಮದಾಬಾದ್, ಜೋಧಪುರ್, ಚೆನ್ನೈ ಹಾಗೂ ಪುಣೆಗೆ ಸಂಪರ್ಕ ಕಲ್ಪಿಸುವ ಬೇಡಿಕೆ ಇದ್ದು, ಇಂಡಿಗೋ ಸಂಸ್ಥೆ ಸಮೀಕ್ಷೆ ನಡೆಸುತ್ತಿದೆ. ಹುಬ್ಬಳ್ಳಿಯಲ್ಲಿ ಸೇವೆ ನೀಡುತ್ತಿರುವ ಫ್ಲೈ 91 ಸಂಸ್ಥೆಯವರಿಗೂ ಇಲ್ಲೂ ಆರಂಭಿಸಿ ಎಂದು ಪತ್ರ ಬರೆದು ಕೇಳಿಕೊಂಡಿದ್ದೇನೆ ಎಂದರು.
ನಿಲ್ದಾಣದ ರನ್ವೇ ವಿಸ್ತರಣೆ, ಪ್ಯಾರಲಲ್ ಟ್ಯಾಕ್ಸಿ ಟ್ರ್ಯಾಕ್, ಸುರಕ್ಷತಾ ವ್ಯವಸ್ಥೆಗಳ ಅಭಿವೃದ್ಧಿಗೆ ಸುಮಾರು 15 ಎಕೆರೆ ಜಮೀನು ಅಗತ್ಯವಿದೆ. ಅದು ಭಾರತೀಯ ವಾಯು ಸೇನೆ ಅಧೀನದಲ್ಲಿದ್ದು, ನಮಗೆ ಹಸ್ತಾಂತರ ವಿಳಂಬವಾಗುತ್ತಿರುವುದರಿಂದ ಈ ಕಾಮಗಾರಿ ಆರಂಭಗೊಂಡಿಲ್ಲ. ವಾಯುಸೇನೆ ಅಧಿಕಾರಿಗಳು ಪ್ರತ್ಯೇಕ ಸಭೆ ಮಾಡಿ ತಿಳುಸವುದಾಗಿ ಸಭೆಗೆ ಹೇಳಿದ್ದಾರೆ. ಉಳಿದಂತೆ ನಿಲ್ದಾಣ ವಿಸ್ತರಣೆಗೆ 72 ಎಕರೆ ಜಾಗದ ಪ್ರಸ್ತಾವನೆ ಜಿಲ್ಲಾಡಳಿತದಿಂದ ಕರ್ನಾಟಕ ಸರ್ಕಾರಕ್ಕೆ ರವಾನಿಸಲಾಗಿದೆ. ಅನುಮೋದನೆಗಾಗಿ ಕಾಯುತ್ತಿದ್ದೇವೆ ಎಂದರು.

ಈ ವೇಳೆ ಸಲಹಾ ಸಮಿತಿ ಸದಸ್ಯರಾ ರಾಜು ದೇಸಾಯಿ, ಸ್ನೇಹಲ್ ಕೋಲೆಕಾರ, ಜಯಸಿಂಗ ರಜಪುತ, ವಿಜಯ ಭದ್ರಾ, ರಾಹುಲ ಮುಚ್ಚಂಡಿ, ಹನುಮಂತ ಕಾಗಲಕರ, ಸಭೆಯಲ್ಲಿ ವಿಮಾನ ನಿಲ್ದಾಣ ನಿರ್ದೇಶಕ ಎಸ್.ತ್ಯಾಗರಾಜನ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!