
ಬೆಳಗಾವಿ-16: ಸುಮಾರು 17 ರಿಂದ 30 ವರ್ಷಗಳ ಕಾಲ ಸತತ ಭಾರತಮಾತೆಯ ಸೇವೆ ಸಲ್ಲಿಸಿ ನಿವೃತ್ತರಾಗಿ ಭಿನ್ನ ಭಿನ್ನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು ಕೂಡ ಸ್ಪರ್ಧಾ ಮನೋಭಾವನೆಯನ್ನು ಇಟ್ಟುಕೊಂಡು ಸ್ಪೂರ್ತಿಯನ್ನು ತುಂಬಿಕೊಂಡು ಕ್ರಿಕೆಟ್ ಮೈದಾನಕ್ಕೆ ಇಳಿಯಲಿದ್ದೇವೆ ಎಂದು ಬೆಳಗಾವಿ ಜಿಲ್ಲೆ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟದ ಜಿಲ್ಲಾಧ್ಯಕ್ಷ ಜಗದೀಶ ಪೂಜೇರಿ ತಿಳಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಗ್ರಾಮದಲ್ಲಿ ಬಸವೇಶ್ವರ ಯುವಕ ಮಂಡಳದ ವತಿಯಿಂದ ಆಯೋಜಿಸಿರುವ ಹರ್ಷ ಶುಗರ್ಸ ಪಂದ್ಯಾವಳಿಯಲ್ಲಿ ನಿವೃತ್ತ ಸೈನಿಕರ ತಂಡ ಭಾಗವಹಿಸಲಿದೆ. ದೇಶ ಸೇವೆಗೆ ತಮ್ಮನ್ನು ತಾವು ತೊಡಿಸಿಕೊಂಡು ದೇಶದ ಭಿನ್ನ-ಭಿನ್ನ ಭಾಗಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಹಲವಾರು ಇಲಾಖೆಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರತರಾಗಿದ್ದು ಸೈನಿಕರೆಂದರೆ ಸ್ಪೂರ್ತಿ ಶಿಸ್ತನ್ನು ತುಂಬಿಕೊಂಡಿರುವ ಇವರು ವಯಸ್ಸಿನ ಲೆಕ್ಕಾಚಾರ ಮಾಡದೆ ಯುವ ಜನತೆಗೆ ಸ್ಪೂರ್ತಿಯಾಗುವಂತೆ ಬಿಳಿ ಹಾಗೂ ನೀಲಿ ಬಣ್ಣದ ಜರ್ಸಿಯಲ್ಲಿ ಮೈದಾನಕ್ಕಿಳಿಯಲಿದ್ದಾರೆ.
ಭಾನುವಾರ ಮುಂಜಾನೆ 9 ಗಂಟೆಗೆ ಮಾಜಿ ಸೈನಿಕರ ತಂಡದ ಮೊದಲ ಪಂದ್ಯಾವಳಿ ಹಿರೇಬಾಗೇವಾಡಿ ಕರ್ನಾಟಕ ಸಂಯುಕ್ತ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಸ್ಥಳೀಯ ಎಲ್ಲ ಮಾಜಿ ಸೈನಿಕರು ಬೆಳಗಾವಿ ಜಿಲ್ಲೆ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟದ ಪದಾಧಿಕಾರಿಗಳು ಅಪಾರ ಸಂಖ್ಯೆಯ ಬೆಂಬಲಿಗರು ಈ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದಾರೆ.
