15/05/2026


ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ನಿರ್ಣಯ ಕೈಗೊಳ್ಳಲು ಒತ್ತಾಯಿಸಿ ಪ್ರತಿಭಟನೆಯ ವೇಳೆ 15ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧಿಸಿದ ಬಳಿಕ ಬಿಡುಗಡೆ.
ಬೆಳಗಾವಿ-14 :ಬುಧವಾರ ಮಹಾನಗರ ಪಾಲಿಕೆ ಎದುರು ನಡೆದ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ, “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ನಿರ್ಣಯವನ್ನು ಮಹಾನಗರ ಪಾಲಿಕೆಯಲ್ಲಿ ಒಮ್ಮತದಿಂದ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಉಗ್ರ ಪತಿಭಟನೆಯನ್ನು ನಡೆಸಿದರು.
ಬುಧವಾರ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾನಗರ ಪಾಲಿಕೆ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಮಾರು 30ರಿಂದ 40 ಜನ ಭಾಗವಹಿಸಿ ಕನ್ನಡಪರ ಘೋಷಣೆ ಕೂಗಿ ಪ್ರತಿಭಟಿಸಿದರು, ಕರವೇ ಜಿಲ್ಲಾಅಧ್ಯಕ್ಷ ವಾಜೀದ್ ಹಿರೇಕುಡಿ (ಕರವೇ ಶಿವರಾಮೇಗೌಡ ಬಣ ಜಿಲ್ಲಾಧ್ಯಕ್ಷ), ಬಲರಾಮ್ ಮಾಸಿನಟ್ಟಿ (ಗಡಿನಾಡು ಕನ್ನಡಿಗರ ಸೇನೆ ರಾಜ್ಯಾಧ್ಯಕ್ಷ), ಬಾಲಪ್ಪ ಗುಡಗನಟ್ಟಿ (ಕರವೇ ಯುವ ಸೈನ್ಯ), ಈಶ್ವರ್ ಗೌಡ ಪಾಟೀಲ್ (ಕರವೇ ಸ್ವಾಭಿಮಾನಿ ಬಳಗ) ಹಾಗೂ ಶ್ರೀನಿವಾಸ್ ತಾಲೂಕರ (ಸರ್ವೋದಯ ಸಂಘಟನೆ ಅಧ್ಯಕ್ಷ) ನೇತೃತ್ವ ವಹಿಸಿದ್ದರು.
ಮಹಾಜನ ವರದಿಯೇ ಅಂತಿಮ ಪ್ರತಿಭಟನಾಕಾರರ ಆಗ್ರಹ : ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದದ ಕುರಿತು ಕರ್ನಾಟಕ ಸರ್ಕಾರದ ಅಚಲ ನಿಲುವಿನಂತೆ “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ನಿರ್ಣಯವನ್ನು ಪಾಲಿಕೆ ಸಭೆಯಲ್ಲಿ ತಕ್ಷಣ ಕೈಗೊಳ್ಳಬೇಕು ಎಂದು ಪತ್ರಿಟನೆಯಲ್ಲಿ ಒತ್ತಾಯಿಸಿದರು.
ಗಡಿಭಾಗದಲ್ಲಿ ಎಂಇಎಸ್ ಹಾಗೂ ಮರಾಠಿ ಪರ ಸಂಘಟನೆಗಳು ರಾಜಕೀಯ ಅಸ್ತಿತ್ವಕ್ಕಾಗಿ ನಿರಂತರವಾಗಿ ಗಡಿ ವಿವಾದವನ್ನು ಕೆದಕುತ್ತಿದ್ದು, ಇದರಿಂದ ಅಭಿವೃದ್ಧಿಗೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿದರು. ಮಹಾಜನ ವರದಿಯೇ ಅಂತಿಮ ಎಂಬ ನಿಲುವನ್ನು ಮಹಾನಗರ ಪಾಲಿಕೆ ಅಧಿಕೃತ ನಿರ್ಣಯದ ಮೂಲಕ ಪುನರುಚ್ಚರಿಸಬೇಕು ಎಂದು ಆಗ್ರಹಿಸಿದರು.
ಮಹಾಪೌರರ ಭೇಟಿ, ಚರ್ಚೆಗೆ ಭರವಸೆ : ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಮಹಾಪೌರರು ಹಾಗೂ ಉಪಮಹಾಪೌರರು ಆಗಮಿಸಿ ಪ್ರತಿಭಟನಾಕಾರರ ಮನವಿಯನ್ನು ಆಲಿಸಿದರು. ಈ ವಿಷಯವನ್ನು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕನ್ನಡಪರ ಸಂಘಟನೆಗಳು ಸಭಾಂಗಣಕ್ಕೆ ನುಗ್ಗಲು ಯತ್ನ: ಇದೇ ವೇಳೆ, ಸರ್ವೋದಯ ಸಂಘಟನೆ ಅಧ್ಯಕ್ಷ ಶ್ರೀನಿವಾಸ್ ತಾಲೂಕರ ಅವರು ತಮ್ಮ ಮುಖವನ್ನು ಮರೆಮಾಚಿಕೊಂಡು ಮಹಾನಗರ ಪಾಲಿಕೆಯ ಸಾರ್ವಜನಿಕ ಶೌಚಾಲಯದಲ್ಲಿ ಅಡಗಿ ಕುಳಿತಿದ್ದರು ಎನ್ನಲಾಗಿದೆ. ಬಳಿಕ ದಿಢೀರನೆ ಘೋಷಣೆಗಳನ್ನು ಕೂಗುತ್ತಾ ಪಾಲಿಕೆ ಪರಿಷತ್ ಸಭಾಂಗಣದೊಳಗೆ ನುಗ್ಗಲು ಯತ್ನಿಸಿದ ವೇಳೆ ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದು ಪ್ರತಿಭಟನಾ ಸ್ಥಳಕ್ಕೆ ಕರೆತಂದರು.
ನಗರಸೇವಕರ ಮನವೊಲಿಕೆ ವಿಫಲ : ಪ್ರತಿಭಟನಾಕಾರರನ್ನು ಮನವೊಲಿಸಲು ಬಿಜೆಪಿ ನಗರಸೇವಕ ರಾಜಶೇಖರ್ ಡೋಣಿ, ಕಾಂಗ್ರೆಸ್ ನಗರಸೇವಕ ಅಜೀಂ ಪಟವೇಗಾರ ಹಾಗೂ ನಾಮ ನಿರ್ದೇಶಿತ ಸದಸ್ಯ ರಮೇಶ್ ಸೊಂಟಕ್ಕೆ ಆಗಮಿಸಿದರು. ಮಹಾಪೌರರು ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಗೆ ಪತ್ರ ಬರೆಯಲಿದ್ದು, ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆದರೆ ಪ್ರತಿಭಟನಾಕಾರರು, “2005 ರಲ್ಲಿಯೂ ಗಡಿ ವಿವಾದ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿದ್ದಾಗ ಎಂಇಎಸ್ ತಮ್ಮ ನಿಲುವು ಮಂಡಿಸಿತ್ತು. ಈಗಲೂ ಮಹಾನಗರ ಪಾಲಿಕೆಗೆ ನಿರ್ಣಯ ಕೈಗೊಳ್ಳುವ ಅಧಿಕಾರವಿದೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಪಾಲಿಕೆ ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು” ಎಂದು ಪಟ್ಟು ಹಿಡಿದರು.
ಮಳೆ ನಡುವೆ ಉದ್ವಿಗ್ನತೆ : ಮಳೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಮಹಾನಗರ ಪಾಲಿಕೆ ಒಳಗೆ ತೆರಳುವುದಾಗಿ ತಿಳಿಸಿದಾಗ, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸುಮಾರು 15ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕೆಎಸ್ಆರ್ಪಿ ವಾಹನದಲ್ಲಿ ಪೊಲೀಸ್ ಹೆಡ್ಕ್ವಾರ್ಟರ್ಸ್ಗೆ ಕರೆದೊಯ್ದರು.
ಪ್ರತಿಭಟನೆಯ ವೇಳೆ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರೂ, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು.
ಈ ಸಂಧರ್ಭದಲ್ಲಿ ಕರವೇ ಹಲವು ಕಾರ್ಯಕರ್ತರು ಮಹಿಳಾ ಕಾರ್ಯಕರ್ತರು ಸೇರಿದಂತೆ ಹಲವು ಕನ್ನಡಪರ ಸಂಗಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು

Leave a Reply

Your email address will not be published. Required fields are marked *

error: Content is protected !!