15/05/2026


ಬೆಳಗಾವಿ-14 : ಬುಧವಾರ ನಡೆದ ಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ನಿರ್ಣಯ ಕೈಗೊಳ್ಳುವ ವಿಚಾರ ತೀವ್ರ ಚರ್ಚೆಗೆ ಕಾರಣವಾದರೂ, ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳದೆ ಮೇಯರ್ ಪ್ರೀತಿ ಕಾಮಕರ್ ಅಡ್ಡಗೋಡೆ ಮೇಲೆ ದೀಪವಿಟ್ಟಂತಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸಭೆಯಲ್ಲಿ ಕರ್ನಾಟಕ ಪರ ನಿರ್ಣಯ ಕೈಗೊಳ್ಳುವಂತೆ ಕನ್ನಡಪರ ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರು ಬಲವಾದ ಒತ್ತಾಯ ವ್ಯಕ್ತಪಡಿಸಿದರು. ಆದರೆ ಈ ವಿಚಾರವನ್ನು ಚರ್ಚೆಗೆ ತರಲು ರಾಜ್ಯ ಸರ್ಕಾರ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯ ಅಗತ್ಯವಿದೆ ಎಂದು ಮೇಯರ್ ಪ್ರೀತಿ ಕಾಮಕರ್ ಸಭೆಯಲ್ಲಿ ರೂಲಿಂಗ್ ನೀಡಿದರು. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದು ಅನುಮತಿ ಕೋರಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಈ ವಿಷಯ ಚರ್ಚೆಗೆ ಅವಕಾಶ ಇದೆಯೇ ಎಂಬ ಕುರಿತು ಸರ್ಕಾರದ ಸ್ಪಷ್ಟನೆ ಪಡೆಯಬೇಕಿದೆ ಎಂದು ಮೇಯರ್ ಹೇಳಿದ ಹಿನ್ನೆಲೆಯಲ್ಲಿ ಕನ್ನಡಪರ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದರ ಕುರಿತು ಯಾವುದೇ ಗೊಂದಲಕ್ಕೆ ಅವಕಾಶ ಇರಬಾರದು. ಕೂಡಲೇ ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು” ಎಂದು ಸದಸ್ಯರು ಒತ್ತಾಯಿಸಿದರು.
ಇನ್ನೊಂದೆಡೆ, ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ನಿರ್ಣಯ ಕೈಗೊಳ್ಳಬಾರದು ಎಂದು ಆಗ್ರಹಿಸಿ ವಿರೋಧ ವ್ಯಕ್ತಪಡಿಸಿದರು. ಸಭೆಯಲ್ಲಿ ಪರ ಹಾಗೂ ವಿರೋಧದ ಚರ್ಚೆಗಳು ಜೋರಾಗಿ ನಡೆದವು. ಭಾರತೀಯ ಜನತಾ ಪಕ್ಷ ಹಾಗೂ ಕಾಂಗ್ರೆಸ್ ಸದಸ್ಯರು ಬಹುತೇಕ ಮೌನ ವಹಿಸಿದ್ದರೆ, ಕನ್ನಡಪರ ನಾಮನಿರ್ದೇಶಿತ ಸದಸ್ಯರು ಮಾತ್ರ ಕರ್ನಾಟಕ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತಿದರು.
ಈ ನಡುವೆ, ಪಾಲಿಕೆ ಸಭೆಯಲ್ಲಿ ಕರ್ನಾಟಕ ಪರ ನಿರ್ಣಯ ಕೈಗೊಳ್ಳಬೇಕೆಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳು ಮಹಾನಗರ ಪಾಲಿಕೆ ಕಚೇರಿ ಎದುರು ಧಾರಾಕಾರ ಮಳೆಯ ನಡುವೆಯೂ ಪ್ರತಿಭಟನೆ ನಡೆಸಿದವು. ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ ಮುಂದುವರೆಸಿದ ಹೋರಾಟಗಾರರು “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ಗೊತ್ತುವಳಿ ಅಂಗೀಕರಿಸಬೇಕೆಂದು ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!