

ಬೆಳಗಾವಿ-07: ಕಂಗ್ರಾಳಿ ಬಿ.ಕೆ ಗ್ರಾಮದಲ್ಲಿ ನಡೆದ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಮಹಾ ಮಂಗಳಾರತಿ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಂಗಳವಾರ ಸಂಜೆ ಭಕ್ತಿಭಾವದಿಂದ ಭಾಗವಹಿಸಿದರು.
ಗ್ರಾಮದ ಅಧಿದೇವತೆಯಾದ ಶ್ರೀ ಮಹಾಲಕ್ಷ್ಮಿ ದೇವಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಚಿವೆ, ದೇವಿಯ ದರ್ಶನ ಪಡೆದು ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ ಮತ್ತು ಸಮೃದ್ಧಿ ಲಭಿಸಲಿ ಎಂದು ಪ್ರಾರ್ಥಿಸಿದರು. ಮಂಗಳಾರತಿ ವೇಳೆ ದೇವಾಲಯದ ಸುತ್ತಮುತ್ತ ಭಕ್ತರ ದಂಡೇ ಹರಿದು ಬಂದಿದ್ದು, ಆಧ್ಯಾತ್ಮಿಕ ವಾತಾವರಣಕ್ಕೆ ಮತ್ತಷ್ಟು ಮೆರುಗು ನೀಡಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ಸಂಭ್ರಮ ಮನೆಮಾಡಿದ್ದು, ವಿವಿಧ ಧಾರ್ಮಿಕ ವಿಧಿವಿಧಾನಗಳು ಭಕ್ತಿಭಾವದಿಂದ ನೆರವೇರಿದವು. ಹಲವು ವರ್ಷಗಳ ಬಳಿಕ ನಡೆಯುತ್ತಿರುವ ಈ ಮಹೋತ್ಸವಕ್ಕೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಪ್ರದೇಶದ ಭಕ್ತರು ಭಾರೀ ಸಂಖ್ಯೆಯಲ್ಲಿ ಆಗಮಿಸಿ, ದೇವಿಯ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಗ್ರಾಮದ ಹಿರಿಯರು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ಭಕ್ತಾಧಿಗಳು ಹಾಜರಿದ್ದರು.
