06/05/2026


ಬೆಳಗಾವಿ-06 : ನಗರದ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹದ ವಿರುದ್ಧ ಮಹಿಳಾ ಪೊಲೀಸ್ ಪಡೆಯಲ್ಲಿನ ‘ಅಕ್ಕ ಪಡೆ’ ಸಮರ ಸಾರಿದೆ. ಕೇವಲ ಒಂದೇ ವಾರದಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆ ನಡೆಸಿರುವ ಅಕ್ಕ ಪಡೆಯ ತಂಡ, 13 ಮತ್ತು 17 ವರ್ಷದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಮದುವೆಯೆಂಬ ಸಂಕೋಲೆಯಿಂದ ಮುಕ್ತಗೊಳಿಸಿದೆ.
ಪೋಷಕರ ವಿರೋಧದ ನಡುವೆಯೂ ಯಶಸ್ವಿ ಕಾರ್ಯಾಚರಣೆ ನಡೆಸಿದ ಮಹಿಳಾ ಸಿಬ್ಬಂದಿಗಳ ಕಾರ್ಯಕ್ಕೆ ಈಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೆಳಗಾವಿ ನಗರದ ವಂಟಮೂರಿ ಕಾಲೋನಿ ಮತ್ತು ಶಹಾಪುರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಎರಡು ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ಅಕ್ಕ ಪಡೆ ಯಶಸ್ವಿಯಾಗಿದೆ. ವಂಟಮೂರಿ ಕಾಲೋನಿಯಲ್ಲಿ ಕುತೂಹಲಕ್ಕೆ ಕಾರ್ಯಕ್ರಮವೊಂದನ್ನು ಪರಿಶೀಲಿಸಲು ಹೋದಾಗ 17 ವರ್ಷದ ಬಾಲಕಿಯ ಮದುವೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಮತ್ತೊಂದು ಪ್ರಕರಣದಲ್ಲಿ, ಶಹಾಪುರದಲ್ಲಿ 13 ವರ್ಷದ ಬಾಲಕಿಯ ವಿವಾಹವಾಗುತ್ತಿರುವ ನಿಖರ ಮಾಹಿತಿ ಮೇರೆಗೆ ದಾಳಿ ಮಾಡಿದ ತಂಡ ಮದುವೆಯನ್ನು ತಡೆದಿದೆ. ಬಾಲ್ಯ ವಿವಾಹ ಅಪರಾಧ ಎಂದು ತಿಳಿದಿದ್ದರೂ ಮದುವೆಗೆ ಮುಂದಾಗಿದ್ದ ಬಾಲಕಿಯರ ತಂದೆಯ ವಿರುದ್ಧ ಇದೀಗ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಅಕ್ಕ ಪಡೆ ತಂಡದ ಈ ಸಮಯೋಚಿತ ಕಾರ್ಯಕ್ಕೆ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!