ವಿಶ್ವ ಗುರು ಬಸವಣ್ಣನವರು ಯಾವುದೇ ಕಾಲಕ್ಕೂ ಪ್ರಸ್ತುತರು. ಅವರ ವಚನಗಳಲ್ಲಿ ಬಂದಿರುವ ಹೇಳಿಕೆಗಳೇ ಬೇರೆ ಬೇರೆ ಸೆಕ್ಷನ್ ಗಳಾಗಿ ಸಂವಿಧಾನದಲ್ಲಿ ಮೂಡಿಬಂದಿವೆ.
ಒಂಬತ್ತುನೂರು ವರ್ಷಗಳ ಹಿಂದೆ ಬೇರೆ ಧರ್ಮದವರು ಕೊಡದೇ ಇರುವ ಸ್ವಾತಂತ್ರ್ಯವನ್ನು ಬಸವಣ್ಣನವರು ಮಹಿಳೆಯರಿಗೆ ಕೊಟ್ಟಿದ್ದಾರೆ. ಬಸವಣ್ಣನವರ ವಚನ ಹಾಗೂ ಸಾಮಾಜಿಕ ಕ್ರಾಂತಿಯನ್ನು ತಿಳಿದು ಆಕರ್ಷಿತರಾಗಿ ಬೇರೆ ಬೇರೆ ರಾಜ್ಯಗಳ ಮೂಲೆ ಮೂಲೆಗಳಿಂದ ಬಂದು ಬಸವ ಕಲ್ಯಾಣದ ಅನುಭವ ಮಂಟಪದ ಸದಸ್ಯರಾದರು.
ದೀನ,ದಲಿತ’ ಅಸ್ಪೃಶ್ಯರಿಗೆ ಸಿಗಬೇಕಾದ ಹಕ್ಕು ಭಾದ್ಯತೆಗಳನ್ನು ಅವರು ಕೇಳದೆ ಕೊಟ್ಟ ಮಹಾನುಭಾವಿ ಬಸವಣ್ಣನವರು. ಇಷ್ಟಲಿಂಗದೊಂದಿಗೆ ಕಾಯಕ ದಾಸೋಹದ ಅರಿವನ್ನು ನೀಡಿ ಸ್ವಾವಲಂಬಿಗಳನ್ನಾಗಿ ಮಾಡಿದರು.
ಮಾನವ ಸಹಜ ಎಲ್ಲ ಸಮಸ್ಯೆಗಳಿಗೆ ವಚನಗಳಲ್ಲಿ ಉತ್ತರ ಸಿಗುತ್ತದೆ. ವಚನ ಸಾಹಿತ್ಯವನ್ನು ಮಕ್ಕಳಿಗೆ ಹೇಳಿ ವ್ಯಕ್ತಿತ್ವ ವಿಕಾಸ ಮಾಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವಿಶ್ವ ಗುರು ಬಸವಣ್ಣ ಕೇವಲ ಕರ್ನಾಟಕಕ್ಕಷ್ಟೇ ಸಾಂಸ್ಕೃತಕ ನಾಯಕ ಅಲ್ಲ ಇಡೀ ವಿಶ್ವಕ್ಕೆ ಹಾಗೂ ಮಾನವ ಕುಲಕ್ಕೇ ಸಾಂಸ್ಕೃತಿಕ ನಾಯಕ ಎಂದು ದಿನಾಂಕ 17 – 4 – 2026ರಂದು ಬೆಳಗಾವಿಯ ಜಾಗತಿಕ ಲಿಂಗಾಯತ ಮಹಾಸಭಾದಿಂದ ಜರುಗಿದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ರಾಮದುರ್ಗ ತಾಲೂಕಿನ ನಾಗನೂರ ಗುರುಬಸವ ಮಠದ ಶರಣೆ ಡಿ ಪಿ ನಿವೇದಿತಾ ಅವರು ಹೇಳಿದರು.
ಸಾನಿಧ್ಯ ವಹಿಸಿ ಮಾತನಾಡಿದ ಶರಣೆ ನಿವೇದಿತಾ ಅವರ ತಂದೆ ಶರಣ ಬಸವ ಪ್ರಕಾಶ ಸ್ವಾಮೀಜಿಯವರು ಆಶೀರ್ವಚನ ನೀಡಿ ಮಕ್ಕಳಿಗೆ ಧರ್ಮ ಸಂಸ್ಕಾರ ಕೊಡುವದು ಅವಶ್ಯವಾಗಿದೆ. ಹೇಳಿಕೆಯಿಂದ ಕಲಿಯುವುದಕ್ಕಿಂತ ಮಕ್ಕಳು ನೋಡಿ ಕಲಿಯುತ್ತಾರೆ. ಆದ್ದರಿಂದ ಪಾಲಕರು ವಿಭೂತಿ, ಲಿಂಗ, ಶಿವಯೋಗ, ವಚನ ಹೇಳುವುದನ್ನು ರೂಡಿಸಿಕೊಳ್ಳಬೇಕೆಂದು ಹೇಳಿದರು.
ಗೋಷ್ಟಿಯ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಶರಣ ಬಸವರಾಜ ರೊಟ್ಟಿಯವರು ಈ ವರ್ಷ ಬಸವ ಜಯಂತಿಯನ್ನು ಸಂಭ್ರಮದಿಂದ ಆಚರಿಸೋಣ. ಸಮಾನತೆಗಾಗಿ ಏರ್ಪಡಿಸಿದ ಬೈಕರ್ಯಾಲಿಯಲ್ಲಿ ಹಾಗೂ ರವಿವಾರ ದಿನಾಂಕ 26 ರಂದು ಸಂಜೆ 4.00 ಗಂಟೆಗೆ ರಾಣಿ ಚೆನ್ನಮ್ಮ ವೃತ್ತದಿಂದ ಪ್ರಾರಂಭವಾಗುವ ಬಸವಭಾವ ಚಿತ್ರದ ಭವ್ಯ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಚಾರಿ ಗುರುಬಸವ ಬಳಗದವರು ಏರ್ಪಡಿಸಿದ ಜಿಲ್ಲಾಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಗೌರವಿಸಿ ನಗದು ಬಹುಮಾನ ನೀಡಲಾಯಿತು.
ಪ್ರಸಾದ ದಾಸೋಹಿಗಳಾದ ಶರಣೆ ಪ್ರಾರ್ಥನಾ ಹಾಗೂ ಅನಿಲ ಭರಮಪ್ಪ ಕುಂದಗೋಳ ದಂಪತಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.
ಶ್ರೀ ಎಂ. ವಿ. ಕೋರಿ ಸ್ವಾಗತಿಸಿದರು. ಶ್ರೀ ಸುರೇಶ ಮಲ್ಲಪ್ಪ ನರಗುಂದ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಸಿ. ಎಂ. ಬೂದಿಹಾಳ ಪರಿಚಯಿಸಿದರು. ಶ್ರೀ ಮಹಾಂತೇಶ ತೋರಣಗಟ್ಟಿ ವೇದಿಕೆಯ ಮೇಲೆ ಇದ್ದರು. ಶ್ರೀ ಎಫ್ ಆರ್ ಪಾಟೀಲ ಶರಣ ಸಮರ್ಪಣೆ ಮಾಡಿದರು.
ಶ್ರೀ ಎಂ ಎಂ ಬಾಳಿ, ಶ್ರೀ ಶಿವಾನಂದ ಲಾಳಸಂಗಿ , ರಾಜು ಕುಂದಗೋಳ , ಮಂಜು ಕೊಪ್ಪದ ‘ ಬಿ. ಡಿ. ಪಾಟೀಲ, ಈರಣ್ಣ ಚಿನಗುಡಿ, ರಾಮನಗೌಡ ಹೊಸಗೌಡರ ‘ ಸಿದ್ರಾಮ ಸಾವಳಗಿ ‘ಶ್ರೀಮತಿ ಸುನಿತಾ ತೋರಣಗಟ್ಟಿ ‘ ಸಂಗೀತಾ ಬಾಳಿ, ಸುವರ್ಣಾ ಕುಂದಗೋಳ ‘ ಸುಜಾತಾ ಮತ್ತಿಕಟ್ಟಿ, ರತ್ನಾ ಬೆಣಚನಮರಡಿ ‘ಮಹಾನಂದಾ ಪಾರುಶೆಟ್ಟಿ, ನೇತ್ರಾವತಿ ರಾಮಾಪುರಿ, ಪಿ ಆಯ್ ಚಿಕಲಿ, ಬಸವರಾಜ ಮಿಂಡೊಳ್ಳಿ, ಕೆಂಪಣ್ಣ ರಾಮಪುರಿ ಮುಂತಾದ ಶರಣ ಶರಣೆಯರು ಹಾಜರಿದ್ದರು..

