23/03/2026
IMG-20260322-WA0005

ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದ ಸಚಿವರು

ಬೆಳಗಾವಿ-22:ಬೆಳಗಾವಿ ಗ್ರಾಮೀಣ ಕ್ಷೇತ್ರದ ತುರಮುರಿ ಗ್ರಾಮದ ಬಳಿ ಇರುವ ತ್ಯಾಜ್ಯ ವಿಲೇವಾರಿ ಘಟಕದಿಂದ ಸ್ಥಳೀಯ ಜನರಿಗಾಗುತ್ತಿರುವ ತೊಂದರೆಗಳ ಬಗ್ಗೆ ಇಂದು ತುರುಮುರಿ, ಬಾಚಿ, ಕೋನೆವಾಡಿ, ಉಚಗಾಂವ, ಸುಳಗಾ, ಗೋಜಗಾ, ಮಣ್ಣೂರ, ಕಲ್ಲೆಹೋಳ, ಅಂಬೇವಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಹಾಗೂ ಹಿರಿಯರು ಬೃಹತ್ ಸಂಖ್ಯೆಯಲ್ಲಿ ಆಗಮಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮಸ್ಥರ ನೋವಿಗೆ ಸ್ಪಂದಿಸುವುದು ನನ್ನ ಕರ್ತವ್ಯ. ಈ ಘಟಕವನ್ನು ಸ್ಥಗಿತಗೊಳಿಸುವ ಕುರಿತು ಸಕಾರಾತ್ಮಕವಾಗಿದ್ದು, ಯಾರೂ ಆತಂಕಪಡಬೇಡಿ, ನಿಮ್ಮೆಲ್ಲರ ಹೋರಾಟದಲ್ಲಿ ನಾನಿದ್ದೇನೆ ಎಂದು ಸಚಿವರು ಭರವಸೆ ನೀಡಿದರು.
ನಾನು ಮೊದಲಿನಿಂದಲೂ ನಿಮ್ಮ ಪರವಾಗಿದ್ದೇನೆ. ನಾನು ಶೀಘ್ರವೇ ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತರ ಸಭೆ ನಡೆಸುತ್ತೇನೆ. ಜೊತೆಗೆ ಸರಕಾರದ ಮಟ್ಟದಲ್ಲೂ ದ್ವನಿ ಎತ್ತುತ್ತೇನೆ. ಆದರೆ, ನಗರದ ಶಾಸಕರು ಮತ್ತು ಸಂಸದರು ಈ ವಿಷಯದಲ್ಲಿ ಗ್ರಾಮಸ್ಥರಿಗೆ ಸಹಾಯ ಮಾಡುತ್ತಿಲ್ಲ. ನಗರದ ಕಸ ತಂದು ಗ್ರಾಮೀಣದಲ್ಲಿ ಚೆಲ್ಲುವುದು ಖಂಡನೀಯ. ಹಾಗಾಗಿ ಸಂಸದ ಜಗದೀಶ ಶೆಟ್ಟರ್, ಶಾಸಕರಾದ ಅಭಯ ಪಾಟೀಲ ಮತ್ತು ರಾಜು ಸೇಠ್ ಮತ್ತು ಮೇಯರ್, ಉಪಮನೇಯರ್ ಅವರ ಬಳಿಯೂ ತೆರಳಿ ಮನವಿ ಸಲ್ಲಿಸಿ. ಅವರ ವ್ಯಾಪ್ತಿಯ ಕಸವನ್ನು ನಿಮ್ಮೂರಿಗೆ ತಂದು ಹಾಕುವುದು ಸರಿಯಲ್ಲ ಎಂದು ಸಚಿವರು ತಿಳಿಸಿದರು.
ಗ್ರಾಮಸ್ಥರ ಬೆನ್ನಿಗೆ ನಿಂತ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ನಿಲುವಿಗೆ ಸೇರಿದ್ದ ಜನರು ಹರ್ಷ ವ್ಯಕ್ತಪಡಿಸಿ, ಕರತಾಡನದ ಮೂಲಕ ಧನ್ಯವಾದ ಸಲ್ಲಿಸಿದರು.

* *ಸಚಿವ ಬೈರತಿ ಸುರೇಶ್ ಅವರಿಗೆ ಮನವಿ*
ಇದೇ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ಗ್ರಾಮಸ್ಥರ ಮನವಿಯನ್ನು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗ್ರಾಮಸ್ಥರಿಗೆ ತೊಂದರೆಯಾಗದಂತೆ ಕ್ರಮವಹಿಸುವುದಾಗಿ ಭರವಸೆ ನೀಡಿದರು. ‌

* *ಜನತಾ ದರ್ಶನ ನಡೆಸಿದ ಸಚಿವರು*

ಬೆಳಗಾವಿಯ ಗೃಹ ಕಚೇರಿಯಲ್ಲಿ ಜನತಾದರ್ಶನ ನಡೆಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿ, ಇನ್ನುಳಿದ ಸಮಸ್ಯೆಗಳನ್ನು ಪರಿಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

Leave a Reply

Your email address will not be published. Required fields are marked *

error: Content is protected !!