ಬೆಳಗಾವಿ -29:ಬೆಳಗಾವಿ ಮಹಾನಗರ ಪಾಲಿಕೆಯನ್ನು ಬೃಹತ್ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ಆಗ್ರಹ
ಪಾಲಿಕೆ ಎದುರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಸ್ಥಾಪನೆಗೆ ಮನವಿ
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯನ್ನು ಬೃಹತ್ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಬೇಕು ಹಾಗೂ ಮಹಾನಗರ ಪಾಲಿಕೆ ಮುಖ್ಯ ಕಚೇರಿ ಎದುರು ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳನ್ನು ಸ್ಥಾಪಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಮುಖಂಡ ದೀಪಕ್ ಗುಡಗನಟ್ಟಿ ಆಗ್ರಹಿಸಿದರು.
ಈ ಕುರಿತು ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ ಅವರು, ರಾಜ್ಯದ ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆ ಹೊಂದಿರುವ ಬೆಳಗಾವಿ ನಗರವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಜನಸಂಖ್ಯೆ ಹಾಗೂ ನಗರ ವ್ಯಾಪ್ತಿ ಗಣನೀಯವಾಗಿ ವಿಸ್ತರಿಸಿದೆ. ಆದ್ದರಿಂದ ನಗರದ ಸಮಗ್ರ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ಬಲವರ್ಧನೆಗಾಗಿ ಮಹಾನಗರ ಪಾಲಿಕೆಯನ್ನು ಬೃಹತ್ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಅದೇ ರೀತಿ, ಕನ್ನಡ ನಾಡಿನ ಸ್ವಾತಂತ್ರ್ಯ ಹೋರಾಟದ ಪ್ರತೀಕಗಳಾದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳನ್ನು ಮಹಾನಗರ ಪಾಲಿಕೆ ಕಚೇರಿ ಎದುರು ಸ್ಥಾಪಿಸುವ ಮೂಲಕ ಅವರ ತ್ಯಾಗ ಮತ್ತು ದೇಶಭಕ್ತಿಗೆ ಗೌರವ ಸಲ್ಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸರ್ಕಾರ ಈ ಬೇಡಿಕೆಗಳನ್ನು ಶೀಘ್ರದಲ್ಲೇ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ದೀಪಕ್ ಗುಡಗನಟ್ಟಿ ಮನವಿ ಮಾಡಿದ್ದಾರೆ.
