ಬೆಳಗಾವಿ-23: ಜೆಡಿಎಸ್ ಪಕ್ಷದ 25 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ರಾಜ್ಯ ಮತ್ತು ದೇಶದ ಜನರಿಗೆ ಅಪಾರ ಕೊಡುಗೆ ನೀಡಿದೆ. ರಾಜ್ಯಕ್ಕೆ ಮುಖ್ಯಮಂತ್ರಿ ಮತ್ತು ದೇಶಕ್ಕೆ ಪ್ರಧಾನಿಗಳನ್ನು ನೀಡಿರುವ ರಾಜ್ಯದ ಏಕೈಕ ಪಕ್ಷ ಜೆಡಿಎಸ್ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ ಅವರು ಹೇಳಿದರು.
ಜಾತ್ಯತೀತ ಜನತಾದಳ (ಜೆಡಿಎಸ್) ವತಿಯಿಂದ ನಗರದ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಯುವ ಜನತಾದಳ ಬೃಹತ್ ಸಮಾವೇಶವನ್ನು ಉದ್ಘಾಟಿಸಿ, ಮಾತನಾಡಿದ ಅವರು, ರಾಜ್ಯದಲ್ಲಿ ಹಲವು ನಾಯಕರು ಪ್ರಾದೇಶಿಕ ಪಕ್ಷವನ್ನು ಕಟ್ಟಿದ್ದರು. ಯಾವ ಪಕ್ಷವೂ 5 ವರ್ಷಗಳವರೆಗೆ ಉಳಿಯಲಿಲ್ಲ. ಆದರೆ, ಜೆಡಿಎಸ್ ಪಕ್ಷ ಸುದೀರ್ಘ 25 ವರ್ಷ ಪೂರೈಸಿರುವುದು ಅವಿಸ್ಮರಣೀಯ. ಇದನ್ನು ಇನ್ನೂ 25 ವರ್ಷಗಳ ವರಗೆ ಕೊಂಡೊಯ್ಯಲು ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಪಕ್ಷದ ನಾಯಕರಾದ ದೇವೇಗೌಡರು, ಕುಮಾರಸ್ವಾಮಿ ಯವರು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಹಲವು ನೀರಾವರಿ ಯೋಜನೆ, ರೈತರ ಸಾಲ ಮನ್ನಾ, ಲಾಟರಿ ನಿಷೇಧ, ಸೈಕಲ್ ಭಾಗ್ಯ ಸೇರಿದಂತೆ ಹತ್ತಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ರಾಜ್ಯದ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಕಾರ್ಯವೈಖರ್ಯ ಜನರ ಮನಸ್ಸಿನಲ್ಲಿ ಆಳವಾಗಿ ಉಳಿದಿದೆ. ಹೀಗಾಗಿಯೇ ಇಂದಿಗೂ ಪ್ರತಿ ಹಳ್ಳಿಗಳಲ್ಲಿಯೂ ಜೆಡಿಎಸ್ ಪಕ್ಷದ ಮತ್ತು ನಾಯಕರ ಸೇವೆಯನ್ನು ಕೊಂಡಾಡುತ್ತಾರೆ ಎಂದರು.
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ. ಆರ್ಥಿಕವಾಗಿ ದಿವಾಳಿಯಾಗಿದೆ. ರಾಜ್ಯದಲ್ಲಿ ಯಾವ ಸರಕಾರವು ಇದುವರೆಗೆ ಮಾಡದಷ್ಟು ಸಾಲ ಈ ಸರಕಾರ ಮಾಡಿದೆ. ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಪೂರೈಸುತ್ತಿಲ್ಲ. 10 ತಿಂಗಳ ಗೃಹ ಲಕ್ಷ್ಮಿ ಯೋಜನೆಯ ಹಣ ಬಾಕಿ ಇದೆ. ಜೊತೆಗೆ ಸರಕಾರ ಮೇಲೆ, ಭ್ರಷ್ಟಾಚಾರ, ಕಮಿಷನ್ ಆರೋಪಗಳು ಮೇಲಿಂದ ಮೇಲೆ ಕೇಳಿಬರುತ್ತವೆ. ಇನ್ನೊಂದೆಡೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸಾರ್ವಜನಿಕರು, ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳು ರಕ್ಷಣೆ ಇಲ್ಲದಂತಾಗಿದೆ. ಹೀಗಾಗಿ ರಾಜ್ಯದ ಆಡಳಿತ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದರು.
