ಲಾವಣಿ ಮತ್ತು ಗೀಗಿ ಪದಗಳಿಗೆ ಮಾನವತೆಗೆ ಬೇಕಾದ ತತ್ವ ಮತ್ತು ಆದರ್ಶಗಳನ್ನು ಬೆಳೆಸುವ ಸತ್ವವಿದೆ. ಸದಾ ಜೀವಂತಿಕೆಯನ್ನು ತೋರ್ಪಡಿಸುವ ಶಕ್ತಿಯನ್ನು ಈ ಗೀಗಿಪದಗಳು ಹೊಂದಿವೆ ಎಂದು ನಿವೃತ್ತ ಪ್ರಾಚಾರ್ಯರು ಮತ್ತು ಸಾಹಿತಿ ಡಾ. ಸರಸ್ವತಿ ಕಳಸದರವರು ಶನಿವಾರ ದಿ. 17 ರಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ದಿ ಮರಿಕಲ್ಲಪ್ಪ ಮಲಶೆಟ್ಟಿ ಅವರ ಸ್ಮರಣಾರ್ಥ ಹಮ್ಮಿಕೊಳ್ಳಲಾದ ದತ್ತಿ ಕಾರ್ಯಕ್ರಮದಲ್ಲಿ ‘ಲಾವಣಿ ಮತ್ತು ಗೀಗಿ ಪದಗಳ ಇತಿಹಾಸ ಮತ್ತು ಪ್ರಸ್ತುತತೆ’ ಕುರಿತು ಉಪನ್ಯಾಸ ನೀಡುತ್ತ ಮಾತನಾಡಿದರು. ಲಾವಣಿ ಮತ್ತು ಗೀಗಿ ಪದಗಳು ಯಾರಿಗೂ ನಿಲುಕದ ಗ್ರಾಮೀಣ ಕಲೆಯಾಗಿದ್ದು ಯಾವುದೇ ಯಂತ್ರಗಳಿಲ್ಲದೆ ಕೇಳುಗರನ್ನು ಆಕರ್ಷಿಸುವ ಶಕ್ತಿ ಹೊಂದಿವೆ. ಯಾವುದೇ ಘಟನೆ, ಸರ್ಕಾರಿ ಸೌಲಭ್ಯ, ವ್ಯಕ್ತಿ, ವ್ಯಕ್ತಿತ್ವ ಚಿತ್ರಣ ಕುರಿತು ವೈಭವಿಕರಿಸುವ ಮತ್ತು ಅದರ ಒಳಿತು ಮತ್ತು ಕೆಡಕುಗಳನ್ನು ತಿಳಿಯಪಡಿಸುವ ಮತ್ತು ಎಲ್ಲರನ್ನೂ ತನ್ನತ್ತ ಸೆಳೆಯುವ ಶಕ್ತಿ ಈ ಗೀಗಿ ಮತ್ತು ಲಾವಣಿ ಪದಗಳಲ್ಲಿದೆ .ಆ ವಿಶಿಷ್ಟ ಕಲೆಯನ್ನು ಉಳಿಸಿ ಯಾಂತ್ರಿಕವಾಗಿರುವ ಈ ಜಗತ್ತಿನಲ್ಲಿ ಅದರ ಸತ್ವವನ್ನು ಎಲ್ಲರಿಗೂ ತೋರಿಸಬೇಕಾಗಿರುವ ಅಗತ್ಯತೆ ಇದೆ ಎಂದರು.ಇದೇ ಸಂದರ್ಭದಲ್ಲಿ ವರದಾ ಹೆಗಡೆ, ಸಾವಿತ್ರಿ ಭಟ್,ಪ್ರಭಾವತಿ ಗುರವ ಮತ್ತು ತಂಡದವರು ಗೀಗಿ ಮತ್ತು ಲಾವಣಿ ಪದಗಳನ್ನು ಪ್ರಸ್ತುತಪಡಿಸಿ ಕೇಳುಗರನ್ನು ಮಂತ್ರಮುಗ್ದಗೊಳಿಸಿದರು. ಸಾಹಿತಿ ಯ. ರು. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಾಚೀನ ಕಲೆಗಳನ್ನು ನಾವು ಉಳಿಸಿ ಬೆಳೆಸಬೇಕಿದೆ ಮತ್ತು ಅವರ ಮಹತ್ವವನ್ನು ಮುಂದಿನ ಪೀಳಿಗೆಗೆ ಪಸರಿಸಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಜ್ಯೋತಿ ಬದಾಮಿ, ಜಿ.ಬಿ. ಕುರಬೇಟ, ಸುನೀತಾ ನಂದೇನ್ನವರ, ಅ. ಬ. ಇಟಗಿ, ದಾನಮ್ಮ ಅಂಗಡಿ ಅಕ್ಕಮಹಾದೇವಿ ತೆಗ್ಗಿ, ಬಿ.ಬಿ ಮಠಪತಿ, ಡಾ . ಸುನೀಲ ಪರೀಟ, ಸುಮನ ಪರೀಟ, ಉಮೇಶ್ ಹಾರೂಗೊಪ್ಪ, ಸಿ.ಎಸ್ ಕಟಾಪುರಿ ಮಠ, ಗುರುಸಿದ್ದಪ್ಪ ರೇವಣ್ಣವರ ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಶಿವಾನಂದ ತಲ್ಲೂರ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಎಮ್ ವೈ ಮೆಣಸಿನಕಾಯಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಡಾ. ಅನ್ನಪೂರ್ಣಾ ಹಿರೇಮಠ ನಿರೂಪಿಸಿದರು ಆರ್ ಬಿ ಬನಶಂಕರಿ ವಂದಿಸಿದರು.
