ಬೆಳಗಾವಿ -16:ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಬೆಳಗಾವಿಯ ಐತಿಹಾಸಿಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ಎಳ್ಳು ಮತ್ತು ಬೆಲ್ಲದ ಮಿಶ್ರಣದಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಈ ವಿಶೇಷ ಶೃಂಗಾರವು ಭಕ್ತರ ಕಣ್ಮನ ಸೆಳೆಯುತ್ತಿದ್ದು, ಭಕ್ತರು ಸರದಿಯಲ್ಲಿ ನಿಂತು ಶಿವನ ದರ್ಶನ ಪಡೆದು ಪುನೀತರಾದರು.
ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಬೆಳಗಾವಿಯ ಐತಿಹಾಸಿಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ಶುಭ ದಿನದಂದು, ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಈ ಪುಣ್ಯಕ್ಷೇತ್ರದಲ್ಲಿ ಮುಂಜಾನೆಯಿಂದಲೇ ಭಕ್ತರ ದಂಡು ಹರಿದುಬಂದಿತ್ತು. ಈ ಬಾರಿ ಕಪಿಲೇಶ್ವರ ಲಿಂಗಕ್ಕೆ ಅತ್ಯಂತ ಆಕರ್ಷಕವಾಗಿ ಎಳ್ಳು ಮತ್ತು ಬೆಲ್ಲದ ಮಿಶ್ರಣದಿಂದ ವಿಶೇಷ ಅಲಂಕಾರ’ ಮಾಡಲಾಗಿತ್ತು. ಎಳ್ಳು-ಬೆಲ್ಲದ ಈ ವಿಶೇಷ ಶೃಂಗಾರವು ಭಕ್ತರ ಕಣ್ಮನ ಸೆಳೆಯುತ್ತಿದ್ದು, ಭಕ್ತರು ಸರದಿಯಲ್ಲಿ ನಿಂತು ಶಿವನ ದರ್ಶನ ಪಡೆದು ಪುನೀತರಾದರು.
ದೇವಸ್ಥಾನದ ಆವರಣದಲ್ಲಿ ಹಬ್ಬದ ಸಡಗರ ತುಂಬಿ ತುಳುಕುತ್ತಿದ್ದು, ಭಕ್ತರಿಗೆ ಎಳ್ಳು-ಬೆಲ್ಲ ವಿತರಿಸುವ ಮೂಲಕ ಮಕರ ಸಂಕ್ರಾಂತಿಯ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಬೆಳಗಾವಿ ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ಹಳ್ಳಿಗಳಿಂದಲೂ ಸಾವಿರಾರು ಭಕ್ತರು ಆಗಮಿಸಿ ಕಪಿಲೇಶ್ವರನಿಗೆ ಅಭಿಷೇಕ ಹಾಗೂ ವಿಶೇಷ ಅರ್ಚನೆಗಳನ್ನು ಸಲ್ಲಿಸಿದರು. ಚಳಿಯ ನಡುವೆಯೂ ಭಕ್ತರ ಭಕ್ತಿ ಪರಾಕಾಷ್ಠೆ ತಲುಪಿದ್ದು, ಸಂಕ್ರಾಂತಿಯ ಸುಗ್ಗಿಯ ಸಂಭ್ರಮಕ್ಕೆ ಕಪಿಲೇಶ್ವರ ಸನ್ನಿಧಿ ಸಾಕ್ಷಿಯಾಯಿತು
