ಬೆಂಗಳೂರು-09 :ನಗರದ ಸಮರ್ಥನಂ ಸಭಾ ಭವನದಲ್ಲಿ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ 70 ನೇಯ ಜನ್ಮದಿನೋತ್ಸವದ ಅಂಗವಾಗಿ ಬೆಳಗಾವಿ ಹುಕ್ಕೇರಿ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ ಕೊಡ ಮಾಡುವ “ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಪ್ರಶಸ್ತಿ”ಯನ್ನು ಅಂಧರ ಮಹಿಳಾ ಟೀಮ್ 20 ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರತೀಯರಾದ ಕರ್ನಾಟಕದ ದೀಪಿಕಾ ಡಿ ಸಿ, ಕಾವ್ಯ ವಿ ಮತ್ತು ಕಾವ್ಯ ಎನ್ ಆರ್ ಅವರನ್ನು ಹಾಗೂ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಮತ್ತು ಸಮರ್ಥನಂ ಟ್ರಸ್ಟ್ ನ ಸಂಸ್ಥಾಪಕ ಡಾ. ಮಹಾಂತೇಶ ಜೆ ಕೆ ಅವರನ್ನು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು 25 ಸಾವಿರ ನಗದು ಹಣ, ಪ್ರಶಸ್ತಿ ಫಲಕದೊಂದಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ನಂತರ ಮಾತನಾಡಿದ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು ಕ್ರಿಯಾಶೀಲ ಜಗದ್ಗುರುಗಳು. ಸಮಾಜಮುಖಿ ಕಾರ್ಯವನ್ನು ಮಾಡುವುದರೊಂದಿಗೆ ಎಲ್ಲರ ಮನವನ್ನು ಗೆದ್ದಿದ್ದಾರೆ. ಇವರ ಪೀಠ ಪರಂಪರೆಯಲ್ಲಿ ಬರುವ ಹುಕ್ಕೇರಿ ಹಿರೇಮಠದ ಶ್ರೀಗಳು ಜಗದ್ಗುರುಗಳ ಜನ್ಮದಿನೋತ್ಸವದ ಅಂಗವಾಗಿ ಅಂಧರ ಮಹಿಳಾ ವಿಶ್ವಕಪ್ ಗೆದ್ದಿರುವ ಆಟಗಾರತೀಯರಿಗೆ ಮತ್ತು ಇದರ ಪ್ರೇರಕರಿಗೆ ಪ್ರಶಸ್ತಿ ನೀಡುತ್ತಿರುವುದು ಅಭಿಮಾನದ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಕಣ್ಣಿಲ್ಲದವರು ಏನೆಲ್ಲವನ್ನು ಸಾಧಿಸಬಹುದು ಎನ್ನುವುದಕ್ಕೆ ಉದಾಹರಣೆ ಅಂತ ಆಟಗಾರತೀಯರು ಇವತ್ತು ವಿಶ್ವಕಪ್ ಗೆದ್ದಿರುವುದು ಹೆಮ್ಮೆಯ ಸಂಗತಿ. ಇದಕ್ಕೆ ಪ್ರೇರಕವಾಗಿ ನಿಂತು ಸಮರ್ಥನಂ ಟ್ರಸ್ಟ್ ನ ಸಂಸ್ಥಾಪಿಸಿ ಹಾಗೆಯೇ ಭಾರತೀಯ ಅಂಧರ ಕ್ರಿಕೆಟ್ ಸoಸ್ಥೆಯ ಅಧ್ಯಕ್ಷರಾದ ಡಾ. ಮಹಾಂತೇಶ್ ಅವರು ಬೆಳಗಾವಿ ಜಿಲ್ಲೆಯವರು ಎಂದು ಹೇಳಲು ನಮಗೆ ಹೆಮ್ಮೆ ಎನಿಸುತ್ತದೆ. ಇವರಿಂದ ಕರುನಾಡಿನ ಕೀರ್ತಿ ಎಲ್ಲೆಡೆಗೂ ಬೆಳಗುತ್ತಿರುವುದು ಅಭಿಮಾನದ ಸಂಗತಿ ಎಂದರು.
ಪ್ರಶಸ್ತಿಯನ್ನು ಪಡೆದ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಡಾ. ಮಹಾಂತೇಶ್ ಜೆ ಕೆ ಮಾತನಾಡಿ ಇವತ್ತು ನಮ್ಮನ್ನೆಲ್ಲ ಅನೇಕ ದಿಗ್ಗಜರು ಕರೆಸಿ ಗೌರವಿಸಿ ಸನ್ಮಾನಿಸಿದ್ದಾರೆ. ಆದರೆ ಇಂದು ಗುರುಗಳೇ ನಮ್ಮ ಹತ್ತಿರ ಬಂದು ರಂಭಾಪುರಿ ಜಗದ್ಗುರುಗಳ ಹೆಸರಿನಿಂದ ಪ್ರಶಸ್ತಿ ನೀಡಿ ನಮ್ಮನ್ನು ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ನಮ್ಮ ಭಾಗ್ಯ ಎಂದರು.
ವಿಶ್ವಕಪ್ ವಿಜೇತ ಭಾರತ ತಂಡದ ನಾಯಕಿ ದೀಪಿಕಾ ಡಿ ಸಿ ಮಾತನಾಡಿ ವಿಶ್ವಕಪ್ ಗೆದ್ದಾಗ ಎಷ್ಟು ಸಂತೋಷ ವಾಗಿತ್ತೋ ಇವತ್ತು ರಂಭಾಪುರಿ ಜಗದ್ಗುರುಗಳ ಹೆಸರಿನ ಪ್ರಶಸ್ತಿಯನ್ನು ಹುಕ್ಕೇರಿ ಶ್ರೀಗಳು ನೀಡುತ್ತಿರುವಾಗ ನಮಗೆ ಅಷ್ಟೇ ಸಂತೋಷ ವಾಗಿದೆ ಎಂದರು.
ಆಟಗಾರತೀಯರಾದ ಕಾವ್ಯ ವಿ ಮತ್ತು ಕಾವ್ಯ ಎನ್ ಆರ್ ಮಾತನಾಡಿ ಅಂಧರ ಬದುಕಿಗೆ ಬಂಧುವಾಗಿ ನಿಂತವರು ಡಾ. ಮಹಾಂತೇಶ್ ಅವರು. ಇವರ ಗುರುಗಳು ಚಂದ್ರಶೇಖರ ಶಿವಾಚಾರ್ಯರು ನಮಗೆ ಆಶೀರ್ವದಿಸುತ್ತಿರುವುದು ನಮ್ಮ ಸೌಭಾಗ್ಯ ಎಂದರು.
ಇದೇ ಸಂದರ್ಭದಲ್ಲಿ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಶಿಷ್ಯರಾದ ಕರ್ನಾಟಕ ರಾಜ್ಯ ಬಿಸಿಊಟ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷರಾದ ಅಪ್ಪಾಜಿಗೌಡರು ತಂಡದ ಮೂರು ಜನ ಆಟಗಾರತೀಯರಿಗೆ, ಅಧ್ಯಕ್ಷರಿಗೆ ತಲಾ ಹತ್ತು ಸಾವಿರ ನಗದು ಹಣವನ್ನು ನೀಡಿ, ರಂಭಾಪುರಿ ಜಗದ್ಗುರುಗಳ ಹುಟ್ಟುಹಬ್ಬವನ್ನು ಇಷ್ಟು ವೈವಿದ್ಯಮಯವಾಗಿ ಆಚರಿಸಿದರು.
ನವದೆಹಲಿಯ ಅಖಿಲ ಭಾರತ ಹಿರಿಯ ನಾಗರೀಕರ ಮಹಾಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಮಹಾಂತೇಶ್ ಹಿರೇಮಠ, ದಾವಣಗೆರೆಯ ಪ್ರಶಾಂತ್, ಖ್ಯಾತ ಅಂಕಣಕಾರ ರವಿ ಹಂಜಿ, ಡಾ. ಕೆ ಭೀಮ, ದಕ್ಷಿಣ ಆಪ್ರಿಕದ ಡಾ. ಜಾರ್ಜ್ ಯಾಕೂಬ್, ನ್ಯಾಯಾಧೀಶ ಅನುರಾಧ ಯಾಕೂಬ್, ಪ್ರಾಚಾರ್ಯ ಡಾ. ಸಂಜಯ್ ಜೈನ್ ಸೇರಿದಂತೆ ಇನ್ನೂ ಅನೇಕ ಗಣ್ಯ ಮಾನ್ಯರು ಹಾಜರಿದ್ದರು.
