29/01/2026
IMG-20260108-WA0006

*ಹೊಸ ಪುಸ್ತಕ ಓದು*

*ಶರಣ ಕ್ಷೇತ್ರಗಳ ಅಧ್ಯಯನಕ್ಕೊಂದು ಮಾರ್ಗದರ್ಶಿ ಕೃತಿ*

ಪುಸ್ತಕದ ಹೆಸರು : *ಕೂಡಲಸಂಗಮ ಸಾಂಸ್ಕೃತಿಕ ಅಧ್ಯಯನ*
ಲೇಖಕರು : ಡಾ. ಕಾಂತೇಶರೆಡ್ಡಿ ಗೋಡಿಹಾಳ
ಪ್ರಕಾಶಕರು : ಪ್ರಭುದೇವರ ಜನಕಲ್ಯಾಣ ಸಂಸ್ಥೆ, ವಿರಕ್ತಮಠ, ಸೊಂಡೂರು, ೨೦೨೫
ಪ್ರಕಾಶಕರ ಸಂಪರ್ಕವಾಣಿ : ೯೪೪೯೭೮೧೦೮೮

ಸೊಂಡೂರು ವಿರಕ್ತಮಠದ ಪೂಜ್ಯ ಶ್ರೀ ಪ್ರಭು ಮಹಾಸ್ವಾಮಿಗಳವರು ಪುಸ್ತಕ ಸಂಸ್ಕೃತಿಯ ಆರಾಧಕರು. ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರಂತಹ ಪುಸ್ತಕದ ಸ್ವಾಮೀಜಿಯವರ ಕರಕಮಲಸಂಜಾತರಾಗಿ ಬೆಳೆದವರು. ಹೀಗಾಗಿ ಪ್ರತಿವರ್ಷ ತಮ್ಮ ಶ್ರೀಮಠದ ಪ್ರಭುದೇವರ ಜನಕಲ್ಯಾಣ ಸಂಸ್ಥೆಯ ಪ್ರಸಾರಾಂಗದ ಮೂಲಕ ಅತ್ಯುತ್ತಮ ಶರಣ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿ, ಬಸವಾದಿ ಶಿವಶರಣರ ತತ್ವ ಸಂದೇಶಗಳನ್ನು ಲೋಕಕ್ಕೆ ತಿಳಿಸುವ ಮಹಾಮಣಿಹವನ್ನು ಪೂರೈಸುತ್ತಿದ್ದಾರೆ. ಇಂದು ಬಹುತೇಕ ಲಿಂಗಾಯತ ಮಠಗಳು ಶರಣ ಸಂಸ್ಕೃತಿಗೆ ಸಂಬಂಧಿಸಿದ ಕೃತಿಗಳ ಪ್ರಕಟಣೆಯಿಂದ ಹಿಮ್ಮುಖವಾಗಿ ಚಲಿಸುತ್ತಿರುವ ಸಂಕ್ರಮಣ ಘಟ್ಟದಲ್ಲಿ ಸೊಂಡೂರು ಪ್ರಭುದೇವ ವಿರಕ್ತಮಠದ ಪೂಜ್ಯರು ಶರಣ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ಮೌಲಿಕ ಗ್ರಂಥಗಳ ಪ್ರಕಟಣೆ ಮೂಲಕ ಮಾಡುತ್ತಿರುವ ಸಾರಸ್ವತ ಸೇವೆ ನಿಜಕ್ಕೂ ಸ್ಮರಣೀಯ, ಉಳಿದವರಿಗೆ ಆದರ್ಶವೂ ಅನುಕರುಣೀಯವೂ ಆಗಿದೆ. ೨೦೨೫ರಲ್ಲಿ ಶ್ರೀಗಳು ಪ್ರಕಟಿಸಿದ ಮೌಲಿಕ ಗ್ರಂಥವೇ ‘ಕೂಡಲಸಂಗಮ ಸಾಂಸ್ಕೃತಿಕ ಅಧ್ಯಯನ’.

ಪೂಜ್ಯ ಶ್ರೀ ಪ್ರಭು ಮಹಾಸ್ವಾಮಿಗಳವರ ಜ್ಞಾನಶಕ್ತಿಗೆ ಕ್ರಿಯಾಶಕ್ತಿಯಾಗಿ ಶ್ರೀಮಠದ ಪ್ರಸಾರಾಂಗವನ್ನು ಮುನ್ನಡೆಸುತ್ತಿರುವರು ನಿರ್ದೇಶಕರಾದ ಡಾ. ಕೆ. ರವೀಂದ್ರನಾಥ ಅವರು. ಹಸ್ತಪ್ರತಿ-ಹಳಗನ್ನಡ-ವಚನಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ಅನನ್ಯವಾದ ಸಾಧನೆ ಮಾಡಿರುವ ಡಾ. ರವೀಂದ್ರನಾಥ ಅವರ ಸೂಕ್ತ ಸಮರ್ಥ ಮಾರ್ಗದರ್ಶನದಲ್ಲಿ ವಿರಕ್ತಮಠವು ಪುಸ್ತಕ ಸಂಸ್ಕೃತಿಯನ್ನು ಉನ್ನತೀಕರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಡಾ. ಕಾಂತೇಶರೆಡ್ಡಿ ಆರ್. ಗೋಡಿಹಾಳ ಅವರು ‘ಕೂಡಲಸಂಗಮ ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾ. ಕೆ. ರವೀಂದ್ರನಾಥ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿಗಾಗಿ ಸಾದರಪಡಿಸಿದ ಮೌಲಿಕ ಮಹಾಪ್ರಬಂಧ ಈಗ ಶ್ರೀಮಠದ ೪೫ನೇ ಕೃತಿಯಾಗಿ ಪ್ರಕಟಗೊಂಡಿದೆ.

ಇಂದು ಬಹುತೇಕ ಪಿಎಚ್.ಡಿ. ಮಹಾಪ್ರಬಂಧಗಳು ಅಪಮೌಲ್ಯೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಶ್ರಮ-ಶ್ರದ್ಧೆಯಿಂದ ಕ್ಷೇತ್ರಕಾರ್ಯ ಮಾಡಿ, ಪೂರ್ವದ ಆಕರಗಳನ್ನೆಲ್ಲ ಸಂಗ್ರಹಿಸಿ, ಆಳವಾಗಿ ಅಧ್ಯಯನ ಮಾಡಿ, ಹೊಸ ವಿಚಾರಗಳನ್ನು ಹೇಳಬೇಕಾದ ಪ್ರಬಂಧಗಳು ದೊರೆಯುವುದು ತುಂಬ ದುರ್ಲಭ. ಆದರೆ ಇದಕ್ಕೆಲ್ಲ ಅಪವಾದವೆಂಬಂತೆ ಡಾ. ಕಾಂತೇಶರೆಡ್ಡಿ ಅವರ ಈ ಮಹಾಪ್ರಬಂಧ ಈ ವರ್ಷದ ಶ್ರೇಷ್ಠ ಪಿಎಚ್.ಡಿ. ಮಹಾಪ್ರಬಂಧಗಳಲ್ಲಿ ಒಂದಾಗಿ ರೂಪುಗೊಂಡಿದೆ ಎಂದರೆ ಅತ್ಯುಕ್ತಿಯಾಗಲಾರದು.

ಕೂಡಲಸಂಗಮವೆಂದರೆ ಬಸವಣ್ಣನವರು; ಬಸವಣ್ಣನವರೆಂದರೆ ಕೂಡಲಸಂಗಮ ಎನ್ನುವಷ್ಟರ ಮಟ್ಟಿಗೆ ಒಂದು ರೀತಿಯ ತಾದ್ಯಾತ್ಮತೆಯನ್ನು ಹೊಂದಿರುವ ಲಿಂಗಾಯತರ ಪಾಲಿನ ಒಂದು ಪವಿತ್ರ ಧರ್ಮಕ್ಷೇತ್ರ. ಪ್ರಾಚೀನ ಕಾಲದಿಂದಲೂ ‘ಕಪ್ಪಡಿ ಸಂಗಮ’ ಎಂಬ ಹೆಸರಿನಿಂದ ಖ್ಯಾತವಾಗಿದ್ದ ಈ ಕ್ಷೇತ್ರ ಅನೇಕ ಧರ್ಮಪಂಥಗಳ ಸಂಘರ್ಷದ ಕಾಲಘಟ್ಟದಲ್ಲಿ ತನ್ನ ಧಾರ್ಮಿಕ ಅಪರಿಮಿತ ತೇಜಸ್ಸಿನಿಂದ ಹೊಳೆಯುತ್ತ ಬಂದಿರುವುದನ್ನು ಕಾಣುತ್ತೇವೆ. ಶೈವ-ನಾಥ-ಕಾಳಾಮುಖ-ಕಾಪಾಲಿಕದಂತಹ ಪಂಥಗಳನ್ನೆಲ್ಲ ತನ್ನ ಒಡಲಿನಲ್ಲಿಟ್ಟುಕೊಂಡು ಪೋಷಿಸಿದ ಕ್ಷೇತ್ರ ಕೂಡಲಸಂಗಮ. ಕೃಷ್ಣೆ-ಪ್ರಭೆಯರ ಸಂಗಮ ಸ್ಥಾನವಾಗಿರುವ ಈ ಕ್ಷೇತ್ರ ಯುಗಯುಗದಲ್ಲೂ ಇತ್ತೆಂದು ಪುರಾಣ ಕಥೆಗಳು, ಐತಿಹ್ಯಗಳು ಸಾರುತ್ತವೆ. ಆದರೆ ೧೨ನೇ ಶತಮಾನದಲ್ಲಿ ಇದೊಂದು ಮಹತ್ವದ ಅಗ್ರಹಾರವಾಗಿ, ಶೈಕ್ಷಣಿಕ ಕೇಂದ್ರವಾಗಿ ಬಸವಣ್ಣನವರಂತಹ ಮಹಿಮಾನ್ವಿತರನ್ನು ಲೋಕಕ್ಕೆ ಪರಿಚಯಿಸಿದ್ದು ಒಂದು ಸೋಜಿಗದ ಘಟನೆ.

ಡಾ. ಕಾಂತೇಶ ರೆಡ್ಡಿ ಅವರು ಅಪಾರ ಕ್ಷೇತ್ರಕಾರ್ಯ ಮಾಡಿ, ಅಪರೂಪದ ಆಕರ ಗ್ರಂಥಗಳನ್ನು ಸಂಗ್ರಹಿಸಿ, ತಲಸ್ಪರ್ಶಿಯಾದ ಅಧ್ಯಯನ ಮಾಡಿ ಈ ಮಹಾಪ್ರಬಂಧವನ್ನು ರಚಿಸಿದ್ದಾರೆ. ಬಸವಾದಿ ಶಿವಶರಣರ ಕ್ಷೇತ್ರಗಳನ್ನು ಕುರಿತು ಅಧ್ಯಯನ ಮಾಡುವವರಿಗೆ ಒಂದು ಮಾದರಿಯನ್ನು ರೂಪಿಸಿಕೊಟ್ಟಿದ್ದಾರೆ. ಒಂದು ಧಾರ್ಮಿಕ ಕ್ಷೇತ್ರವನ್ನು ಎಷ್ಟೊಂದು ವೈವಿಧ್ಯಮಯವಾಗಿ ವಿಶ್ಲೇಷಣೆಯ ನೆಲೆಯಲ್ಲಿ ಅಧ್ಯಯನ ಮಾಡಬಹುದು ಎಂಬುದಕ್ಕೆ ಈ ಕೃತಿ ಉತ್ತಮ ನಿದರ್ಶನವಾಗಿದೆ.

ಒಟ್ಟು ಒಂಬತ್ತು ಅಧ್ಯಾಯಗಳಲ್ಲಿ ಈ ಕೃತಿ ಶಿಲ್ಪ ಸಿದ್ದಗೊಂಡಿದೆ. ಮೊದಲ ಅಧ್ಯಾಯದಲ್ಲಿ ಅಧ್ಯಯನದ ಉದ್ದೇಶ, ವ್ಯಾಪ್ತಿ, ಸ್ವರೂಪ, ವಿಧಾನಗಳ ಕುರಿತು ವಿವರಣೆ ನೀಡಿ, ಎರಡನೆಯ ಅಧ್ಯಾಯದಲ್ಲಿ ಪೂರ್ವ ಅಧ್ಯಯಗಳ ಸಮೀಕ್ಷೆ ಮಾಡಿದ್ದಾರೆ. ಅಂದರೆ ಕೂಡಲಸಂಗಮ ಕ್ಷೇತ್ರವನ್ನು ಕುರಿತು ಇಲ್ಲಿಯವರೆಗೆ ಪ್ರಕಟಿತ ಸಾಹಿತ್ಯದ ಸಮಗ್ರ ವಿವರಣೆ ನೀಡಿದ್ದಾರೆ.

ಮೂರನೆಯ ಅಧ್ಯಾಯದಲ್ಲಿ ಕೂಡಲಸಂಗಮದ ಸ್ಥಳನಾಮ ಅಧ್ಯಯನವನ್ನು ಮೂರು ನೆಲೆಯಲ್ಲಿ ಮಾಡಿದ್ದಾರೆ. ೧. ಲಿಖಿತ ಆಧಾರಗಳು, ೨. ಮೌಖಿಕ ಆಧಾರಗಳು, ೩. ಐತಿಹ್ಯಗಳು ಈ ಮೂರು ಆಯಾಮಗಳಲ್ಲಿ ಕೂಡಲಸಂಗಮದ ಪ್ರಾಚೀನತೆ-ವೈಶಿಷ್ಟö್ಯತೆಗಳನ್ನು ವಿವರಿಸುವ ಪ್ರಯತ್ನ ಮಾಡಿದ್ದಾರೆ.

ನಾಲ್ಕನೆಯ ಅಧ್ಯಾಯದಲ್ಲಿ ಕೂಡಲಸಂಗಮದಲ್ಲಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ಧಾರ್ಮಿಕ ಸಂಪ್ರದಾಯಗಳ ಕುರಿತು ಚರ್ಚಿಸಿದ್ದಾರೆ. ಶೈವಸಂಪ್ರದಾಯ, ನಾಥ ಸಂಪ್ರದಾಯ, ಕಾಳಾಮುಖ ಸಂಪ್ರದಾಯಗಳ ಪರಂಪರೆ ಕುರಿತು ಸಮಗ್ರವಾದ ವಿವರಣೆ ನೀಡಿದ್ದಾರೆ.

ಐದನೆಯ ಅಧ್ಯಾಯದಲ್ಲಿ ಕೂಡಲಸಂಗಮದ ಸ್ಮಾರಕಗಳು ಮತ್ತು ಆಚರಣೆಗಳ ಕುರಿತು ವಿಶ್ಲೇಷಣೆ ಮಾಡಿದ್ದಾರೆ. ಕೂಡಲಸಂಗಮ ಕ್ಷೇತ್ರದಲ್ಲಿರುವ ಸಂಗಮನಾಥ ದೇವಾಲಯವನ್ನು ಒಳಗೊಂಡ ಇತರ ದೇವಾಲಯಗಳು, ಅಲ್ಲಿ ನಡೆಯುವ ಜಾತ್ರೆ ಮತ್ತು ಉತ್ಸವಗಳನ್ನು ಕುರಿತು ಕ್ಷೇತ್ರಕಾರ್ಯ ಆಧಾರಿತ ಮಾಹಿತಿಗಳಿಂದ ಪರಿಪೂರ್ಣವಾದ ವಿವರಣೆಗಳನ್ನು ಕೊಟ್ಟಿದ್ದಾರೆ.

ಆರನೆಯ ಅಧ್ಯಾಯದಲ್ಲಿ ಬಸವಣ್ಣನವರ ಕಾರಣದಿಂದ ಕೂಡಲಸಂಗಮ ಇತರ ಕೆಲವು ಕ್ಷೇತ್ರಗಳೊಂದಿಗೆ ಅತ್ಯಂತ ನಿಕಟವಾದ ಸಂಬಂಧವನ್ನು ಹೊಂದಿತ್ತು. ಬಸವಣ್ಣನವರು ಜನ್ಮತಾಳಿದ ಬಸವನ ಬಾಗೇವಾಡಿ, ಬಸವಣ್ಣನವರ ಕಾಯಕಕ್ಷೇತ್ರ ಬಸವಕಲ್ಯಾಣ ಮತ್ತು ತಂಗಡಗಿ ಈ ಮೂರು ಕ್ಷೇತ್ರಗಳು ಕೂಡಲಸಂಗಮದೊಂದಿಗೆ ಹೊಂದಿರುವ ಸಂಬಂಧದ ಎಳೆಗಳನ್ನು ಅನೇಕ ಆಧಾರಗಳಿಂದ ಗುರುತಿಸುತ್ತ, ಕೂಡಲಸಂಗಮ ಹೇಗೆ ಒಂದು ಪವಿತ್ರ ಕ್ಷೇತ್ರವಾಗಿ ರೂಪುಗೊಂಡಿತು ಎಂಬುದನ್ನು ಕುರಿತು ತಿಳಿಸಿಕೊಟ್ಟಿದ್ದಾರೆ.

ಅಧ್ಯಾಯ ಏಳು- ಕೂಡಲಸಂಗಮ ಮತ್ತು ಬಸವಣ್ಣನ ಸಂಬಂಧ ಕುರಿತಾಗಿದೆ. ಬಸವಣ್ಣನವರು ಎಳೆಯ ವಯಸ್ಸಿನಲ್ಲಿಯೇ ಸಂಗಮಕ್ಕೆ ಬಂದು, ಇಲ್ಲಿ ಅಧ್ಯಯನ ಮಾಡಿ, ತಮ್ಮ ಭವಿಷ್ಯದ ಬದುಕನ್ನು ಕಟ್ಟಿಕೊಂಡ ನಿರ್ಣಾಯಕ ಘಟ್ಟವನ್ನು ಕುರಿತು ಇಲ್ಲಿ ಚರ್ಚೆ ಮಾಡಲಾಗಿದೆ. ಸಂಗಮನಾಥನ ಸಾನ್ನಿಧ್ಯದಲ್ಲಿ ಬಸವಣ್ಣನವರು ತಮ್ಮ ಬಾಲ್ಯದ ಅಧ್ಯಯನದ ದಿನಗಳನ್ನು ಕಳೆದ ಸ್ಮರಣೀಯ ಸಂಗತಿಗಳನ್ನು ಕುರಿತು ಲೇಖಕರು ತುಂಬ ಮಾರ್ಮಿಕವಾದ ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ.

ಎಂಟನೆಯ ಅಧ್ಯಾಯದಲ್ಲಿ- ಕೂಡಲಸಂಗಮ : ಅಭಿವೃದ್ಧಿ ಪ್ರಾಧಿಕಾರ ಕುರಿತಾಗಿದೆ. ಮುಖ್ಯಮಂತ್ರಿಗಳಾಗಿದ್ದ ಜೆ.ಎಚ್.ಪಟೇಲ್ ಅವರು ಬಸವಣ್ಣನವರ ಪರಮಾಪ್ತ ಭಕ್ತರು. ಬಸವಣ್ಣನವರ ತತ್ವ ಸಂದೇಶಗಳನ್ನು ತಮ್ಮ ಜೀವನದುದ್ದಕ್ಕೂ ಪರಿಪಾಲಿಸಿಕೊಂಡು ಬಂದವರು. ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧಿಕೃತ ಅನುಮೋದನೆ ನೀಡಿದರು. ಜೆ.ಎಚ್.ಪಟೇಲ್ ಅವರ ಇಚ್ಛಾಶಕ್ತಿ ಕಾರಣವಾಗಿ, ಕೂಡಲಸಂಗಮ ಒಂದು ಅಂತರಾಷ್ಟ್ರೀಯ ಕೇಂದ್ರವಾಗಿ ಬೆಳೆದು ಬಂದ ಇತಿಹಾಸವನ್ನು ಮೊದಲ ಬಾರಿಗೆ ಇಲ್ಲಿ ಸವಿವರವಾಗಿ ದಾಖಲಿಸಿದ್ದಾರೆ.

ಕೊನೆಯ ಅಧ್ಯಾಯದಲ್ಲಿ- ಸಮಾರೋಪದಲ್ಲಿ ಅಧ್ಯಯನದ ಫಲಿತಗಳನ್ನು ಅತ್ಯಂತ ಸಂಕ್ಷಿಪ್ತವಾಗಿಯಾದರೂ ಸಮಗ್ರ ಮಹಾಪ್ರಬಂಧದ ಒಟ್ಟು ಸಾರವನ್ನು ನಿರೂಪಿಸಿದ್ದಾರೆ.

ಡಾ. ರವೀಂದ್ರನಾಥ ಅವರು ಮುನ್ನುಡಿಯಲ್ಲಿ ‘ಬಸವಣ್ಣನವರ ಸಾಂಸ್ಕೃತಿಕ ವ್ಯಕ್ತಿತ್ವ ರೂಪಗೊಳ್ಳಲಿಕ್ಕೆ ಕಾರಣವಾದ ಬಾಗೇವಾಡಿ-ಕಲ್ಯಾಣಗಳಂತೆ ಕೂಡಲಸಂಗಮ ನಿರ್ವಹಿಸಿದ ಮಹತ್ವವನ್ನು ಸಂಶೋಧನಾತ್ಮಕವಾಗಿ ನಿರೂಪಿಸಲಾಗಿದೆ’ ಎಂದು ಹೇಳಿರುವುದು ಕೃತಿಯ ಮಹತ್ವವನ್ನು ತಿಳಿಸುತ್ತದೆ. ಹಿರಿಯ ವಿದ್ವಾಂಸರಾದ ಡಾ. ಬಿ. ವಿ. ಶಿರೂರ ಅವರು ಈ ಕೃತಿಯ ಮೌಲಿಕತೆಯನ್ನು ಕುರಿತು- ‘ಕೂಡಲಸಂಗಮ ಮತ್ತು ಬಸವಣ್ಣನಿಗೆ ಇರುವ ಸಂಬಂಧವನ್ನು ಬಹುಮೂಲದ ಆಕರಗಳಿಂದ ನಿರೂಪಿಸಿದ್ದಾರೆ….ಬಸವಣ್ಣನ ಬದುಕಿನಲ್ಲಿ ಪ್ರಮುಖ ಪಾತ್ರವಹಿಸಿದ ಕೂಡಲಸಂಗಮವನ್ನು ಕುರಿತು ಮಾಹಿತಿಪೂರ್ಣ ಅಧ್ಯಯನ’ ಇಲ್ಲಿ ನಡೆದಿದೆ ಎಂದು ಶುಭ ಹಾರೈಸಿದ್ದಾರೆ.

‘ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂಬ ಘೋಷಣೆಯ ಈ ಸಂದರ್ಭದಲ್ಲಿ ಬಸವಣ್ಣನವರ ಸಾಂಸ್ಕೃತಿಕ ವ್ಯಕ್ತಿತ್ವವನ್ನು ರೂಪಿಸಿದ ಕೂಡಲಸಂಗಮವನ್ನು ಕುರಿತು ಡಾ. ಕಾಂತೇಶರೆಡ್ಡಿ ಗೋಡಿಹಾಳ ಅವರು ಅಧ್ಯಯನ ಮಾಡಿದ ಈ ಕೃತಿಯನ್ನು ಸೊಂಡೂರಿನ ನಮ್ಮ ಶ್ರೀಮಠದ ಪ್ರಭುದೇವರ ಜನಕಲ್ಯಾಣ ಸಂಸ್ಥೆ ಪ್ರಕಟಿಸುತ್ತಿರುವುದು ಸಮಯೋಚಿತವಾಗಿದೆ’ ಎಂದು ಪೂಜ್ಯ ಶ್ರೀ ಪ್ರಭು ಮಹಾಸ್ವಾಮಿಗಳವರು ಕೃತಿ ಪ್ರಕಟಣೆಯ ಔಚಿತ್ಯವನ್ನು ಅರ್ಥಪೂರ್ಣವಾಗಿ ಹೇಳಿದ್ದಾರೆ.

ಒಟ್ಟಾರೆ, ಬಸವಾದಿ ಶಿವಶರಣರ ಇತರ ಕ್ಷೇತ್ರಗಳನ್ನು ಕುರಿತು ಇದೇ ಮಾದರಿಯಲ್ಲಿ ಅಧ್ಯಯನ ನಡೆಯಬೇಕು ಎನ್ನುವ ರೀತಿಯಲ್ಲಿ ಡಾ. ಕಾಂತೇಶರೆಡ್ಡಿ ಅವರು ತುಂಬ ಮುತುವರ್ಜಿ ವಹಿಸಿ ಈ ಮಹಾಪ್ರಬಂಧವನ್ನು ರಚಿಸಿದ್ದಾರೆ. ಈಗಾಗಲೇ ಅವರು ‘ಧರ್ಮ ಕಲ್ಯಾಣ : ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯ ಕುರಿತು ಸಂಶೋಧನೆಯನ್ನು ಮಾಡಿದ್ದರು. ಬಸವಕಲ್ಯಾಣದಂತೆಯೇ ಶರಣಧರ್ಮದ ಬೆಳವಣಿಗೆಯಲ್ಲಿ ‘ಧರ್ಮಕಲ್ಯಾಣ’ದ ಪಾತ್ರವನ್ನು ಗುರುತಿಸುವ ಪ್ರಾಮಾಣಿಕ ಪ್ರಯತ್ನವನ್ನು ಡಾ. ಕಾಂತೇಶರೆಡ್ಡಿ ಅವರು ಮಾಡಿದ್ದರು. ಶರಣ ಸಂಸ್ಕೃತಿ ಅಧ್ಯಯನ ಪರಂಪರೆಯನ್ನು ಮುಂದುವರಿಸಿದ ಡಾ. ಕಾಂತೇಶರೆಡ್ಡಿ ಅವರು ಕೂಡಲಸಂಗಮ ಸಾಂಸ್ಕೃತಿಕ ಅಧ್ಯಯನ ಕೃತಿಯ ಮೂಲಕ ಯುವ ಸಂಶೋಧಕರಿಗೆ ಒಂದು ಆದರ್ಶವನ್ನು ತೋರಿದ್ದಾರೆ. ಮೌಲಿಕ ಕೃತಿ ರಚನೆ ಮಾಡಿದ ಡಾ. ಕಾಂತೇಶರೆಡ್ಡಿ ಅವರಿಗೂ, ಅವರಿಗೆ ಸೂಕ್ತ ಸಮರ್ಥ ಮಾರ್ಗದರ್ಶನ ಮಾಡಿದ ಡಾ. ಕೆ. ರವೀಂದ್ರನಾಥ ಅವರಿಗೂ ಪುಸ್ತಕ ಪ್ರಕಟಣೆ ಮಾರಾಟ ಹೋರಾಟದ ಜಂಜಾಡದಲ್ಲಿ ಪುಸ್ತಕ ಸಂಸ್ಕೃತಿಯೇ ಕಣ್ಮರೆಯಾಗುವ ಕಾಲಘಟ್ಟದಲ್ಲಿ ಇಂತಹ ಅಪರೂಪದ ಅಕಾಡೆಮಿಕ್ ನೆಲೆಯ ಸಂಶೋಧನಾ ಕೃತಿಯನ್ನು ಪ್ರಕಟಿಸಿದ ಸೊಂಡೂರು ವಿರಕ್ತಮಠದ ಪೂಜ್ಯ ಶ್ರೀ ಪ್ರಭು ಮಹಾಸ್ವಾಮಿಗಳವರಿಗೂ ಸಮಸ್ತ ಕನ್ನಡಿಗರ ಪರವಾಗಿ ಅನಂತ ವಂದನೆ-ಅಭಿನಂದನೆಗಳು.

*ಪ್ರಕಾಶ ಗಿರಿಮಲ್ಲನವರ*
ಬೆಳಗಾವಿ
ಮೊ: ೯೯೦೨೧೩೦೦೪೧

Leave a Reply

Your email address will not be published. Required fields are marked *

error: Content is protected !!