ಮೈಸೂರು-07ಸಮೀಪದ ಸುತ್ತೂರು ಕ್ಷೇತ್ರದಲ್ಲಿ ಸಾವಯವ ಕೃಷಿ ಪರಿವಾರ ಸುಭೀಕ್ಷಾ ಆಗ್ರ್ಯಾನಿಕ್ ಫಾರ್ಮಸ್೯ ಮಲ್ಟಿಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಲಿ. ಇವರು ಆಯೋಜಿಸಿದ್ದ ಕನ್ನೇರಿಯ ಮಹಾಸಮಾವೇಶದ ಅನುವರ್ತಿ ಸಭೆ ಭೂತಾಯಿ ಕಾಯಕಕ್ಕೆ ಧರ್ಮ ಕಾಯ್ವರ ಹೆಗಲು ಕಾರ್ಯಕ್ರಮ ಜರುಗಿತು.
ಈ ಸಮಾರಂಭದಲ್ಲಿ ಕರ್ನಾಟಕದ ಮೂಲೆ ಮೂಲೆಯಿಂದ ಸುಮಾರು ಒಂದು ನೂರು ಸರ್ವಸಂಪ್ರದಾಯದ ಮಠಾಧೀಶರು ಆಗಮಿಸಿದ್ದರು.
ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದ ಸುತ್ತೂರು ಕ್ಷೇತ್ರದ ಜಗದ್ಗುರು ಶ್ರೀ. ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಭೂತಾಯಿ ಕಾಯಕಕ್ಕೆ ಧರ್ಮ ಕಾಯ್ವರ ಹೆಗಲು ತುಂಬಾ ಅವಶ್ಯಕತೆ ಇದೆ. ಇವತ್ತು ಮಠ ಮಾನ್ಯಗಳು ಬದುಕಿದ್ದಾವೆ ಎಂದರೆ ಅದಕ್ಕೆ ಕೃಷಿಕರೇ ಕಾರಣ. ರೈತರು ಚೆನ್ನಾಗಿದ್ದರೆ ಮಾತ್ರ ಮಠ ಮಾನ್ಯಗಳು ಚೆನ್ನಾಗಿರಲು ಸಾಧ್ಯ. ಅದಕ್ಕೆ ಸಾವಯವ ಕೃಷಿ ಮಾಡಿದರೆ ಎಲ್ಲರಿಗೂ ಉಳಿಗಾಲ ಇದೆ. ಇದನ್ನು ಅರ್ಥೈಸಿಕೊಂಡು ಎಲ್ಲಾ ಮಠಾಧೀಶರು ರೈತರಿಗೆ ಬೆನ್ನೆಲುಬಾಗಿ ನಿಲ್ಲುವುದು ಅವಶ್ಯಕತೆ ಇದೆ ಎಂದರು.
ಕನ್ನೇರಿ ಸಿದ್ಧಗೀರಿ ಮಠದ ಶ್ರೀ ಜಗದ್ಗುರು ಅದೃರ್ಶ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ಕೂಡ ಇವತ್ತು ವಿಷಪೂರಿತ ಆಹಾರವನ್ನು ಸೇವಿಸುತ್ತಿದ್ದೇವೆ. ಇದರಿಂದ ನಮಗೆಲ್ಲರಿಗೂ ತೊಂದರೆ ಕಟ್ಟಿಟ್ಟ ಬುತ್ತಿ. ಇದನ್ನು ಅರ್ಥೈಸಿಕೊಂಡು ಎಲ್ಲರೂ ಒಟ್ಟಾಗಿ ಸೇರಿ ಭೂತಾಯಿಯ ರಕ್ಷಣೆ ಮಾಡುವುದರ ಜೊತೆಗೆ ಎಲ್ಲಾ ಮಠಾಧೀಶರು ಮುಂದೆ ಬರುವ ಅವಶ್ಯಕತೆ ಇದೆ ಎಂದರು.
ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರೈತರೆಲ್ಲ ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿರುವುದನ್ನು ನೋಡಿದ್ದೇವೆ. ಅಲ್ಲದೆ, ಕೃಷಿಕರ ಮಕ್ಕಳಿಗೆ ಹೆಣ್ಣು ಕೊಡಲು ಹಿಂಜರಿಯುತ್ತಾರೆ. ನಿಜವಾದ ಒಡೆಯ ಕೃಷಿಕ. ಅದಕ್ಕೆ ಕೃಷಿಕರು ತಮ್ಮ ಹೆಣ್ಣು ಮಕ್ಕಳನ್ನು ಕೃಷಿಕರಿಗೆ ಕೊಟ್ಟು ಮದುವೆ ಮಾಡುವ ಮುಖಾಂತರ ಕೃಷಿಯಲ್ಲಿಯೂ ಕೂಡ ಹೆಚ್ಚು ಸಾಧಿಸಬಹದು ಎಂದು ತಿಳಿಸುವ ಅವಶ್ಯಕತೆ ಇದೆ. ನೌಕರಿಯಲ್ಲಿ ಬೇಡುವ ಕೆಲಸ ನಡೆಯುತ್ತದೆ. ಆದರೆ ಕೃಷಿಕ ಕೊಡುವ ಕೆಲಸ ಮಾಡುತ್ತಾನೆ. ಅಂದರೆ ದೇಶದ ನಿಜವಾದ ದೊರೆ ರೈತನೇ ಆಗಿದ್ದಾನೆ ಎಂದರು.
ಸಾವಯವ ಕೃಷಿ ಪರಿವಾರದ ಆನಂದ ಜಿ. ಮಾತನಾಡಿ, ಇವತ್ತು ಎಲ್ಲ ಸಂಪ್ರದಾಯದ ಮಠಾಧೀಶರು ಒಂದೇ ಸೂರಿನಡಿ ಬರುತ್ತಿರುವುದು ನಮಗೆ ಅತೀವ ಸಂತೋಷ ತಂದಿದೆ. ಎಲ್ಲದಕ್ಕಿಂತ ದೇಶ ದೊಡ್ಡದ್ದು, ದೇಶದಲ್ಲಿರುವವರೆಲ್ಲರೂ ಕೂಡ ಒಟ್ಟಿಗೆ ಕಾರ್ಯ ಮಾಡಿದರೆ ಖಂಡಿತವಾಗಿ ಮುಂದೆ ಬರಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಜೆಎಸ್ಎಸ್ ನ ಕೃಷಿ ವಿಜ್ಞಾನ ಕೇಂದ್ರದ ಎಂ.ಡಿ. ಉಪಸ್ಥಿತರಿದ್ದರು.
ಶಿವಗಂಗಾ ಕ್ಷೇತ್ರದ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಬಳ್ಳಾರಿ ಕಲ್ಯಾಣ ಮಠದ ಕಲ್ಯಾಣ ಸ್ವಾಮೀಜಿ, ಕೊಟ್ಟೂರಿನ ಸಿದ್ದಲಿಂಗ ಶಿವಾಚಾರ್ಯರು, ಕೊಣ್ಣೂರ ಮರಡಿಮಠದ ಪವಾಡೇಶ್ವರ ಸ್ವಾಮೀಜಿ, ನಂದಿಪುರದ ಮಹೇಶ್ವರ ಸ್ವಾಮೀಜಿ ಸೇರಿದಂತೆ ನೂರಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗುವುದರ ಮೂಲಕ ಹಾಗೆಯೇ ಕರ್ನಾಟಕದ ಸಾವಯವ ಕೃಷಿ ತಜ್ಞರು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿ ವಿಷ ರಹಿತ ಬೆಳೆಯನ್ನು ಹೇಗೆ ಬೆಳೆಯಬಹುದು ಎಂದು ಚಿಂತನೆ ಮಾಡುವುದರ ಮೂಲಕ ಅದ್ಬುತವಾದ ಕಾರ್ಯಕ್ರಮ ನಡೆಯಿತು. ಕನ್ನೇರಿಯ ಮಹಾಸಮಾವೇಶದ ಅನುವರ್ತಿ ಸಭೆ ಪ್ರತಿ ಜಿಲ್ಲೆಯಲ್ಲಿ ಜರುಗಿ ಅಲ್ಲಿ ಜಿಲ್ಲೆಯ ಮಠಾಧೀಶರ ಒಡಗೂಡಿ ಸಾವಯವ ಕೃಷಿ ಪರಿವಾರ ಕಾರ್ಯನಿರ್ವಹಿಸಲಿದೆ ಎಂದು ಆನಂದ ಜಿ. ತಿಳಿಸಿದರು.