ಬೆಳಗಾವಿ-05: ವಾಲ್ಮೀಕಿ ನಾಯಕ ಸಮಾಜದ ಪರ್ಯಾಯ ಪದವಾದ ‘ಬೇರಡ’ ಪದವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಬೆಳಗಾವಿ ಜಿಲ್ಲಾ ವಾಲ್ಮೀಕಿ ಸಮಾಜ ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.
ರಾಜಶೇಖರ ತಳವಾರ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ರಾಜ್ಯ ಉಪಾಧ್ಯಕ್ಷ ಹಾಗೂ ಬೆಳಗಾವಿ ಜಿಲ್ಲೆ ವಾಲ್ಮೀಕಿ ಸಮಾಜದ ಅಧ್ಯಕ್ಷರು ಮಾತನಾಡುತ್ತಾ, ಪರಿಶಿಷ್ಟ ಪಂಗಡದ ಯಾವೊಂದು ಸಂಬಂಧ ವಿಲ್ಲದ ಜಾತಿಗಳಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರಗಳನ್ನು ಕೊಡುವುದನ್ನು ನಾವು ಕಾಣುತ್ತಿದ್ದೇವೆ. ಆದರೆ ನೈಜ ವಾಲ್ಮೀಕಿ ನಾಯಕ ಸಮಾಜದ ಪರ್ಯಾಯ ಪದ “ಬೇರಡ” ಶಬ್ದಕ್ಕೆ ಪರಿಶಿಷ್ಟ ಪಂಗಡದ ಜಾತಿ ಪತ್ರ ನೀಡದಿರುವುದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಕಾರಣ ಈ ಕೂಡಲೇ ಸರ್ಕಾರ ಮಂತ್ರಿ ಮಂಡಲದ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ವಾಲ್ಮೀಕಿ ನಾಯಕ ಸಮಾಜದ ಬೇರಡ ಹೆಸರು ಉಳ್ಳ ಸಮಾಜ ಬಾಂಧವರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ತಿಳಿಸಿದರು.
ವಾಲ್ಮೀಕಿ ನಾಯಕ ಸಮಾಜದ ನೈಜ ಪರ್ಯಾಯ ಪದ ಬೇರಡ ದಾಖಲೆ ಇದ್ದವರಿಗೆ ಈ ಕೂಡಲೇ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡಬೇಕು. ಬೇರಡ ಇದು ಅಪಭ್ರಂಶ ವಾಗಿದೆ ಇದು ತಾಂತ್ರಿಕ ದೋಷದಿಂದಾಗಿ ಹಾಗೂ ಮರಾಠಿ ಭಾಷಿಕರು ಉಚ್ಛರಿಸುವ ಕಾರಣ ಶಬ್ದಗಳ ವ್ಯತ್ಯಾಸ ದಿಂದಾಗಿ ಆಗಿರುವ ದೋಷ ವನ್ನು ಸರಿಪಡಿಸುವ ಕೆಲಸ ಯುದ್ಧೋಪಾದಿಯಲ್ಲಿ ಜರುಗಿಸಬೇಕೆಂದು ಆಗ್ರಹಿಸಿದರು.
ಈಗಾಗಲೇ ನೌಕರಿಯಲ್ಲಿ ಬಡ್ತಿ ಉದ್ಯೋಗದಲ್ಲಿ ಅರ್ಜಿ ಸಲ್ಲಿಸುವ ಬೇರಡ ದಾಖಲಾತಿ ಇರುವ ವಾಲ್ಮೀಕಿ ನಾಯಕ ಸಮಾಜದ ಬಾಂಧವರಿಗೆ ತುರ್ತಾಗಿ ನ್ಯಾಯ ಕೊಡಿಸುವ ವ್ಯವಸ್ಥೆ ಆಗಬೇಕು. ಸ್ಥಾನಿಕ ಚೌಕಾಶಿ ಗೆ ಆದ್ಯತೆ ನೀಡಬೇಕು ಹಾಗೂ ತಹಸೀಲ್ದಾರ್ ಕಂದಾಯ ನಿರೀಕ್ಷಕರು ಸ್ಥಳೀಯವಾಗಿ ಇರುವ ಸಿಬ್ಬಂದಿ ನೇಮಕ ಮಾಡಿ ನೈಜ ವಾಲ್ಮೀಕಿ ಸಮುದಾಯದ ಬಾಂಧವರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಉದ್ಯೋಗದಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ವಾಲ್ಮೀಕಿ ನಾಯಕ ಸಮಾಜದ ಬಾಂಧವರಿಗೆ ಅವರ ದಾಖಲಾತಿ ಯಲ್ಲಿ ಬೇರಡ ಇದ್ದರೂ ಸಹ ಅದನ್ನು ಪರಿಶಿಷ್ಟ ವಂಗಡದ ಅಭ್ಯರ್ಥಿಗಳು ಎಂದು ಪರಿಗಣಿಸಿ ನ್ಯಾಯ ಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಇದೇ ವೇಳೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ಬೆಳಗಾವಿ ಜಿಲ್ಲೆಯ ವಾಲ್ಮೀಕಿ ಸಮಾಜದ ಪ್ರಧಾನ ಕಾರ್ಯದರ್ಶಿ ದಿನೇಶ್ ಚಂದ್ರಶೇಖರ ಬಾಗಡೆ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ರಾಜ್ಯ ಅಧ್ಯಕ್ಷ ಪಾಂಡುರಂಗ ನಾಯಕ, ಸಂಜಯ ನಾಯಕ, ಎಸ್. ಎಸ್. ನಾಯ್ಕರ್, ನಾಗರಾಜ ದುಂದುರ, ಭೀಮರಾಯ್ ದುರ್ಗನ್ನವರ್, ರವಿ ನಾಯಕ, ಸೇರಿದಂತೆ ಸಮಾಜದ ಅನೇಕ ಮುಖಂಡರು, ನೂರಾರು ಜನ ಮಹಿಳೆಯರು ಹಾಜರಿದ್ದರು.