ರಾಮದುರ್ಗ-05: ಪ್ರತಿಯೊಬ್ಬ ಸಾಧಕರ ಭಾವಚಿತ್ರವೂ ಒಂದು ಪಠ್ಯವಾಗಿದೆ.ಒಂದು ಭಾವಚಿತ್ರ ನೋಡಿದಾಕ್ಷಣವೇ ಆ ವ್ಯಕ್ತಿಯ ಎಲ್ಲ ಭಾವನೆಗಳೂ ನಮ್ಮ ಕಣ್ಣು ಮುಂದೆ ವ್ಯಕ್ತಿ ರೂಪವಾಗುವುದರೊಂದಿಗೆ ಆ ಭಾವಚಿತ್ರ ತನ್ನದೇ ಆದ ಭಾವನೆಗಳ ಬಣ್ಣವನ್ನು ಪಡೆಯುತ್ತದೆ ಎಂದು ಬೆಳಗಾವಿ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಯಲ್ಲಪ್ಪ ಹಿಮ್ಮಡಿ ಅಭಿಪ್ರಾಯಸಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸಹಯೋಗದಲ್ಲಿ ಮಂಗಳವಾರ ನಡೆದ ಬಸವರಾಜ ಕಟ್ಟೀಮನಿ ಭಾವಚಿತ್ರ ಅನಾವರಣ ಹಾಗೂ ಉಪನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ ಅವರ ಭಾವಚಿತ್ರ ನೋಡಿದಾಕ್ಷಣ ಶಿಕ್ಷಣ ಮತ್ತು ಸಂವಿಧಾನದ ರೂಪಕಗಳು ಕಣ್ಣೆದುರು ನಿಂತಂತೆ, ಬಸವರಾಜ ಕಟ್ಟೀಮನಿಯವರ ಭಾವಚಿತ್ರ ನೋಡಿದಾಕ್ಷಣ ಓದಿದ ಅವರ ಕಾದಂಬರಿಗಳು ಮತ್ತು ನಿಷ್ಟುರ ವ್ಯಕ್ತಿತ್ವ ಮೂಡಿ ನಿಲ್ಲುತ್ತವೆ.
ಸಾಮಾಜಿಕ ಅಸಮಾನತೆಗೆ ಕಾರಣವಾಗಿರುವ ವ್ಯವಸ್ಥೆಯನ್ನು ಅರ್ಥೈಸುವ ಸಾಹಿತ್ಯವನ್ನು ಯುವಕರಿಗೆ ತಲುಪಿಸಿ ಅವರ ವಿಚಾರ ಪ್ರಜ್ಞೆಯನ್ನು ಜಾಗೃತಿಗೊಳಿಸಿದರೆ, ಅವರೇ ಮುಂದಾಗಿ ಸಮಾಜದ ಪ್ರಗತಿಗೆ ಎದೆಯೊಡ್ಡಿ ನಿಲ್ಲುತ್ತಾರೆಂದ ಹಿಮ್ಮಡಿಯವರು ಮುಂದುವರೆದು, ಸಾಹಿತ್ಯ ಸ್ವಪ್ರತಿಷ್ಠೆಯ ವಸ್ತುವಲ್ಲ, ಬದಲಿಗೆ ಪ್ರಗತಿಗೆ ಅಡ್ಡಿಯಾಗಿರುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧದ ಅಸ್ತ್ರವೆಂದು ಕಟ್ಟೀಮನಿ ಭಾವಿಸಿದ್ದರು ಎಂದರು.
ಬಸವರಾಜ ಕಟ್ಟೀಮನಿ ಅವರ ಸಾಹಿತ್ಯ ಕುರಿತು ಉಪನ್ಯಾಸ ನೀಡಿದ ಕವಿ, ಅನುವಾದಕ ವಿಠ್ಠಲ ದಳವಾಯಿ ಮಾತನಾಡಿ, ಕಟ್ಟೀಮನಿಯವರ ಬರಹ ಸಮಾಜದಲ್ಲಿನ ಮೌಢ್ಯಗಳನ್ನು ಕತ್ತರಿಸುವ ಕತ್ತಿಯ ಮೊನೆಯಂತಿದೆ. ದುಡಿಯುವ ಜನಗಳ ಪರವಾಗಿ ಸಾಹಿತ್ಯ ರಚಿಸಿದ ಕಟ್ಟೀಮನಿಯವರು ಕುವೆಂಪು ನಂತರದ ಬಹು ಮುಖ್ಯ ಲೇಖಕರಲ್ಲಿ ಒಬ್ಬರಾಗಿದ್ದರು. ಬದುಕಿನಲ್ಲಿ ಪಟ್ಟ ಪಾಡನ್ನು ಸಾಹಿತ್ಯವಾಗಿಸುತ್ತಲೇ ಕಟ್ಟಿಮನಿ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದವರು ಎಂದರು.
ಕಾಲೇಜಿನ ಸಭಾಭವನದಲ್ಲಿ ಬಸವರಾಜ ಕಟ್ಟಿಮನಿ ಭಾವಚಿತ್ರವನ್ನು ಪ್ರತಿಷ್ಠಾನದ ಅಧ್ಯಕ್ಷ ಡಾ. ಯಲ್ಲಪ್ಪ ಹಿಮ್ಮಡಿ ಹಾಗೂ ಅತಿಥಿಗಳು ಅನಾವರಣಗೊಳಿಸಿದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಡಿ. ಡಿ. ಮುಜಾವರ ವಹಿಸಿದ್ದರು.
ಕಾರ್ಯಕ್ರಮದ ಸದಸ್ಯ ಸಂಚಾಲಕ ಪ್ರೊ. ಎಸ್. ಜಿ. ಚಿಕ್ಕನರಗುಂದ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ
ನಿವೃತ್ತ ಅಧ್ಯಾಪಕ ಡಾ. ಶಿವಾಜಿ ಕೊಡತೆ, ಸ್ಥಳೀಯ ಪದವಿ ಕಾಲೇಜಿನ ಅಧ್ಯಾಪಕರಾದ ಡಾ. ರಾಜು ಕಂಬಾರ, ಡಾ. ಯಮನಪ್ಪ ಹೊಸಮನಿ, ಡಾ. ಎಂ. ಎನ್. ಭಜಂತ್ರಿ, ಸಮಾಜ ಕಲ್ಯಾಣ ಇಲಾಖೆಯ ಶ್ರೀಶೈಲ ತುಳಸಿಗೇರಿ, ಹೆಸ್ಕಾಂ ನ ಶಶಿಕಾಂತ ಕಂಬಣ್ಣವರ, ಶಶಿಕಾಂತ ನೆಲ್ಲೂರ, ಹನುಮಂತ ಯರಗಟ್ಟಿ, ಪ್ರೊ. ಬಿ. ಬಿ. ಹರನಟ್ಟಿ, ಅಕ್ಕಮಹಾದೇವಿ ಯತ್ನಟ್ಟಿ, ಮೇಘಾ ಅಥಣಿ, ಭಾರತಿ ಪಮ್ಮಾರ, ಪ್ರೊ. ಎಸ್. ಬಿ. ಕೋತಿನ ಮುಂತಾದವರಿದ್ದರು.
ಪ್ರಾಧ್ಯಾಪಿಕೆ ಎಸ್. ಎ. ಡಂಗಿ ಸ್ವಾಗತಿಸಿದರು.ರಮೇಶ ಮಾಗನೂರ ಮತ್ತು ಎಸ್.ಜಿ. ಹಡಪದ ನಿರೂಪಿಸಿದರು.ಸಿಂಧೂ ಸುರೇಬಾನ ವಂದಿಸಿದರು.
