11/12/2025
IMG-20251119-WA0003

ಬೆಳಗಾವಿ-19: BlackBuck Death Case: 31 ಕೃಷ್ಣಮೃಗಗಳ ಸಾವಿಗೆ ‘Hemorrhagic Septicemia’ ಸೋಂಕು ಕಾರಣ..! ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ ಪನ್ವಾರ್‌ ಮತ್ತು ಹಿರಿಯ ವನ್ಯಜೀವಿ ಪಶುವೈದ್ಯ ಡಾ. ಪ್ರಯಾಗ್ ನೇತೃತ್ವದ ಉನ್ನತ ಮಟ್ಟದ ತಜ್ಞರ ಸಮಿತಿಯು ಮಂಗಳವಾರ ಮೃಗಾಲಯವನ್ನು ಪರಿಶೀಲಿಸಿತು.

ಬೆಳಗಾವಿಯ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳ ಸಾವಿಗೆ ಗಳಲೆ ರೋಗ (ಹೆಮರೈಜಿಕ್ ಸೆಪ್ಟೀಸಿಮಿಯಾ– ಹೆಚ್‌.ಎಸ್‌) ಕಾರಣ ಎಂದು ಪ್ರಯೋಗಾಲಯದ ವರದಿ ಖಚಿತಪಡಿಸಿದೆ.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ ಪನ್ವಾರ್‌ ಮತ್ತು ಹಿರಿಯ ವನ್ಯಜೀವಿ ಪಶುವೈದ್ಯ ಡಾ. ಪ್ರಯಾಗ್ ನೇತೃತ್ವದ ಉನ್ನತ ಮಟ್ಟದ ತಜ್ಞರ ಸಮಿತಿಯು ಮಂಗಳವಾರ ಮೃಗಾಲಯವನ್ನು ಪರಿಶೀಲಿಸಿತು. ಆವರಣದ ಪರಿಸ್ಥಿತಿಗಳು, ಸಾವಿನ ಮಾದರಿಗಳು ಮತ್ತು ಪ್ರಯೋಗಾಲಯ ಸೂಚಕಗಳನ್ನು ಪರಿಶೀಲಿಸಿದ ನಂತರ ಸೋಂಕು ಕುರಿತು ದೃಢೀಕರಣವನ್ನು ನೀಡಿತು.

ಇದೇ ವೇಳೆ ಕಟ್ಟುನಿಟ್ಟಾದ ಜೈವಿಕ ಸುರಕ್ಷತಾ ನಿಯಂತ್ರಣಗಳು, ನೈರ್ಮಲ್ಯ ಅಭಿಯಾನ, ಉಳಿದ ಪ್ರಾಣಿಗಳ ಮೇಲೆ ಕಣ್ಗಾವಲು ಇಡುವಂತೆ ಮೃಗಾಲಯದ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಈ ನಡುವೆ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಂಗಳವಾರ ಮೃಗಾಲಯಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕೃಷ್ಣ ಮೃಗಗಳ ಮಾರಣಹೋಮ ಸಹಿಸಲು ಸಾಧ್ಯವಿಲ್ಲ. ಅಧಿಕಾರಿಗಳು ಸೋಂಕು ತಡೆಗಟ್ಟುವ ಕಾರ್ಯವಿಧಾನಗಳನ್ನು ಬಿಗಿಗೊಳಿಸಬೇಕು. ಎಲ್ಲಾ ಪ್ರಾಣಿಗಳಿಗೆ – ವಿಶೇಷವಾಗಿ ಅಳಿವಿನಂಚಿನಲ್ಲಿರುವ ಮತ್ತು ಹೆಚ್ಚಿನ ಒತ್ತಡದ ಪ್ರಭೇದಗಳಿಗೆ 24/7 ಪಶುವೈದ್ಯಕೀಯ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಬೇಕು. ಹುಲಿಗಳು, ಸಿಂಹಗಳು, ಚಿರತೆಗಳು, ಜಿಂಕೆ ಪ್ರಭೇದಗಳು ಮತ್ತು ಪಕ್ಷಿಗಳ ಮೇಲೆ ತೀವ್ರ ಕಣ್ಗಾವಲಿಡಬೇಕು ಎಂದು ಮೃಗಾಲಯ ಆಡಳಿತಕ್ಕೆ ನಿರ್ದೇಶನ ನೀಡಿದರು.

ಈ ವೇಳೆ ಸೋಂಕು ಪ್ರಸ್ತುತ ಕೃಷ್ಣಮೃಗಗಳಿಗೆ ಸೀಮಿತವಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ಸಚಿವರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಾರಕಿಹೊಳಿಯವರು, ಸೋಂಕು ಮರುಕಳಿಸುವಿಕೆಯನ್ನು ತಡೆಗಟ್ಟಲು ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!