ಬೆಳಗಾವಿ-26 : ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚೆನ್ನಮ್ಮಾಜಿ ಹಾಗೂ ಕಿತ್ತೂರು ಇತಿಹಾಸದ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆಗಳು ನಡೆದು ರಾಷ್ಟ್ರಾದ್ಯಂತ ಅದರ ಅರಿವು ಮೂಡಿಸುವುದಾಗಬೇಕೆಂದು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ, ಸಾಹಿತಿ ಬಸವರಾಜ ಕುಪ್ಪಸ ಗೌಡ್ರ ಹೇಳಿದರು.

ಬೆಳಗಾವಿ ಮಹಾಂತೇಶ ನಗರದ ವಚನ ಪಿತಾಮಹ ಫ.ಗು.ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆಯಿಂದ ಆಯೋಜಿಸಿದ್ದ ಶಿವಾನುಭವ ಗೋಷ್ಠಿಯಲ್ಲಿ ” ಕಿತ್ತೂರು ಚೆನ್ನಮ್ಮ ಮತ್ತು ಕರ್ನಾಟಕ ರಾಜ್ಯೋತ್ಸವ” ವಿಷಯ ಕುರಿತು ಉಪನ್ಯಾಸ ನೀಡಿದ ಅವರು,
ರಾಣಿ ಚೆನ್ನಮ್ಮ ವೀರ ವನಿತೆ ಅಷ್ಟೇ ಅಲ್ಲದೆ ಕಿತ್ತೂರು ಗದ್ದುಗೆ ಗೆ ತನ್ನ ಮಗನನ್ನು ಪಟ್ಟ ಕಟ್ಟುವ ಸ್ವಾರ್ಥ ಬಿಟ್ಟು ಅವನಿಗೆ ಭೈರವ ಕಂಕಣ ಕಟ್ಟಿ ರಣರಂಗಕ್ಕೆ ಕಳಿಸುವ ಮೂಲಕ ಮಾದರಿ ತಾಯಿಯಾಗಿದ್ದಾಳೆ.
ಮೊದಲ ಯುದ್ಧದಲ್ಲಿ ಸೋತು ಸೆರೆಯಲ್ಲಿದ್ದ ಬ್ರಿಟಿಷ್ ಅಧಿಕಾರಿಗಳ ಕುಟುಂಬದವರನ್ನು ಬಿಡುಗಡೆಗೊಳಿಸಿ ಬ್ರಿಟಿಷರ ಮಕ್ಕಳೊಂದಿಗೆ ಆಟವಾಡಿ ‘ವೈರಿಯ ಮಕ್ಕಳು ವೈರಿಗಳಲ್ಲ’
ಎಂಬ ದಿವ್ಯ ಸಂದೇಶವನ್ನು ಜಗತ್ತಿಗೆ ನೀಡಿರುವ ಚೆನ್ನಮ್ಮಾಜಿಯ ತ್ಯಾಗ ಬಲಿದಾನದ ಕಥೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯಗಳಾಗಬೇಕಾಗಿದೆ ಎಂದರು.
ಕನ್ನಡವನ್ನು ಕೇವಲ ರಾಜ್ಯೋತ್ಸವಕ್ಕೆ ಸೀಮಿತಗೊಳಿಸದೆ ಸಮಸ್ತರೂ ಕನ್ನಡವನ್ನು ಉಸಿರಾಗಿಸಿಕೊಂಡಾಗ ಮಾತ್ರ ಕನ್ನಡ ಗಟ್ಟಿಗೊಳ್ಳಲು ಸಾಧ್ಯವೆಂದು ಹೇಳಿದರು.
ಈರಣ್ಣ ದೇಯನ್ನವರ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕಸಾಪ ಕಾರ್ಯದರ್ಶಿ ಎಂ.ವೈ. ಮೆಣಸಿನಕಾಯಿ, ಬಸವರಾಜ್ ಬಿಜ್ಜರಗಿ ಅತಿಥಿಗಳಾಗಿದ್ದರು.
ಅಕ್ಕಮಹಾದೇವಿ ತೆಗ್ಗಿ, ವಿ.ಕೆ. ಪಾಟೀಲ, ಸುವರ್ಣ ಗುಡಸ, ಬಸವರಾಜ ಬಿಜ್ಜರಗಿ, ಶಂಕರ ಗುಡಸ,
ಜಯಶ್ರೀ ಚವಲಗಿ, ಇತರರು ವಚನ ವಿಶ್ಲೇಷಣೆ ಮಾಡಿದರು. ಗುರುಸಿದ್ದಪ್ಪ ರೇವಣ್ಣವರ್, ಶಶಿಭೂಷಣ್ ಪಾಟೀಲ್, ಸುನಿಲ್ ಸಾಣಿಕೊಪ್ಪ, ಬಸವರಾಜ್ ಇಂಚಲ್, ಶಿವಾನಂದ ನಾಯಕ್, ಪೂಜಾರ್ ಇತರರು ಉಪಸ್ಥಿತರಿದ್ದರು.
ಸುರೇಶ ನರಗುಂದ ಸ್ವಾಗತಿಸಿದರು.
ಸಂಗಮೇಶ ಅರಳಿ ನಿರೂಪಿಸಿದರು. ಬಸವರಾಜ್ ಬಿಜ್ಜರಗಿ ದಾಸೋಹ ಸೇವೆಗೈದರು.
ಸಾಮೂಹಿಕ ವಚನ ಪ್ರಾರ್ಥನೆ ನಡೆಯಿತು.
