11/12/2025
IMG-20250916-WA0000

ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ನಂಬರ್‌ ಒನ್‌ ಮಾಡುವುದೇ ಗುರಿ
ಕುಕಡೊಳ್ಳಿ ಗ್ರಾಮದಲ್ಲಿ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯ ಉದ್ಘಾಟನೆ

ಬೆಳಗಾವಿ-16: ವಿದ್ಯಾರ್ಥಿಗಳಿಗೆ ಕಲಿಯುವ ಜಿದ್ದು ಇರಬೇಕು. ಸಮಾಜದಲ್ಲಿ ಉತ್ತಮ ಭವಿಷ್ಯ ರೂಪಿಸಲು ಶಿಕ್ಷಕರು ಶ್ರಮಿಸುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಕರ ಮಾರ್ಗದರ್ಶನ ಪಾಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಕರೆ ನೀಡಿದರು.

ಕುಕಡೊಳ್ಳಿ ಗ್ರಾಮದಲ್ಲಿ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಚಿವರು, ಶಾಲೆಯ ಉನ್ನತೀಕರಣ ಬಹುದಿನದ ಬೇಡಿಕೆಯಾಗಿತ್ತು. ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ಪ್ರೌಢಶಾಲೆಯನ್ನು ಉದ್ಘಾಟನೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಪ್ರೌಢ ಶಾಲೆಗಳಿಗೆ ಬಹಳ ಕಡೆ ಬೇಡಿಕೆ ಇದ್ದು, ಮುಂದಿನ ದಿನಗಳಲ್ಲಿ ಇತರ ಕಡೆಗೂ ಪ್ರೌಢಶಾಲೆಗಳನ್ನು ನೀಡಲಾಗುವುದು. ಪಾಲಕರು ತಮ್ಮ ಮಕ್ಕಳ ಬಗ್ಗೆ ತುಂಬಾ ಕನಸು ಕಾಣುತ್ತಾರೆ. ಹಾಗಾಗಿ ಗುರಿ ಇಟ್ಟುಕೊಂಡು ಓದಿ. ಭವ್ಯ ಭವಿಷ್ಯವನ್ನು ವಿದ್ಯಾರ್ಥಿಗಳು ಕಟ್ಟಿಕೊಳ್ಳಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಕರೆ ನೀಡಿದರು.

ನನಗೆ ಮತ ನೀಡಿದ್ದು ಸಾರ್ಥಕ ಎಂದು ನಿಮಗೆ ಅನಿಸುವ ರೀತಿಯಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಚುನಾವಣೆ ಮುಗಿದ ನಂತರ ನನಗೆ ಕಾಣುವುದು ಅಭಿವೃದ್ಧಿ ಮಾತ್ರ. ಹಾಗಾಗಿ ಗ್ರಾಮೀಣ ಕ್ಷೇತ್ರ ಪ್ರಗತಿ ಕಾಣುತ್ತಿದೆ. ಇನ್ನು 5 ರಿಂದ 10 ವರ್ಷದಲ್ಲಿ ರಾಜ್ಯದ ಜನರು ಬಂದು ನೋಡುವಂತೆ ಅಭಿವೃದ್ಧಿ ಮಾಡುತ್ತೇನೆ ಎಂದು ಸಚಿವರು ಭರವಸೆ ನೀಡಿದರು.

1.25 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮ ದೇವತೆ ದೇವಸ್ಥಾನ ನಿರ್ಮಾಣ ಮಾಡಲಾಗುವುದು. ಶೀಘ್ರವೇ ಶಂಕುಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಸಿದ್ದವ್ವ ಹೊಸೂರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಕೆ.ಆಂಜನೇಯ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಮ್.ಎಸ್.ಮೇದಾರ್, ಎಸ್.ಡಿ.ಎಂ.ಸಿ ಅಧ್ಯಕ್ಷರಾ‍ದ ಮಂಜುನಾಥ ಹುಬ್ಬಳ್ಳಿ, ಪ್ರವೀಣ ರೊಟ್ಟಿ, ನಾಗಪ್ಪ ಕರವಿನಕೊಪ್ಪ, ಹಾಗೂ ಗ್ರಾಮದ‌ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

error: Content is protected !!