ಹಿರೇನಂದಿಹಳ್ಳಿ: ಶಿಕ್ಷಕರ ದಿನಾಚರಣೆಯಲ್ಲಿ ಸನ್ಮಾನ – ವಿದ್ಯಾರ್ಥಿಗಳಿಗೆ 25,000 ರೂ. ಬಹುಮಾನ ಘೋಷಣೆ
ಬೆಳಗಾವಿ(ಚನ್ನಮ್ಮ ಕಿತ್ತೂರು)-14 – ಚೆನ್ನಮ್ಮನ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಶಿಕ್ಷಕರ ದಿನಾಚರಣೆ ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕ ಶ್ರೀ ರಾಜಶೇಖರ ರಗಟಿ ಅವರನ್ನು ಶಾಲೆ ಹಾಗೂ ಹಿರೇನಂದಿಹಳ್ಳಿ ಪ್ರಾಥಮಿಕ ಶಾಲೆಯು ಸನ್ಮಾನಿಸಿತು.
ಸನ್ಮಾನದ ಬಳಿಕ ಮಾತನಾಡಿದ ಅವರು, “ಯಾವುದೇ ಕೆಲಸವನ್ನೂ ಭಗವಂತನ ಸೇವೆ ಎಂದು ಭಾವಿಸಿ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದರೆ ಯಶಸ್ಸು ಮತ್ತು ಗೌರವಗಳು ಸ್ವತಃ ಬಂದು ಸೇರುತ್ತವೆ” ಎಂದು ಅಭಿಪ್ರಾಯಪಟ್ಟರು. ತಮ್ಮ ಪ್ರಶಸ್ತಿಯನ್ನು ವಿದ್ಯಾರ್ಥಿಗಳಿಗೆ ಅರ್ಪಿಸಿದ ಅವರು, “ಮುಂಬರುವ SSLC ಪರೀಕ್ಷೆಯಲ್ಲಿ 625ರಲ್ಲಿ 625 ಅಂಕಗಳನ್ನು ಗಳಿಸುವ ವಿದ್ಯಾರ್ಥಿಗೆ ನನ್ನ ಪ್ರಶಸ್ತಿಯ ಮೊತ್ತ 25,000 ರೂ. ಬಹುಮಾನವಾಗಿ ನೀಡುತ್ತೇನೆ” ಎಂದು ಘೋಷಿಸಿದರು. ಸಮಾಜ ವಿಜ್ಞಾನ ಪ್ರಯೋಗಾಲಯ ನಿರ್ಮಾಣಕ್ಕೆ ಧನಸಹಾಯ ಮಾಡಿದ ಹಳೆಯ ವಿದ್ಯಾರ್ಥಿಗಳನ್ನು ಅವರು ಕೃತಜ್ಞತೆಯಿಂದ ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಬಿ.ಸಿ. ಬಿದರಿ, “ನಮ್ಮ ಶಾಲೆಯ ಪ್ರತಿಯೊಬ್ಬರೂ ಆದರ್ಶ ಶಿಕ್ಷಕರೇ. ರಾಜಶೇಖರ ರಗಟಿ ರಾಜ್ಯಮಟ್ಟದ ಪ್ರಶಸ್ತಿ ಪಡೆದಿರುವುದು ನಮ್ಮ ಶಾಲೆಗೆ ಮತ್ತೊಂದು ಕಿರೀಟ” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ತಾಲೂಕಾ ಆದರ್ಶ ಶಿಕ್ಷಕ ಪ್ರಶಸ್ತಿ ವಿಜೇತರಾದ ಶ್ರೀ ಬಿ.ಬಿ. ಕಡಬಿ, ಶ್ರೀ ಸಹದೇವ ಬುಳ್ಳನ್ನವರ ಮತ್ತು ಶ್ರೀಮತಿ ಪಿ.ಎ. ಕುಂಬಾರ ಅವರನ್ನು ಕೂಡ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಶಿಕ್ಷಕರು ಮಾತನಾಡಿ, “ಮಕ್ಕಳ ಸಾಧನೆಗಳೇ ನಮ್ಮ ಸಾಧನೆ. ಈ ಗೌರವ ಮಕ್ಕಳಿಗೇ ಸೇರಬೇಕು” ಎಂದು ನುಡಿದರು.
ಮುಖ್ಯ ಅತಿಥಿಗಳಾದ ಊರಿನ ಹಿರಿಯ ಉಳವನಗೌಡ ಪಾಟೀಲ ಹಾಗೂ ಶಿಕ್ಷಕ ಶ್ರೀ ನಾಗಯ್ಯ ಹುಲೆಪ್ಪನವರಮಠ ಶಾಲೆಯ ಶಿಕ್ಷಕರ ಶ್ರಮ ಮತ್ತು ವಿದ್ಯಾರ್ಥಿಗಳ ಸಾಧನೆಗಳನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಯೋಗ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಕುಮಾರಿ ಶ್ವೇತಾ ಹುರಕಡ್ಲಿ ನಿರೂಪಿಸಿದರು. ಕುಮಾರಿ ಸಪ್ನಾ ದಳವಾಯಿ ಸ್ವಾಗತಿಸಿ, ಕುಮಾರಿ ಪ್ರಿಯಾ ದಳವಾಯಿ ವಂದಿಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀ ಸೋಮಪ್ಪ ಜುಲ್ಪಿ ಸೇರಿದಂತೆ ಅನೇಕ ಗಣ್ಯರು, ಪಾಲಕರು ಮತ್ತು ಊರಿನವರು ಭಾಗವಹಿಸಿ ಸಡಗರವನ್ನು ಹೆಚ್ಚಿಸಿದರು.
