ಬೆಳಗಾವಿ-23″ಯುವನಿಧಿ” ಫಲಾನುಭವಿಗಳ ನೋಂದಣಿ ಡಿ.26 ರಿಂದ ಆರಂಭ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ: ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ನಿರುದ್ಯೋಗಿ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ “ಯುವನಿಧಿ” ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ನಿರ್ದೇಶನ ನೀಡಿದರು.
ಯುವನಿಧಿ ಅನುಷ್ಠಾನ ಹಿನ್ನೆಲೆಯಲ್ಲಿ ಕೌಶಲ್ಯಾಭಿವೃದ್ದಿ, ಜೀವನೋಪಾಯ ಹಾಗೂ ಉದ್ಯಮಶೀಲತೆ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ವಿಡಿಯೋ ಕಾನ್ಫರೆನ್ಸ್ ಸಭೆಯ ಬಳಿಕ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ತಿಳಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ 2023 ರ ವರ್ಷದಲ್ಲಿ ತೇರ್ಗಡೆಯಾದ ದಿನಾಂಕದಿಂದ 180 ದಿನಗಳು ಕಳೆದರೂ ಉದ್ಯೋಗ ಲಭಿಸದ ಪದವೀಧರರು ಮತ್ತು ಡಿಪ್ಲೋಮಾ ಪಡೆದ ನಿರುದ್ಯೋಗಿ ವಿದ್ಯಾವಂತರಿಗೆ ಕರ್ನಾಟಕ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆಯನ್ನು ಪಾವತಿಸಲಾಗುವುದು ಎಂದು ತಿಳಿಸಿದರು.
ಡಿಸೆಂಬರ್ 26 ರಿಂದ ಸೇವಾಸಿಂಧು ಪೋರ್ಟಲ್ ಮೂಲಕ ಈ ಯೋಜನೆಗೆ ಅರ್ಜಿಗಳನ್ನು ಸಲ್ಲಿಸಬಹುದು. ಜನವರಿ 2024 ರಿಂದ ಯೋಜನೆ ಜಾರಿಗೊಳ್ಳಲಿದ್ದು, ಅರ್ಹ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವಿವರಿಸಿದರು.
ಸದರಿ ಯೋಜನೆಯ ನೋಂದಣಿ ಪ್ರಕ್ರಿಯೆಯನ್ನು ಸರಕಾರದ ಮಾರ್ಗಸೂಚಿ ಪ್ರಕಾರ ಆರಂಭಿಸಬೇಕು. ಎಲ್ಲ ಅರ್ಹ ನಿರುದ್ಯೋಗಿಗಳಿಗೆ ಅಗತ್ಯ ಮಾಹಿತಿಯನ್ನು ನೀಡಲು ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಾಟೀಲ ಹೇಳಿದರು.
ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕರಾದ ರವಿ ಬಂಗಾರೆಪ್ಪನವರ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಚಿದಾನಂದ ಬಾಕೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ರವಿಶಂಕರ ಚನಾಳ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನೋಂದಣಿ ಪ್ರಕ್ರಿಯೆ:
ಅರ್ಹ ನಿರುದ್ಯೋಗಿಗಳು ಸೇವಾಸಿಂಧು ಪೋರ್ಟಲ್ https://sevasindhugs.karnataka.gov.in ಗೆ ಭೇಟಿ ನೀಡಿ ನೋಂದಣಿ ಮಾಡಬಹುದು.
ಇದಲ್ಲದೇ ಕರ್ನಾಟಕ ಒನ್, ಗ್ರಾಮಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಕೂಡ ಉಚಿತವಾಗಿ ಅರ್ಜಿ ಸಲ್ಲಿಸಬಹುದು.