11/12/2025
IMG-20250817-WA0000

[ಬೆಳಗಾವಿ ಮಹಾನಗರ ಪಾಲಿಕೆಯೂ ಡಾ. ಸ.ಜ.ನಾಗಲೋಟಿಮಠ ಅವರ ಈ ಅನುಪಮ ಸೇವೆಯನ್ನು ಪರಿಗಣಿಸಿ, ಬಾಕ್ಸೈಟ್ ರಸ್ತೆಗೆ ಡಾ. ಸ.ಜ.ನಾಗಲೋಟಿಮಠ ರಸ್ತೆ ಎಂದು ನಾಮಕರಣ ಎಂದು ಮಾಡಿ ಗೌರವ ಸಲ್ಲಿಸಿದ್ದು ನಿಜಕ್ಕೂ ಅಭಿನಂದನೀಯ ಕಾರ್ಯವಾಗಿದೆ. ಇದಕ್ಕೆ ಪೂರಕವೆನ್ನುವಂತೆ ಈಗ ಬಸವ ಕಾಲನಿ ರಹವಾಸಿಗಳು ಇದೇ ರಸ್ತೆಯ ಮುಖ್ಯ ಭಾಗದಲ್ಲಿ ಡಾ. ಸ.ಜ.ನಾಗಲೋಟಿಮಠ ಅವರ ಪುತ್ಥಳಿಯನ್ನು ಪ್ರತಿಷ್ಠಾಪಿಸುತ್ತಿರುವುದು ಅವರ ಸೇವೆಗೆ ಸಂದ ಗೌರವವೆಂದೇ ಹೇಳಬೇಕು. ]

ಡಾ. ಸ.ಜ.ನಾಗಲೋಟಿಮಠ ಅವರು ನಿಜವಾದ ಅರ್ಥದಲ್ಲಿ ಚರಜಂಗಮರಾಗಿ ಕನ್ನಡ ನಾಡಿನಲ್ಲೆಡೆ ವೈದ್ಯಕೀಯ ಕ್ಷೇತ್ರದ ಸಾಧನೆಗೆ ಮುನ್ನುಡಿ ಬರೆದವರು. ಖ್ಯಾತ ವೈದ್ಯವಿಜ್ಞಾನಿಗಳಾಗಿ, ಸಾಹಿತಿಗಳಾಗಿ, ಅತ್ಯುತ್ತಮ ಸಮಾಜ ಸಂಘಟಕರಾಗಿ ಅವರು ಮಾಡಿದ ಸೇವೆ ಅನನ್ಯ-ಅಪರೂಪ. ಡಾ. ಸದಾಶಿವ ನಾಗಲೋಟಿಮಠ ಅವರು ೧೯೪೦ ಜುಲೈ ೨೦ರಂದು ಗದಗದಲ್ಲಿ ಜನಿಸಿದರು. ತಂದೆ ಜಂಬಯ್ಯ ತಾಯಿ ಹಂಪವ್ವ. ಮನೆಯಲ್ಲಿ ತೀವ್ರ ಬಡತನವಿದ್ದ ಕಾರಣ, ಜಂಬಯ್ಯನವರು ಕುಟುಂಬ ಸಮೇತ ರಬಕವಿ ಬನಹಟ್ಟಿಗೆ ಹೋದರು. ಅಲ್ಲಿಯೂ ಅವರಿಗೆ ತಾಪತ್ರಯ ತಪ್ಪಲಿಲ್ಲ. ಬಡತನ-ಅವಮಾನಗಳ ನಡುವೆ ಕುಟುಂಬ ಕುಗ್ಗಿ ಹೋಗಿತ್ತು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸದಾಶಿವ ಅವರು ಉತ್ತಮ ಶಿಕ್ಷಣ ಪಡೆಯಬೇಕೆಂದು ಮನಸ್ಸು ಮಾಡಿ, ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಹುಬ್ಬಳ್ಳಿ ಪಿ.ಸಿ.ಜಾಬಿನ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಹುಬ್ಬಳ್ಳಿ ಕೆಎಂಸಿಯಿಂದ ೧೯೬೯ರಲ್ಲಿ ಚಿನ್ನದ ಪದಕದೊಂದಿಗೆ ಎಂ.ಬಿ.ಬಿ.ಎಸ್. ಪಾಸಾದರು. ರೋಗನಿಧಾನ ಶಾಸ್ತçದಲ್ಲಿ ಇನ್ನೂ ಹೆಚ್ಚಿನ ಅಧ್ಯಯನ ಮಾಡಿ ೧೯೭೦ರಲ್ಲಿ ಎಂ.ಡಿ. ಪದವಿ ಪಡೆದರು.

ಡಾ. ಸ.ಜ.ನಾಗಲೋಟಿಮಠ ಅವರು ಬೆಳಗಾವಿಯ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಜೆ.ಎನ್.ಮೆಡಿಕಲ್ ಕಾಲೇಜಿನಲ್ಲಿ ಪೆಥಾಲಜಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಪ್ರಾರಂಭಿಸಿದರು. ಅಂದಿನಿಂದ ಬೆಳಗಾವಿಗೂ ಅವರಿಗೂ ಬಿಡಲಾರದ ನಂಟು ಬೆಸೆಯಿತು. ಬೆಳಗಾವಿಯನ್ನು ಅವರು ತುಂಬ ಪ್ರೀತಿಸಿದರು. ಅವರು ಮುಂದೆ ತಮ್ಮ ವೃತ್ತಿ ಬದುಕನ್ನು ಅರಸಿಕೊಂಡು ಮೈಸೂರು, ವಿಜಯಪುರ, ಹುಬ್ಬಳ್ಳಿ, ಬಾಗಲಕೋಟೆ ಮೊದಲಾದ ಕಡೆಗಳಲ್ಲಿ ಹೋದರು. ಆದರೆ ನಿವೃತ್ತಿಯ ಜೀವನಕ್ಕೆ ಅವರು ಆಯ್ಕೆ ಮಾಡಿಕೊಂಡಿದ್ದು ಬೆಳಗಾವಿಯನ್ನೇ ಎನ್ನುವುದು ಅವರಿಗೆ ಬೆಳಗಾವಿ ಕುರಿತು ಇರುವ ಅಭಿಮಾನಕ್ಕೆ ಸಾಕ್ಷಿಯಾಗಿದೆ.

ಬೆಳಗಾವಿಯಲ್ಲಿ ಆಗ ಡಾ. ಬಿ. ಎಸ್. ಜೀರಗೆ, ಡಾ. ಮೆಟಗುಡ್ಡ ಅವರಂತಹ ದಕ್ಷ ಪ್ರಾಮಾಣಿಕ ವೈದ್ಯರಿದ್ದರು. ಅಂತವರ ಪ್ರಭಾವ ಡಾ. ನಾಗಲೋಟಿಮಠ ಅವರ ಮೇಲಾಯಿತು. ಹೀಗಾಗಿ ಅವರು ಈ ಇಬ್ಬರೂ ಮಹಾನುಭಾವರ ಜೀವನ ಚರಿತ್ರೆಗಳನ್ನು ಬರೆದು ಗದುಗಿನ ತೋಂಟದಾರ್ಯಮಠದಿಂದ ಪ್ರಕಟಿಸಿದರು.

ಡಾ. ನಾಗಲೋಟಿಮಠ ಅವರು ಬೆಳಗಾವಿಯಲ್ಲಿದ್ದಾಗಲೇ ಇಡೀ ದೇಶವೇ ನಿಬ್ಬೆರಗಾಗುವ ರೀತಿಯಲ್ಲಿ ಪೆಥಾಲಜಿ ಮ್ಯೂಜಿಯಂನ್ನು ರೂಪಿಸಿದರು. ಈ ಮ್ಯೂಸಿಯಂ ವೈದ್ಯಲೋಕಕ್ಕೆ ಒಂದು ವಿಸ್ಮಯದ ಕೊಡುಗೆಯಾಯಿತು. ಇದರಿಂದ ಕೆ.ಎಲ್.ಇ. ಸಂಸ್ಥೆಗೆ ರಾಷ್ಟ್ರೀಯಮಟ್ಟದ ಕೀರ್ತಿಪ್ರಾಪ್ತವಾಯಿತು.

ಡಾ. ನಾಗಲೋಟಿಮಠ ಅವರು ವೈದ್ಯರಾದರೂ ದೈವಭಕ್ತರಾಗಿದ್ದರು. ರೋಗಿಗಳ ಮೇಲೆ ಔಷಧಿಗಿಂತ ದೈವದ ನಂಬಿಕೆ ಹೆಚ್ಚು ಪ್ರಭಾವ ಬೀರುವುದೆಂದು ಅವರು ಭಾವಿಸಿದ್ದರು. ಹೀಗಾಗಿ ಬೆಳಗಾವಿ ಕೆ.ಎಲ್.ಇ.ಸಂಸ್ಥೆಯ ಮೆಡಿಕಲ್ ಕಾಲೇಜು ಆವರಣದಲ್ಲಿ ಒಂದು ಸುಂದರ ಶಿವಾಲಯ ನಿರ್ಮಾಣ ಮಾಡಬೇಕೆಂದು ಕನಸು ಕಂಡರು. ಶಿವಾಲಯದಲ್ಲಿರುವ ಲಿಂಗದ ಪೀಠಿಕೆಯನ್ನು ಕಾಶಿಯ ಗಂಗಾನದಿಯಿಂದ ತರಿಸಿದರು. ಈ ದೇವಾಲಯ ಭಾವುಕ ಭಕ್ತರ ಕಾಮಧೇನು ಕಲ್ಪವೃಕ್ಷವಾಗಿ ಇಂದು ಕಂಗೊಳಿಸುತ್ತಿರುವುದನ್ನು ಗಮನಿಸಬಹುದು.

ಬೆಳಗಾವಿ ಭಾಗದಲ್ಲಿ ವೈಜ್ಞಾನಿಕ ಮನೋಭಾವದ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮಾಡಬೇಕೆಂದು ಡಾ. ನಾಗಲೋಟಿಮಠ ಅವರು ಚಿಂತಿಸಿದರು. ಅದಕ್ಕಾಗಿ ಹಿರಿಯ ವೈಜ್ಞಾನಿಕ ಚಿಂತಕರಾದ ಎಚ್. ನರಸಿಂಹಯ್ಯನವರೊಂದಿಗೆ ಚರ್ಚಿಸಿ, ಬೆಳಗಾವಿಯಲ್ಲಿ ಒಂದು ಬೃಹತ್ ವಿಜ್ಞಾನ ಕೇಂದ್ರ ಸ್ಥಾಪಿಸಲು ಮುಂದಾದರು. ಆಗ ಅವರಿಗೆ ಜಾಗೆಯ ಸಮಸ್ಯೆ ಎದುರಾಯಿತು. ಅವರು ತುಂಬ ಆರಾಧಿಸುತ್ತಿದ್ದ ಕಾಯಕಯೋಗಿ ಮಹಾಪ್ರಸಾದಿ ಡಾ. ಶಿವಬಸವ ಮಹಾಸ್ವಾಮಿಗಳವರನ್ನು ಭೇಟಿಯಾಗಿ ವಿಜ್ಞಾನ ಕೇಂದ್ರದ ಸ್ಥಾಪನೆ ಕುರಿತು ಚರ್ಚಿಸಿದಾಗ, ಪೂಜ್ಯ ಶ್ರೀ ಡಾ. ಶಿವಬಸವ ಮಹಾಸ್ವಾಮಿಗಳು ತಮ್ಮ ಸಂಸ್ಥೆಯ ಆವರಣದಲ್ಲಿಯೇ ಒಂದು ಎಕರೆ ಜಮೀನನ್ನು ಉಚಿತವಾಗಿ ಡಾ. ನಾಗಲೋಟಿಮಠ ಅವರಿಗೆ ಬರೆದು ಕೊಟ್ಟರು. ಆ ಜಾಗೆಯಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆಯಾಗಿ, ಬೆಳಗಾವಿ ಜಿಲ್ಲೆಯ ಸಮಸ್ತ ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಮೂಡಿಸುವ ಶ್ರೇಷ್ಠ ಕೇಂದ್ರವಾಗಿ ಅದು ಪರಿಣಮಿಸಿತು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರು ಬೆಳಗಾವಿಯಲ್ಲಿಯೂ ಒಂದು ವಿಜ್ಞಾನ ಫೋರಂನ್ನು ಸ್ಥಾಪಿಸಿ, ಆ ಮೂಲಕ ವಿಜ್ಞಾನದ ಚಟುಚಟಿಕೆಗಳು ನಿತ್ಯ ನಿರಂತರವಾಗಿ ನಡೆಯುವಂತೆ ಮಾಡಿದ್ದರು.

೨೦೦೫ರಲ್ಲಿ ಬೆಳಗಾವಿ ಕಾರಂಜಿಮಠದಲ್ಲಿ ಅವರು ವಚನ ವಿಜ್ಞಾನ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಪೂಜ್ಯ ಶ್ರೀ ಗುರುಸಿದ್ಧ ಸ್ವಾಮಿಗಳು ಈ ಉಪನ್ಯಾಸವನ್ನೇ ಪುಸ್ತಕ ರೂಪದಲ್ಲಿ ಬರೆದು ಕೊಡಿ ಎಂದು ಅವರನ್ನು ಕೇಳಿದರು. ವಚನ ವಿಜ್ಞಾನ ಕುರಿತು ಮೊಟ್ಟಮೊದಲು ಪುಸ್ತಕ ಬರೆದರು. ಅದನ್ನು ಕಾರಂಜಿಮಠ ಪ್ರಕಾಶನದಿಂದ ಶ್ರೀಗಳು ಪ್ರಕಟಿಸಿದರು. ಅಂದಿನಿಂದ ಕರ್ನಾಟಕದಲ್ಲಿ ವಚನಗಳನ್ನು ವಿಜ್ಞಾನ ದೃಷ್ಟಿಯಿಂದಲೂ ಅಧ್ಯಯನ ಮಾಡುವ ಒಂದು ಪರಂಪರೆ ಪ್ರಾರಂಭವಾಯಿತು. ಹೀಗಾಗಿ ವಚನ ವಿಜ್ಞಾನದ ಚಿಂತನೆಗೆ ಮೊಟ್ಟಮೊದಲು ನಾಂದಿ ಹಾಡಿದ ಕೀರ್ತಿ ಡಾ. ಸ.ಜ.ನಾಗಲೋಟಿಮಠ ಅವರಿಗೆ ಸಲ್ಲುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು.

ಡಾ. ಸ.ಜ.ನಾಗಲೋಟಿಮಠ ಅವರು ಈ ಕರಣ ಹಸಿಗೆಯನ್ನು ವೈದ್ಯಕೀಯ ನೆಲೆಯಲ್ಲಿ ವಿಶ್ಲೇಷಿಸಿ ಪುಸ್ತಕ ಬರೆಯುವ ಸಂಕಲ್ಪ ಮಾಡಿದ್ದರು. ಆದರೆ ಅವರು ಆಕಸ್ಮಿಕವಾಗಿ ಲಿಂಗೈಕ್ಯರಾದ ಕಾರಣ, ಅದೊಂದು ದೊಡ್ಡ ಕೊರತೆ ಉಳಿದುಕೊಂಡಿತು. ಡಾ. ಸ.ಜ.ನಾಗಲೋಟಿಮಠ ಅವರೊಂದಿಗೆ ನಾನು ಆಗಾಗ ಈ ಕರಣ ಹಸಿಗೆ ಕುರಿತು ಬಹಳಷ್ಟು ಚರ್ಚೆ ಮಾಡುತ್ತಿದ್ದೆ. ಈ ವಿಷಯವಾಗಿ ಅವರೂ ತುಂಬ ಮುತುವರ್ಜಿ ವಹಿಸಿ ಓದಿ, ವಿಶ್ಲೇಷಣೆ ಮಾಡುತ್ತಿದ್ದರು. ಆಗ ವರ್ತಮಾನ ಪತ್ರಿಕೆಗಳಲ್ಲಿ ಬ್ರಿಟಿಷ್ ವೈದ್ಯ ವಿಜ್ಞಾನಿಗಳು ಗರ್ಭದಲ್ಲಿರುವ ಶಿಶುವಿಗೆ ಕಿವಿ ಕೇಳುತ್ತದೆ ಎಂಬುದರ ಬಗ್ಗೆ ಸಂಶೋಧನೆ ಮಾಡುತ್ತಿದ್ದರು. ಈ ವಿಷಯವನ್ನು ಚನ್ನಬಸವಣ್ಣನವರು ತಮ್ಮ ಕರಣ ಹಸಿಗೆಯಲ್ಲಿ ದಾಖಲಿಸಿದ್ದಾರೆ, ಹೀಗಾಗಿ ಚನ್ನಬಸವಣ್ಣನವರ ಈ ಕರಣ ಹಸಿಗೆ ಕೇವಲ ತತ್ವಜ್ಞಾನದ ಗ್ರಂಥವಲ್ಲ, ಇಂದಿನ ವೈದ್ಯಶಾಸ್ತçದ ವಿವರಗಳು ಹಾಗೂ ಕರಣ ಹಸಿಗೆಯಲ್ಲಿ ಉಲ್ಲೇಖಿತ ಸಂಗತಿಗಳು ಒಂದೇ ಆಗಿವೆ. ಹೀಗಾಗಿ ಕರಣ ಹಸಿಗೆ ವೈದ್ಯಕೀಯ ಅಧ್ಯಯನ ಮಾಡುವವರಿಗೆ ಪ್ರಮುಖ ಆಕರ ಗ್ರಂಥವೂ ಆಗಿದೆ ಎಂಬುದನ್ನು ಡಾ. ಸ.ಜ.ನಾಗಲೋಟಿಮಠ ಅವರು ಹೇಳುತ್ತಿದ್ದರು.

ಡಾ. ಸ.ಜ.ನಾಗಲೋಟಿಮಠ ಅವರು ‘ಬಿಚ್ಚಿದ ಜೋಳಿಗೆ’ ಎಂಬ ಅಪರೂಪದ ಆತ್ಮಕಥೆಯನ್ನು ಬರೆದgಯೀ ಕೃತಿಯ ಲೋಕಾರ್ಪಣೆ ಆಗಿದ್ದು ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಪ್ರಭುದೇವ ಸಭಾಗೃಹದಲ್ಲಿಯೇ ಎನ್ನುವುದು ಗಮನಿಸುವ ಅಂಶ. ನಾಡಿನ ಹಿರಿಯ ಪತ್ರಕರ್ತರಾಗಿದ್ದ ಡಾ. ಪಾಟೀಲ ಪುಟ್ಟಪ್ಪ ಈ ಕೃತಿಯನ್ನು ಲೋಕಾರ್ಪಣೆ ಮಾಡಿದ್ದು ಇನ್ನೂ ವಿಶೇಷ.

ಡಾ. ಸ.ಜ.ನಾಗಲೋಟಿಮಠ ಅವರು ಬೆಳಗಾವಿಯಲ್ಲಿದ್ದಾಗಲೇ ಸಾಹಿತ್ಯಿಕ ಚಟುವಟಿಕೆಗಳು ಗರಿಗೆದರಿದವು. ಸಾಹಿತ್ಯ ಸಂವಾದ ಎಂಬ ವೇದಿಕೆಯ ಅಧ್ಯಕ್ಷರಾಗಿ ಅವರು ಅನೇಕ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಬೆಳಗಾವಿ ನಗರದಲ್ಲಿಯೂ ಸಾಹಿತ್ಯಿಕ ಚಿಂತನೆಗಳು ನಿರಂತರವಾಗಿ ನಡೆಯಲೆಂದು ಪ್ರಯತ್ನಿಸಿದರು.

ಡಾ. ನಾಗಲೋಟಿಮಠ ಅವರು ಬೆಳಗಾವಿ ರಾಷ್ಟ್ರೀಯ ಹೆದ್ದಾರಿಗೆ ಹತ್ತಿದ ನರಸಿಂಗಪುರ ಎಂಬ ಗ್ರಾಮದಲ್ಲಿ ಒಂದಿಷ್ಟು ಜಮೀನು ಖರೀದಿಸಿದ್ದರು. ತಮ್ಮ ಅಂತ್ಯಸಂಸ್ಕಾರವನ್ನು ಇಲ್ಲಿಯೇ ಮಾಡಬೇಕೆಂದು ಅವರು ತಮ್ಮ ಕುಟುಂಬ ವರ್ಗಕ್ಕೆ ತಿಳಿಸಿದ್ದರು. ಬೆಳಗಾವಿ ಜಿಲ್ಲೆಯ ಬಗ್ಗೆ ಅವರಿಗೆ ಅಪಾರ ಪ್ರೀತಿ ಇರುವ ಕಾರಣಕ್ಕಾಗಿಯೇ ಅವರು ಈ ನಿರ್ಧಾರ ಮಾಡಿದ್ದರು.

ಬೆಳಗಾವಿ ಜಿಲ್ಲೆಯ ಎಲ್ಲ ಮಠಾಧೀಶರೊಂದಿಗೆ ಅವರು ಅತ್ಯಂತ ಆತ್ಮೀಯ ಒಡನಾಟ ಹೊಂದಿದ್ದರು. ನಾಗನೂರು ರುದ್ರಾಕ್ಷಿಮಠದ ಪೂಜ್ಯ ಶ್ರೀ ಡಾ. ಶಿವಬಸವ ಮಹಾಸ್ವಾಮಿಗಳವರೊಂದಿಗೆ ಅವರು ಅತ್ಯಂತ ಪರಮಾಪ್ತರಾಗಿದ್ದರು. ಶ್ರೀಗಳ ಶತಮಾನೋತ್ಸವ ಸಮಾರಂಭ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಅವರೂ ಮಹತ್ವದ ಪಾತ್ರ ವಹಿಸಿದವರು. ಶ್ರೀಗಳು ೧೯೯೪ರಲ್ಲಿ ಲಿಂಗೈಕ್ಯರಾದ ಸಂದರ್ಭದಲ್ಲಿ ಅವರ ಪಾರ್ಥಿವ ಶರೀರಕ್ಕೆ ತಮ್ಮ ಹೊಸ ಸಂಶೋಧನೆಯ ಚುಚ್ಚುಮದ್ದನ್ನು ನೀಡಿದ ಪರಿಣಾಮವಾಗಿ ಮೂರು ದಿನಗಳ ಕಾಲ ಶರೀರ ಸ್ವಚ್ಛ ಶುದ್ಧವಾಗಿ ಉಳಿದುಕೊಂಡಿತ್ತು ಎನ್ನುವುದು ಗಮನಿಸುವ ಸಂಗತಿ. ಪೂಜ್ಯ ಶಿವಬಸವ ಸ್ವಾಮಿಗಳವರ ಜೀವನ ಚರಿತ್ರೆಯೊಂದನ್ನು ತುಂಬ ಅರ್ಥಪೂರ್ಣವಾಗಿ ಬರೆದರು. ಈ ಕೃತಿಯನ್ನು ಗದುಗಿನ ತೋಂಟದಾರ್ಯಮಠದ ಶ್ರೀಗಳು ತಮ್ಮ ಲಿಂಗಾಯತ ಪುಣ್ಯಪುರುಷ ಸಾಹಿತ್ಯ ರತ್ನಮಾಲೆಯ ೧೫೦ನೇ ಕೃತಿಯಾಗಿ ಪ್ರಕಟ ಮಾಡಿತು. ಈ ಕೃತಿಯೂ ದಿನಾಂಕ ೯.-೯.೧೯೯೮ರಂದು ಬೆಳಗಾವಿ ನಾಗನೂರು ರುದ್ರಾಕ್ಷಿಮಠದಲ್ಲಿ ಖ್ಯಾತ ವಿದ್ವಾಂಸರಾದ ಡಾ. ಹಾ.ಮಾ.ನಾಯಕ ಅವರು ಲೋಕಾರ್ಪಣೆ ಮಾಡಿದರು. ಅದೇ ದಿನ ನಾಗನೂರು ರುದ್ರಾಕ್ಷಿಮಠದ ಆವರಣದಲ್ಲಿ ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯದ ಉದ್ಘಾಟನೆಯೂ ಜರುಗಿತು.

ಡಾ. ಸ.ಜ.ನಾಗಲೋಟಿಮಠ ಅವರು ನನ್ನೊಂದಿಗೆ ತುಂಬ ಆತ್ಮೀಯರಾಗಿದ್ದರು. ವಿಜ್ಞಾನ ಕೇಂದ್ರಕ್ಕೆ ಬಂದಾಗಲ್ಲೆಲ್ಲ ನಾನು ಭೇಟಿಯಾಗುತ್ತಿದ್ದೆ. ತಾಸುನುಗಟ್ಟಲೆ ಮಾತನಾಡುತ್ತಿದ್ದರು. ಅನೇಕ ಹೊಸ ಹೊಸ ವಿಚಾರಗಳನ್ನು ಹೇಳುತ್ತಿದ್ದರು. ನನ್ನ ಆಸಕ್ತಿಯನ್ನು ಕಂಡು, ನೀನು ಮುಂದೆ ಸಾಹಿತ್ಯಲೋಕದಲ್ಲಿ ಒಬ್ಬ ಭರವಸೆಯ ಬರಹಗಾರನಾಗುವಿ ಎಂದು ಆಶೀರ್ವದಿಸಿದ್ದರು. ಬಸವಣ್ಣನವರ ವಚನಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವ ಒಂದು ಗುಣ ಅವರಲ್ಲಿತ್ತು. ಒಂದು ದಿನ ನಾವು ಮಾತನಾಡುತ್ತ ಕುಳಿತಾಗ, ಬಸವಣ್ಣನವರ ವಚನವೊಂದರಲ್ಲಿ- ಬೂದುಗುಂಬಳ ಕಾಯಿಯಲ್ಲಿ ವಿಭೂತಿಯನ್ನು ತುಂಬಿ ಇಟ್ಟರೆ, ಮೂರು ದಿನದಲ್ಲಿ ಅದು ಸಿಹಿಯಾಗಿ ಪರಿವರ್ತನೆಯಾಗುತ್ತದೆ ಎಂದು ಬರುತ್ತದೆ. ಅದನ್ನು ಪ್ರಯೋಗ ಮಾಡಿ, ನಮಗೆಲ್ಲ ಬಸವಣ್ಣನವರು ಎಷ್ಟು ವೈಜ್ಞಾನಿಕ ಪ್ರಯೋಗಶೀಲರಾಗಿದ್ದರು ಎಂಬುದನ್ನು ತೋರಿಸಿಕೊಟ್ಟಿದ್ದರು.

ಇಂತಹ ಹಿರಿಯ ವಿದ್ವಾಂಸರಿಗೆ ಡಾ. ಬಿ. ಸಿ.ರಾಯ್ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮೊದಲಾದ ಪ್ರತಿಷ್ಠಿತ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದವು. ಪ್ರಾಯಶಃ ಬೆಳಗಾವಿ ವೈದ್ಯ ಸಂಕುಲದಲ್ಲಿ ಮೊಟ್ಟ ಮೊದಲ ಬಿ.ಸಿ.ರಾಯ ರಾಷ್ಟ್ರೀಯ ಪ್ರಶಸ್ತಿ ಪಡೆದವರು ಡಾ. ನಾಗಲೋಟಿಮಠ ಎಂಬುದು ಅಭಿಮಾನದ ಸಂಗತಿಯಾಗಿದೆ.

ಪ್ರೊ. ಜಯವಂತ ಕಾಡದೇವರು ಅವರು ಬರೆದ ‘ವೈದ್ಯ ಸದಾಶಿವ ಡಾ. ಸ.ಜ.ನಾಗಲೋಟಿಮಠ’ ಎಂಬ ಕೃತಿಯಲ್ಲಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಅಭಿಪ್ರಾಯವೊಂದು ಹೀಗಿದೆ: ಡಾ. ಸದಾಶಿವಯ್ಯ ನಾಗಲೋಟಿಮಠ ಅವರು ವಿದ್ಯಾವಿಶಾರದರು. ಅನುಭವಿ ಬೋಧಕರು, ಸಂಶೋಧಕರು, ಲೇಖಕರು, ಮಾತಿನಲ್ಲಿ ಜಾಣ್ಮೆ, ಅಭಿವ್ಯಕ್ತಿಯಲ್ಲಿ ಸರಳತೆ, ನಡತೆಯಲ್ಲಿ ಸಜ್ಜನಿಕೆ, ಚಿಂತನೆಯಲ್ಲಿ ವೈಜ್ಞಾನಿಕತೆ ಅವರ ವೈಶಿಷ್ಟö್ಯಗಳು’ ಎಂದು ಹೇಳಿದ್ದಾರೆ. ಗದುಗಿನ ತೋಂಟದಾರ್ಯಮಠದ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರು- ‘ಡಾ. ನಾಗಲೋಟಿಮಠರು ವೈದ್ಯಲೋಕದ ನಕ್ಷತ್ರ, ಆತ್ಮಗೌರವ, ವಿದ್ವತ್ತು, ಸಚ್ಚಾರಿತ್ರ್ಯಗಳ ತ್ರಿವೇಣಿ ಸಂಗಮವಾಗಿರುವರು. ಅಂತೆಯೆ ಅವರು ನಮ್ಮ ದಿನಮಾನದ ಒಂದು ಅದ್ಭುತ’ ಎಂದು ಶ್ಲಾಘಿಸಿದ್ದಾರೆ. ‘ಸಜನಾರಂಥ ದೇವಸಮಾನ ವೈದ್ಯರ ಸಂಖ್ಯೆ ಅಪರೂಪವಾಗುತ್ತಿದೆ’ ಎಂದು ಖ್ಯಾತ ಅಂಕಣಕಾರ ನಾಗೇಶ ಹೆಗಡೆ ಬರೆಯುತ್ತಾರೆ. ಹೀಗೆ ನಾಡಿನ ಅನೇಕ ಜನರು ಡಾ. ನಾಗಲೋಟಿಮಠ ಅವರ ಘನವ್ಯಕ್ತಿತ್ವವನ್ನು ಕುರಿತು ತುಂಬ ಅರ್ಥಪೂರ್ಣವಾಗಿ ದಾಖಲಿಸಿದ್ದಾರೆ.

ಇಂತಹ ಹಿರಿಯ ಚೇತನ ಡಾ. ನಾಗಲೋಟಿಮಠ ಅವರು ೨೦೦೬ರ ಜುಲೈ ೨೪ರಂದು ನಿಧನರಾದುದು ಕನ್ನಡ ವೈದ್ಯಸಾಹಿತ್ಯ ಲೋಕಕ್ಕೆ ತುಂಬಲಾರದ ಹಾನಿಯೆಂದೇ ಹೇಳಬೇಕು.

*ಪ್ರಕಾಶ ಗಿರಿಮಲ್ಲನವರ*
ಬೆಳಗಾವಿ
ಮೊ: ೯೯೦೨೧೩೦೦೪೧

error: Content is protected !!