ಸೇಲಂ-13:ಜನಿವಾರ ಹಾಕದಿದ್ದರೇ ಬ್ರಾಹ್ಮಣನಾಗಲು ಹೇಗೆ ಸಾಧ್ಯ, ನಮಾಜ್ ಮಾಡಿದ್ದರೇ ಮುಸ್ಲಿಮ್ ಧರ್ಮದಲ್ಲಿ ಹುಟ್ಟಿದರೇನು ಫಲ, ಕ್ರಾಸ್ ಹಾಕದಿದ್ದರೇ ಕ್ರಿಶ್ಚಿಯನ್ ಆಗಲು ಸಾಧ್ಯವೇ ? ಹಾಗೆಯೇ ಇಷ್ಟಲಿಂಗವನ್ನು ಧರಿಸದೆ ಇರುವವನ್ಮು ಹೇಗೆ ತಾನೇ ವೀರಶೈವ ಲಿಂಗಾಯತನಾಗಲು ಸಾಧ್ಯ. ಅದಕ್ಕಾಗಿ ವೀರಶೈವರಾದವರು ಇಷ್ಟ ಲಿಂಗವನ್ನು ಧರಿಸಲೇಬೇಕು ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಭಾನುವಾರ ತಮಿಳುನಾಡಿನ ಸೆಲಂ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಜರುಗಿದ ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮದಲ್ಲಿ ಸಾನ್ನಿದ್ಯ ವಹಿಸಿ ಇಷ್ಟಲಿಂಗ ದೀಕ್ಷೆ ನೀಡಿ ಮಾತನಾಡಿದರು. ಶ್ರೀಗಳ ಮಾತಿಗೆ ಸ್ಪಂದಿಸಿ ತಮಿಳುನಾಡಿನ ವೀರಶೈವ ಜಂಗಮರು ಮತ್ತೆ ಡಿಸೆಂಬರ್ ತಿಂಗಳಲ್ಲಿ 1008 ಜನರಿಗೆ ಇಷ್ಟಲಿಂಗ ದೀಕ್ಷೆ ಏರ್ಪಡಿಸುವುದಾಗಿ ಸಭೆಯಲ್ಲಿ ಸಂದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ತಾವರಕೇರಿ ಶೀಲಾಮಠದ ಶ್ರೀ. ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಧರ್ಮ ಜಾತಿವಾಚಕವಲ್ಲ. ಅದು ತತ್ವವಾಚಕವಾಗಿದೆ. ಎಲ್ಲರೂ ಇಷ್ಟಲಿಂಗವನ್ನು ಧಾರಣೆ ಮಾಡಿಕೊಳ್ಳಬೇಕು ಎಂದರು.
ನಂದಿಪುರದ ಶ್ರೀ ಮಹೇಶ್ವರ ಸ್ವಾಮೀಜಿ ಮಾತನಾಡಿ, ನಿತ್ಯಲಿಂಗ ಪೂಜೆಯಿಂದ ಮನಶಾಂತಿ ದೊರಕುವುದು. ಶ್ರೀ ಜಗದ್ಗುರು ಪಂಚಾಚಾರ್ಯರು ಮತ್ತು ಬಸವಾದಿ ಪ್ರಮತರು ಇದನ್ನೇ ಹೇಳಿದ್ದಾರೆ ಎಂದರು.
ಕರ್ನೂಲಿನ ಶ್ರೀ ಅಜಾತ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಯುವ ಜನಾಂಗ ಅಡ್ಡದಾರಿಗೆ ಹೊರಟಿದೆ. ಇವರಿಗೆ ಯೋಗ್ಯ ಮಾರ್ಗದರ್ಶನದ ಅವಶ್ಯಕತೆ ಇದೆ. ನಮ್ಮ ಮಕ್ಕಳಿಗೆ ಗುರು, ಲಿಂಗ, ಜಂಗಮದ ಬಗ್ಗೆ ಶೃದ್ಧೆಯನ್ನು ಹುಟ್ಟಿಸುವ ಕಾರ್ಯವನ್ನು ಮಾಡಬೇಕಿದೆ ಎಂದರು.
ಲಂಡನ್ ನಿಂದ ಆಗಮಿಸಿದ ಪಂಚ ಸೂತ್ರ ಅಕಾಡೆಮಿಯ ಚಂದ್ರಶೇಖರ ಅವರು ಮಾರ್ಮಿಕವಾಯಿ ಮಾತನಾಡಿದರು.
ಅಖಿಲ ಭಾರತ ವೀರಶೈವ ಮಹಾಸಭೆಯ ಉಪಾಧ್ಯಕ್ಷೆ ವಿನೂತಾ ರವಿ ಅವರು ವೀರಶೈವ ಲಿಂಗಾಯತ ಮಹಾಸಭಾ ಮಾಡುವ ಕಾರ್ಯದ ಬಗ್ಗೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ವೆಂಕಟೇಶ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಸೆಲಂ ನಗರದಲ್ಲಿ ವಿಶೇಷವಾಗಿ ಸ್ವಾಗತಿಸಿ ಉತ್ಸವವನ್ನು ನೆರವೇರಿಸಿದರು. ಸುಮಾರು 140 ಜನ ಇಷ್ಟಲಿಂಗ ದೀಕ್ಷೆ ಪಡೆದರು.
