11/12/2025
IMG-20250502-WA0000

ಬೆಳಗಾವಿ-02: ರಾಜ್ಯದ ಬೆಳಗಾವಿ, ಹುಬ್ಬಳ್ಳಿ ಮತ್ತು ಮೈಸೂರಲ್ಲಿ ಹಿರಿಯ ನಾಗರಿಕರಿಗಾಗಿ ಕ್ಲಬ್ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.

ಬೆಳಗಾವಿಯ ಕುಮಾರಸ್ವಾಮಿ ಬಡಾವಣೆಯಲ್ಲಿ ಗುರುವಾರ ಸಂಜೆ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಬಜೆಟ್ ನಲ್ಲಿ ಓಲ್ ಏಜ್ ಕ್ಲಬ್ ಗೆ ಅನುಮೋದನೆ ನೀಡಲಾಗಿದೆ. ಆದಷ್ಟು ಶೀಘ್ರ ಅವು ಆರಂಭವಾಗಲಿವೆ. ಬೇರೆ ಬೇರೆ ಕ್ಲಬ್ ಮಾದರಿಯಲ್ಲಿ ಹಿರಿಯ ನಾಗರಿಕರಿಗಾಗಿ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಅವರಿಗೆ ಅನುಕೂಲವಾಗಬಲ್ಲ ಆಟಗಳನ್ನು ಆಡಲು, ಪತ್ರಿಕೆಗಳನ್ನು ಓದಲು, ಚಹ, ತಿಂಡಿಗಳನ್ನು ವ್ಯವಸ್ಥೆ ಕಲ್ಪಿಸಲಾಗುವುದು. ಇದಕ್ಕಾಗಿ ವರ್ಷಕ್ಕೆ ತಲಾ 12 ಲಕ್ಷ ರೂ.ಗಳನ್ನು ಒದಗಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಹಿರಿಯ ನಾಗರಿಕರು ತಮ್ಮ ಆರೋಗ್ಯ ಕಾಪಾಡಲು ಮತ್ತು ಪರಂಪರೆಯನ್ನು ಉಳಿಸಲು ಆದ್ಯತೆ ನೀಡಬೇಕು. ಗಟ್ಟಿ ಇರುವಾಗ ತಮ್ಮ ಭವಿಷ್ಯವನ್ನು ಗಟ್ಟಿಗೊಳಿಸಿಕೊಳ್ಳಬೇಕು. 60 ವರ್ಷದ ನಂತರವೂ ಭವಿಷ್ಯವಿದೆ, ಜೀವನಕ್ಕೆ ಗುರಿ ಇದೆ ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಜನರ ಅಪೇಕ್ಷೆ ಯಾವಾಗಲೂ ಕೆಲಸ ಮಾಡುವವರ ಕಡೆ ಜಾಸ್ತಿ ಇರುತ್ತದೆ. ಹುಟ್ಟು ಸಾವಿನ ಮಧ್ಯೆ ಮಾಡುವ ಕೆಲಸ ಶಾಶ್ವತ. ಜೀವನದ ಅರ್ಥ ಹುಡುಕುವ ಈ ಸಮಯದಲ್ಲಿ ಆರೋಗ್ಯವೇ ಗುರಿ, ಸಂಸ್ಕೃತಿಯೇ ಗುರು. ನಮ್ಮ ಮಕ್ಕಳನ್ನು ನಾಳೆ ಅವರ ಮಕ್ಕಳು ಹೇಗೆ ನೋಡುತ್ತಾರೆ ಎನ್ನುವ ಚಿಂತೆ ಮಾಡುವ ಸಮಯ. ಆರೋಗ್ಯವಾಗಿದ್ದಾಗ ಭವಿಷ್ಯ ಗಟ್ಟಿ ಮಾಡಿಕೊಳ್ಳಿ. ಹಿರಿಯ ನಾಗರಿಕರಿಗಾಗಿ ಸರಕಾರ ಬಹಳಷ್ಟು ಯೋಜನೆಗಳನ್ನು ತಂದಿದೆ. ರಾಜ್ಯದಲ್ಲಿ 60 ಲಕ್ಷ ಹಿರಿಯ ನಾಗರಿಕರಿದ್ದಾರೆ. ವಿಶ್ವದಲ್ಲಿ 2040ರ ಹೊತ್ತಿಗೆ 150 ಕೋಟಿ ಹಿರಿಯ ನಾಗರಿಕರಿರುತ್ತಾರೆ ಎಂದು ಅಂದಾಜಿಸಲಾಗಿದೆ. ಆ ಹೊತ್ತಿಗೆ ಅವರಿಗೆ ಎಲ್ಲ ಸೌಲಭ್ಯ ಕಲ್ಪಿಸಬೇಕಾಗಿದೆ ಎಂದ ಸಚಿವರು, ಹಿರಿಯ ನಾಗರಿಕರಿಗೆ ರಾಜ್ಯದಲ್ಲಿ ಪೆನ್ಶನ್ ನೀಡಲಾಗುತ್ತಿದೆ. ವಿವಿಧೆಡೆ ಡೇ ಕೇರ್ ಸೆಂಟರ್ ಆರಂಭಿಸಲಾಗಿದೆ ಎಂದು ತಿಳಿಸಿದರು.

ಎಷ್ಟೇ ಅಧಿಕಾರ ಕೊಟ್ಟರೂ ನೆಲದ ಮೇಲೆ ನನ್ನ ಕಾಲಿಡು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ವಿನಯತೆ, ಪರಂಪರೆಯನ್ನು ನನ್ನಿಂದ ಕಸಿದುಕೊಳ್ಳಬೇಡ ಎಂದು ಪ್ರಾರ್ಥಿಸುತ್ತೇನೆ ಎಂದೂ ಅವರು ಹೇಳಿದರು.

ಇದೇ ವೇಳೆ ಹಿರಿಯ ನಾಗರಿಕರನ್ನು ಹಾಗೂ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ವಿರುಪಾಕ್ಷಯ್ಯ ನೀರಲಗಿಮಠ, ಗೌರವಾಧ್ಯಕ್ಷರಾದ ಬಸವರಾಜ ಮಟಗಾರ, ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ‌ಸಂಘದ ಅಧ್ಯಕ್ಷರಾದ ಅಡಿವೆಪ್ಪ ಬೆಂಡಿಗೇರಿ, ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಎಸ್.ಜಿ.ಸಿದ್ನಾಳ, ಅಖಿಲ ಭಾರತ ಇಂಜಿನಿಯರಗಳ ಒಕ್ಕೂಟದ ಕಾರ್ಯದರ್ಶಿಗಳಾದ ಮಹಾಂತೇಶ ಹಿರೇಮಠ್, ಡಾ.ಎಚ್.ಬಿ.ರಾಜಶೇಖರ್, ಮಾಜಿ ಶಾಸಕರಾದ ಭೀಮಪ್ಪ ಸರಿಕರ ಹಾಗೂ ಸ್ಥಳೀಯ ನಿವಾಸಿಗಳು ಹಾಜರಿದ್ದರು.

error: Content is protected !!