ಬೆಳಗಾವಿ-07:ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಆಧುನಿಕ ಮುಸ್ಲಿಂ ಲೀಗ್ ಬಜೆಟ್ ಅನ್ನು ಅಂಗೀಕರಿಸಿದೆ. ಈ ಆಧುನಿಕ ಮುಸ್ಲಿಂ ಲೀಗ್ ಬಜೆಟ್‌ನಲ್ಲಿ ಕಾಂಗ್ರೆಸ್ ಪಕ್ಷವು ಇಮಾಮ್‌ಗಳ ಗೌರವಧನವನ್ನು 6000 ರೂ.ಗಳಿಗೆ ಹೆಚ್ಚಿಸುತ್ತಿದೆ. ವಕ್ಫ್‌ಗೆ 150 ಕೋಟಿ ರೂ.ಗಳನ್ನು ನೀಡಲಾಗುತ್ತಿದೆ. ಸ್ವರಕ್ಷಣೆ ತರಬೇತಿಗಾಗಿ ಅಲ್ಪಸಂಖ್ಯಾತ ಹುಡುಗಿಯರಿಗೆ ಮಾತ್ರ ಹಣ ನೀಡಲಾಗುತ್ತಿದೆ. ಅಲ್ಪಸಂಖ್ಯಾತರ ಪ್ರಯೋಜನಕ್ಕಾಗಿ 1000 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಬಳಸಲಾಗುತ್ತಿದೆ.
ಕೆಡಿಪಿ ಅಂಕಿ-ಅಂಶದ ಪ್ರಕಾರ, ಕಳೆದ ವರ್ಷದ ಅಂದರೆ 2024-25ನೇ ಬಜೆಟ್ ವರ್ಷದ 10 ತಿಂಗಳಲ್ಲಿ ಶೇಕಡಾ 62 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಕಳೆದ ವರ್ಷದ ಅನುದಾನವೇ ಖರ್ಚು ಆಗದೆ ಇರುವಾಗ ಈಗ ಇನ್ನೊಂದು ಬಜೆಟ್ ಮಂಡಿಸಿದರೆ ಪ್ರಯೋಜನವೇನು?. ಐದನೇ ಕ್ಲಾಸು ಪಾಸಾಗದ ವಿದ್ಯಾರ್ಥಿ ಆರನೇ ಕ್ಲಾಸಿನ ಪರೀಕ್ಷೆಗೆ ಕಟ್ಟಿದರೆ ಏನು ಪ್ರಯೋಜನ? ಹಾಗಾಗಿದೆ ಸಿದ್ದರಾಮಯ್ಯ ನವರ ಬಜೆಟ್ ನ ಕಥೆ-ವ್ಯಥೆ.
ಇದು ಕೇವಲ ನಾಮಕಾವಸ್ತೆ ಬಜೆಟ್. ಪಾಪರ್ ಸರ್ಕಾರದ ಪಾಪರ್ ಬಜೆಟ್. ನಿವೃತ್ತಿ ಆಗುತ್ತಿರುವ ಮುಖ್ಯಮಂತ್ರಿಗಳ ನಿರ್ಗಮನದ ಬಜೆಟ್. ಇದರಿಂದ ಕರ್ನಾಟಕಕ್ಕೆ, ಕನ್ನಡಿಗರಿಗೆ ನಯಾಪೈಸೆ ಉಪಯೋಗವಿಲ್ಲ. ಅಧಿಕಾರಕ್ಕೆ ಬಂದ ಮೇಲೆ ಬಿಸಿ ತುಪ್ಪದಂತಾಗಿರುವ ಗ್ಯಾರೆಂಟಿಗಳನ್ನು ಮುಂದುವರೆಸಲು ಆಗದೆ ನಿಲ್ಲಿಸಲೂ ಆಗದೆ ಕಾಂಗ್ರೆಸ್ ಸರ್ಕಾರ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿದೆ ಎಂದು ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಂತರ ಜಿಲ್ಲಾಧ್ಯಕ್ಷರಾದ ಸುಭಾಷ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದರು.
