ಬೆಳಗಾವಿ-೨೯:ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬೆಳಗಾವಿಯಲ್ಲಿ ಜೈ ಮಹಾರಾಷ್ಟ್ರ ಘೋಷಣೆ ಕೂಗಿದರೂ ಸಹ ಪೊಲೀಸರು ಒತ್ತಡಕ್ಕೆ ಮಣಿದು ಕ್ರಮಕೈಗೊಳ್ಳುತ್ತಿಲ್ಲ. ಅಲ್ಲದೇ ವಿರೋಧದ ನಡುವೆಯೂ ಕಾರ್ಯಕ್ರಮವನ್ನು ಆಯೋಜಿಸಿ, ಶಿಷ್ಟಾಚಾರ ಉಲ್ಲಂಘಿಸಿ ವೋಟ್ ಹೊರ ರಾಜ್ಯದಿಂದ ಅತಿಥಿಗಳನ್ನು ಕರೆಯಿಸಿ ಜೈ ಮಹಾರಾಷ್ಟ್ರ ಘೋಷಣೆ ಕೂಗಿಸಿದ ದಕ್ಷಿಣ ಶಾಸಕರಲ್ಲಿ ತಾಕತ್ತೂ ಧಮ್ಮು ಇದ್ದರೇ ಮಹಾರಾಷ್ಟ್ರದಲ್ಲಿ ಹೋಗಿ ಜೈ ಕರ್ನಾಟಕ ಘೋಷಣೆಯನ್ನು ಕೂಗಲಿ ಎಂದು ಕಿತ್ತೂರು ಕರ್ನಾಟಕ ಸೇನೆಯ ಪ್ರಮುಖರಾದ ಮಹಾದೇವ ತಳವಾರ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ಅನಗೋಳದಲ್ಲಿ ಜನರ ವಿರೋಧದ ನಡುವೆಯೂ ಛತ್ರಪತಿ ಧರ್ಮವೀರ ಸಂಭಾಜೀ ಮಹಾರಾಜರ ಮೂರ್ತಿ ಅನಾವರಣದ ವೇಳೆ ಮಹಾರಾಷ್ಟ್ರದ ಸಚಿವರನ್ನು ಕರೆಯಿಸಿ ಜೈ ಮಹಾರಾಷ್ಟ್ರ ಘೋಷಣೆಯನ್ನು ಕೂಗಿಸಿ ವೋಟ್ ಬ್ಯಾಂಕನ್ನು ಭದ್ರಗೊಳಿಸುವ ಪ್ರಯತ್ನವನ್ನು ಬೆಳಗಾವಿಯ ದಕ್ಷಿಣ ಶಾಸಕರು ಮಾಡಿದ್ದಾರೆ. ಜೈ ಮಹಾರಾಷ್ಟ್ರ ಎಂದಾಗ ವಿರೋಧ ವ್ಯಕ್ತಪಡಿಸುವ ಬದಲೂ ಚಪ್ಪಾಳೆ ತಟ್ಟಿ ಶಾಸಕರು, ಮಹಾಪೌರರು, ಉಪಮಹಾಪೌರರು ಚಪ್ಪಾಳೆ ತಟ್ಟಿದ್ದಾರೆ. ಈಗಾಗಲೇ ಇವರ ವಿರುದ್ಧ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ, ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಆದರೇ ಠಾಣಾಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಹಿಂಬರಹವನ್ನು ನೀಡಿದ್ದಾರೆ. ಈ ಪ್ರಕರಣ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುತ್ತದೆ ಎಂದು ತಿಳಿಸಿದ್ದು, ಪೊಲೀಸ ಮೇಲಾಧಿಕಾರಿಗಳು ಮತ್ತು ಠಾಣಾಧಿಕಾರಿಗಳು ಕಾನೂನಿನ ಅರಿವಿಲ್ಲದೇ ಕೆಲಸ ಮಾಡುತ್ತಿದ್ದಾರೆಂಬ ಸಂಶಯ ವ್ಯಕ್ತವಾಗುತ್ತಿದೆ. ಇದು ಕನ್ನಡಿಗರಿಗೆ ಮೋಸ ಮಾಡುತ್ತಿದ್ದು, ಪೊಲೀಸ್ ಇಲಾಖೆ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದೆ. ಇವೆಲ್ಲವೂ ಕನ್ನಡಿಗರ ಭಾವನೆಗೆ ಧಕ್ಕೆ ತರುವಂತಹದ್ದಾಗಿದೆ. ರೈತರು, ಕನ್ನಡಿಗರು ಪ್ರತಿಭಟಿಸಿದಾಗ ಪ್ರಕರಣ ದಾಖಲಿಸುವ ಪೊಲೀಸರು, ಅನುಮತಿಯಿಲ್ಲದೇ ಮೂರ್ತಿ ಅನಾವರಣಕ್ಕೆ ಅನುವು ಮಾಡಿಕೊಟ್ಟಿದ್ದೇಕೆ? ಕಾನೂನು ಸಲಹೆಗಾರರ ಮೂಲಕ ನಾವು ಕೂಡ ಹೋರಾಟ ನಡೆಸಿ, ಪ್ರತ್ಯುತ್ತರ ನೀಡುತ್ತೇವೆ ಎಂದರು.
ಮೊದಲಿನ ಪೊಲೀಸ ಅಧಿಕಾರಿಗಳು ದಕ್ಷತೆಯನ್ನು ಪ್ರದರ್ಶಿಸಿದ್ದಾರೆ. ಆದರೇ ಈಗೀನ ಅಧಿಕಾರಿಗಳು ಕನ್ನಡತೆಯನ್ನು ರಕ್ಷಿಸುತ್ತಿಲ್ಲ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಇನ್ಮುಂದೆ ಪ್ರತಿಭಟಿಸಿದಾಗ ಪೊಲೀಸರು ಬಾರದಿರಲಿ, ಸಂಬಂಧಿಸಿದ ಇಲಾಖೆ ಕಾನೂನಿನ ಹೋರಾಟವನ್ನೇ ನಡೆಸಲಿ. ದಕ್ಷಿಣ ಶಾಸಕರಿಗೆ ನಾಚಿಕೆಯಾಗಬೇಕು. ಬೆಳಗಾವಿಯ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಇಂತಹ ನಾಡವಿರೋಧಿ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು ಎಂದರು. ಸಿ.ಟಿ. ಪ್ರಕರಣದಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗುವ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಯಾಕೆ ಪರಿಗಣಿಸುತ್ತಿಲ್ಲ. ದಕ್ಷಿಣ ಶಾಸಕರು ನಿಜವಾದ ಕನ್ನಡಾಭಿಮಾನಿಗಳಾಗಿದ್ದರೆ, ಅವರಲ್ಲಿ ತಾಕತ್ತೂ ಧಮ್ಮು ಇದ್ದರೇ, ಮಹಾರಾಷ್ಟ್ರಕ್ಕೆ ಹೋಗಿ ಅಲ್ಲಿನ ಶಾಸಕರೊಂದಿಗೆ ನಿಂತು ಜೈ ಕರ್ನಾಟಕ ಎಂದು ಘೋಷಣೆಯನ್ನು ಕೂಗಿ. ಇಲ್ಲಿನ ಕನ್ನಡಿಗರು ಮತ್ತು ಮರಾಠಿಗರ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡಬೇಡಿ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಕಸ್ತೂರಿ ಭಾವಿ,ಸುರೇಶ ಖಿರಾಯಿ, ಸೇರಿದಂತೆ ಇತರರೂ ಉಪಸ್ಥಿತರಿದ್ದರು.
