ಬೆಳಗಾವಿ-೨೬:ನಮ್ಮ ಸಂವಿಧಾನ ನಮ್ಮ ಬದುಕಿನ ಪ್ರತಿಬಿಂಬ. ಅದು ವ್ಯಕ್ತಿಯ ಆಂತರಿಕ ಮತ್ತು ಬಾಹ್ಯ ವಿಕಸನದ ಪ್ರತೀಕವಾಗಿದೆ ಎಂದು ಬೆಳಗಾವಿಯ ರೋಟರಿ ಕ್ಲಬ್ ಮಾಜಿ ಅಧ್ಯಕ್ಷರಾದ ಸಿ. ಎಸ್. ವಿ. ಆಚಾರ್ಯ ಅವರು ಅಭಿಪ್ರಾಯಪಟ್ಟರು.
ನಗರದ ಗುರು ವಿವೇಕಾನಂದ ವಿವಿಧ ಉದ್ದೇಶಗಳ ಸಹಕಾರ ಸಂಘದ ಕಛೇರಿಯಲ್ಲಿ ನಡೆದ 76ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು. ಸಂವಿಧಾನದ ಶಿಲ್ಪಿಗಳು ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಸಮಾನತೆ ತಂದು ಕೊಟ್ಟರು. ನಮ್ಮ ಸಂವಿಧಾನವೆಂದರೆ ಅದು ಭಾರತೀಯರ ಜೀವನ ವಿಧಾನದ ಪ್ರತಿರೂಪ. ವ್ಯಕ್ತಿಯ ಬೌದ್ಧಿಕ ಮತ್ತು ಭೌತಿಕ ವಿಕಾಸದ ದಾರಿಯನ್ನು ತೋರುವುದರ ಜೊತೆಗೆ ಭಾರತದ ಸಮಗ್ರ ಕಲ್ಯಾಣದ ರೂಪಕವಾಗಿ ಸಂವಿಧಾನ ಜಾರಿಗೆ ಬಂತು. ಇಂತಹ ಒಂದು ಅದ್ಭುತವಾದ ಸಂವಿಧಾನ ಕೊಟ್ಟ ಅಂಬೇಡ್ಕರ್ ಆದಿಯಾಗಿ ಎಲ್ಲ ಮಹನೀಯರು ಸದಾ ನಮಗೆ ಆರಾಧ್ಯರು. ಅವರ ಯೋಗದಾನದಿಂದಾಗಿ ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನ ಪಡೆಯಲು ನಮಗೆ
ಸಾಧ್ಯವಾಯಿತು. ನಮ್ಮಲ್ಲಿ ದೇಶಾಭಿಮಾನದ ಕೊರತೆಯಿದೆ. ಇದು ದೇಶಕ್ಕೆ ಮಾರಕ. ದೇಶಾಭಿಮಾನ ನಮ್ಮಲ್ಲಿ ಸದಾ ಜಾಗೃತವಾಗಿರಲಿ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಡಾ. ನಾರಾಯಣ ನಾಯ್ಕ ಅವರು
ಭಾರತ ಜಗತ್ತಿನ ಅತ್ಯಂತ ದೊಡ್ಡ ಗಣತಂತ್ರವನ್ನು ಹೊಂದಿರುವ ದೇಶ. ಭಾರತ ಗಣರಾಜ್ಯವಾಗಿ 75 ವಸಂತಗಳು ತುಂಬುತ್ತಿರುವ ಈ ಸಂದರ್ಭದಲ್ಲಿ
ಸಂವಿಧಾನದ ಆಶಯಗಳು ಈಡೇರಿವಿಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ದೀನದಲಿತರು , ಕಡುಬಡವರು, ಸಮಾಜದ ಅಂಚಿನಲ್ಲಿ ಬದುಕುತ್ತಿರುವವರು ತಮ್ಮ ಬದುಕಿನ ಬದಲಾವಣೆಗಾಗಿ ಇನ್ನೂ ಕಾಯುತ್ತಿದ್ದಾರೆ.
ಸ್ಥಾಪಿತ ಸರ್ಕಾರಗಳು , ಸಂಸ್ಥೆಗಳು ಅವರ
ಬವಣೆಯನ್ನು ಕೇಳಿಸಿಕೊಳ್ಳಬೇಕು. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು. ಆಗ ಅದು ನಿಜವಾಗಿಯೂ ಸಂವಿಧಾನ ಶಿಲ್ಪಿಗಳಿಗೆ ನಾವು ಸಲ್ಲಿಸುವ ಅತೀ ದೊಡ್ಡ ಗೌರವವಾಗುತ್ತದೆ. ಜಾತಿ ಮತ ಪಂಥ, ಧರ್ಮಗಳ
ಬೇಧ-ಭಾವ ತೋರದೇ ಸರ್ವರ ಒಳಿತಿಗಾಗಿ ಇರುವ ಸಂವಿಧಾನ ನಮ್ಮದು. ಅದು ನಮ್ಮ ಬದುಕಿನ ದೀಪಸ್ತಂಭ. ಅದರ ನೆರಳಲ್ಲಿ ನಾವು ಸಾಗಿದಾಗ ಶಾಂತಿಸಹಬಾಳ್ವೆಯ ಸಮಾಜ ಹಾಗೂ ದೇಶವನ್ನು ಸಶಕ್ತವಾಗಿ ಕಟ್ಟಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಆನಂದ ರಾವ್, ನಿರ್ದೇಶಕರಾದ ಅಂಜನಕುಮಾರ ಗಂಡಗುದರಿ, ಆನಂದ ಶೆಟ್ಟಿ, ಗಣೇಶ ನಾಯಕ, ರಾಜೇಶ ಗೌಡ, ದುರ್ಗಪ್ಪ ತಳವಾರ, ರೂಪಾ ಮಗದುಮ್, ಚಂದ್ರಕಾಂತ ಅಥಣಿಮಠ ಮತ್ತು ಸಂಘದ ಸಿಬ್ಬಂದಿಗಳು ಹಾಗೂ ಪಿಗ್ಮಿ ಸಂಗ್ರಹಕಾರರು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ವಿಶಾಲ ಪಾಟೀಲ ಸ್ವಾಗತಿಸಿದರು, ವನಿತಾ ಮೂಲ್ಯ ನಿರೂಪಿಸಿದರು, ರಘುನಾಥ ಗಾವಡೆ ವಂದಿಸಿದರು. ಸಮ್ಮೇದ್ ಗಾಡೇಕರ್ ಪರಿಚಯಿಸಿದರು.
