ಬೆಳಗಾವಿ-೨೧: ಮಹಾತ್ಮ ಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಅಧಿವೇಶನಕ್ಕೆ 100 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ನಾಳೆ ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಸಮಾವೇಶ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಸಜ್ಜಾಗಿದೆ.
ಕುಂದಾನಗರಿಯಲ್ಲಿ ಮಂಗಳವಾರ(ಇಂದು) ನಡೆಯುವ ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಸಮಾವೇಶ ಕಾರ್ಯಕ್ರಮಕ್ಕೆ ಕುಂದಾನಗರಿ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಅಲ್ಲದೇ ಈ ಕಾರ್ಯಕ್ರಮಕ್ಕೆ ಆಗಮಿಸುವ ರಾಷ್ಟ್ರೀಯ ನಾಯಕರ ಸ್ವಾಗತಕ್ಕೆ ಜಿಲ್ಲೆಯ ಕೈ ಮುಖಂಡರು, ಕಾರ್ಯಕರ್ತರು ಸಕಲ ಸಿದ್ದತೆ ನಡೆಸಿದ್ದಾರೆ.
ಕುಂದಾನಗರಿಗೆ ಕೈ ನಾಯಕರ ದಂಡು: ನಾಳೆ ನಡೆಯಲ್ಲಿರುವ ಸಮಾವೇಶಕಕ್ಕೆ ನಗರಾದ್ಯಂತ “ಕೈ ನಾಯಕರ ” ಬ್ಯಾನರ್..ಗಳು ರಾರಾಜಿಸುತ್ತಿದೆ. ಈಗಾಗಲೇ ಸಿದ್ಧತೆ ನಡೆದಿದ್ದು,ಕಾಂಗ್ರೆಸ್ ನಾಯಕರ ದಂಡೇ ಕುಂದಾನಗರಿಯಲ್ಲಿ ಬೀಡು ಬಿಟ್ಟಿದೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಮುನಿಯಪ್ಪ, ಎಚ್.ಕೆ. ಪಾಟೀಲ್, ರಾಮಲಿಂಗಾರೆಡ್ಡಿ, ವೀರಪ್ಪ ಮೊಯ್ಲಿ ಸೇರಿದಂತೆ ಘಟಾನುಘಟಿ ನಾಯಕರು ಬೆಳಗಾವಿಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಅಲ್ಲದೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಅಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ನಾಳೆ ಬೆಳಗಾವಿಗೆ ಆಗಮಿಸಲಿದ್ದಾರೆ.
ನಾಳೆ ಮಹಾತ್ಮ ಗಾಂಧೀಜಿ ಪ್ರತಿಮೆ ಅನಾವರಣ: ಸುವರ್ಣ ವಿಧಾನಸೌಧದಲ್ಲಿ ಪ್ರತಿಷ್ಠಾಪಿಸಿದ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜ. 21ರಂದು ಬೆಳಗ್ಗೆ 10.30ಕ್ಕೆ ಅನಾವರಣ ಮಾಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉಪಸ್ಥಿತಿಯಲ್ಲಿ ಸರ್ಕಾರಿ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ವಿಧಾನಸಭೆ ಅಧ್ಯಕ್ಷರು, ಪರಿಷತ್ ಸಭಾಪತಿ, ಸಚಿವರು, ಬೆಳಗಾವಿ, ಚಿಕ್ಕೋಡಿ ಮತ್ತು ಉತ್ತರ ಕನ್ನಡ ಕ್ಷೇತ್ರಗಳ ಸಂಸದರು ಮತ್ತು ಸ್ಥಳೀಯ ಶಾಸಕರು ಪಾಲ್ಗೊಳ್ಳುವರು. ಜತೆಗೆ, ವಿರೋಧ ಪಕ್ಷದ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ‘ಪ್ರತಿಮೆ ಅನಾವರಣದ ನಂತರ, ಕಾರ್ಯಕ್ರಮದ ಸವಿನೆನಪಿಗಾಗಿ ಎಲ್ಲ ಶಾಸಕರ ಗುಂಪು ಫೋಟೊ ತೆಗೆಯಲಾಗುವುದು. ಇದಾದ ಬಳಿಕ, ಅತಿಥಿಗಳು ಹಾಗೂ ಆಹ್ವಾನಿತರಿಗೆ ಮುಖ್ಯಮಂತ್ರಿ ಭೋಜನಕೂಟ ಏರ್ಪಡಿಸಿದ್ದಾರೆ. ಅಲ್ಲದೇ ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಸಮಾವೇಶ ಐತಿಹಾಸಿಕ ಕಾರ್ಯಕ್ರಮವಾಗಲಿದೆ.
ಎಲ್ಲಡೆ ರಾರಾಜಿಸುತ್ತಿವೆ ಫ್ಲೆಕ್ಸ್-ಬ್ಯಾನರ್ ಗಳು: ಬೆಳಗಾವಿಯಲ್ಲಿ ಬೃಹತ್ ಸಮಾವೇಶ ನಡೆಯಲಿರುವ ಸಿಪಿಇಡ್ ಮೈದಾನ ಸೇರಿ ಪ್ರಮುಖ ರಸ್ತೆಗಳಲ್ಲಿ ಕಣ್ಣು ಹಾಯಿಸಿದಲ್ಲಿ ಎಲ್ಲಾ ಕಡೆ ರಾಷ್ಟ್ರೀಯ ನಾಯಕರ ಸ್ವಾಗತ ಕೋರುವ ಫ್ಲೆಕ್ಸ್ ಮತ್ತು ಬ್ಯಾನರ್ ಗಳು ರಾರಾಜಿಸುತ್ತವೆ. ರಸ್ತೆಯ ಇಕ್ಕೆಲಗಳಲ್ಲಿ ಕಾಂಗ್ರೆಸ್ ಧ್ವಜಗಳು ಹಾರಾಡುತ್ತಿದ್ದು, ಇಡೀ ಬೆಳಗಾವಿ ಕಾಂಗ್ರೆಸ್ ಮತ್ತು ಗಾಂಧಿ ಮಯವಾಗಿರುವಂತೆ ಭಾಸವಾಗುತ್ತಿದೆ.
ಬಿಗಿ ಪೊಲೀಸ್ ಬಂದೋಬಸ್ತ್: ವಿವಿಐಪಿ ಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಮೇಲಸ್ತುವಾರಿ ವಹಿಸಿಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿಣಿ ನಡೆಯುವ ಬಹಿರಂಗ ಸಮಾವೇಶ ನಡೆಯುವ ಸಿಪಿಇಡ್ ಮೈದಾನ ಸೇರಿ ವಿವಿಧೆಡೆ ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
