ಬೆಳಗಾವಿ-೦೯:ನಮ್ಮ ನಾಡಿನ ಬಗ್ಗೆ ಹೋರಾಟ ಮಾಡಿ ತ್ಯಾಗ ಮಾಡಿದ ಮಹಾನ್ ಪುರುಷರ ಪುತ್ಥಳಿಗಳನ್ನು ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯಿಂದ ನಿರ್ಮಾಣ ಮಾಡುವುದು ಎಂದು ರಾಜಕುಮಾರ ಟೋಪಣ್ಣವರ ಪ್ರಶ್ನಿಸಿದ್ದಾರೆ.
ನಮ್ಮ ನಾಡಿನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಬಂಟ ಅಮಟೂರು ಬಾಳಪ್ಪ, ಇಮ್ಮಡಿ ಪುಲಕೇಶಿ, ಕೃಷ್ಣದೇವರಾಯ, ಬೆಳಗಾವಿ ಕೋಟೆ ಸ್ಥಾಪನೆ ಮಾಡಿದ ಜೈನ ಸಮಾಜದ ರಾಣಿ ಜಕಲಾದೇವಿ, ಜಗಜ್ಯೋತಿ ಬಸವೇಶ್ವರರ ಮೂರ್ತಿ ಸ್ಥಾಪನೆ ಮಾಡುವ ಜವಾಬ್ದಾರಿ ತೆಗೆದುಕೊಳ್ಳಬೇಕಿದ್ದ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಕೇವಲ ಕಲಾವಿದರ ಹಣ ಲೂಟಿ ಹೊಡೆಯುವಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಅನಗೋಳದಲ್ಲಿ ಸಂಭಾಜಿ ಮಹಾರಾಜರರ ಪುತ್ಥಳಿ ನಿರ್ಮಾಣ ಮಾಡಿದ್ದಕ್ಕೆ ಕನ್ನಡಿಗರ ಯಾರ ವಿರೋಧವೂ ಇಲ್ಲ. ಮಹಾರಾಷ್ಟ್ರದಿಂದ ಲೋಕೋಪಯೋಗಿ ಸಚಿವ ಶಿವೇಂದ್ರ ರಾಜೆ ಬೊಸ್ಲೋ ಕಡೆಯಿಂದ ನಾಡದ್ರೋಹಿ ಘೋಷಣೆ ಕೂಗಿಸಲು ಪ್ರಚೋದನೆ ನೀಡಿದ ಶಾಸಕ ಅಭಯ ಪಾಟೀಲ್, ಮೇಯರ್ ಸವಿತಾ ಕಾಂಬಳೆ ಹಾಗೂ ಉಪಮೇಯರ್ ಆನಂದ ಚೌಹಾನ್ ಮೇಲೆ ಪೊಲೀಸರು ದೂರು ದಾಖಲಿಸಿಕೊಳ್ಳಬೇಕು. ಕನ್ನಡ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಲು ಹಿಂದೆ ಮುಂದೆ ನೋಡದ ಪೊಲೀಸರು ಇವರ ಮೇಲೆ ಎಫ್ಐಆರ್ ದಾಖಲಿಸಲು ಹಿಂದೆಟ್ಟು ಹಾಕುತ್ತಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಪೊಲೀಸರು ಕ್ರಮ ಕೈಗೊಳ್ಳದೆ ಇದ್ದರೆ ಗಲ್ಲಿ ಗಲ್ಲಿಗಳಲ್ಲಿ ಕನ್ನಡಿಗರು ನಮ್ಮ ನಾಡಿನ ಮಹಾನ್ ಪುರುಷರ ಪುತ್ಥಳಿ ನಿರ್ಮಾಣ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.