ಮೂಡಲಗಿ-೦೧ : ಗದ್ದೆಯಲ್ಲಿ ನೀರು ಹಾಯಿಸುವ ಸುಲುವಾಗಿ ಮೂವರು ನಡುವೆ ವಾಗ್ವಾದ ನಡೆದಿದ್ದು, ಅದು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಪುಲಗಡ್ಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ರಾಮಪ್ಪ ಬಸವಂತಪ್ಪ ಕೌಜಲಗಿ(25) ಮೃತ ವ್ಯಕ್ತಿ, ಸಿದ್ದಪ್ಪ ಮಲ್ಲಪ್ಪ ಕೌಜಲಗಿ(24) ಕೊಲೆ ಮಾಡಿದ ಆರೋಪಿ ಇವರಿಬ್ಬರು ಸಂಬಂಧಿಕರು. ಸೋಮವಾರದಂದು ಗದ್ದೆಯಲ್ಲಿ ಇಬ್ಬರು ನೀರು ಹಾಯಿಸುತ್ತಿದ್ದು, ನೀರಿಗಾಗಿ ರಾಮಪ್ಪ ಹಾಗೂ ಅವನ ತಂದೆ ಬಸವಂತಪ್ಪ ಹಾಗೂ ಸಿದ್ದಪ್ಪನ ನಡುವೆ ಜಗಳವಾಗಿ ಅದು ವಿಕೋಪಕ್ಕೆ ತಿರುಗಿ ಸಿದ್ದಪ್ಪ ತನ್ನ ಕೈಯಲ್ಲಿದ್ದ ಕುಡುಗೋಲಿನಿಂದ ರಾಮಪ್ಪನನ್ನು ಕೊಚ್ಚಿ ಕೊಲೆ ಮಾಡಿದ್ದು, ಅದನ್ನು ತಡೆಯಲು ಹೋದ ರಾಮಪ್ಪನ ತಂದೆ ಬಸವಂತಪ್ಪನ ಮೇಲೇಯೂ ಹಲ್ಲೆ ಮಾಡಿರುವ ಬಗ್ಗೆ ಸಿದ್ದಪ್ಪ ಪೊಲೀಸ್ ಅಧಿಕಾರಿಗಳ ಮುಂದೆ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ. ಪೊಲೀಸ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಗಂಭೀರ ಗಾಯವಾದ ಬಸವಂತಪ್ಪನನ್ನು ಗೋಕಾಕ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇನ್ನು ಕೊಲೆ ಮಾಡಿದ ಆರೋಪಿ ಸಿದ್ದಪ್ಪ ಕಳೆದ ನವೆಂಬರ ತಿಂಗಳ 12ರಂದು ಮದುವೆಯಾಗಿದ್ದು, ಬಸವಂತಪ್ಪ ತನ್ನ ಒಬ್ಬನೇ ಮಗ ರಾಮಪ್ಪನಿಗೆ ಮದುವೆ ಮಾಡುವ ಕನಸು ಕಂಡಿದ್ದ ಆದರೇ ಆ ಕನಸು ಬತ್ತಿ ಹೋಗಿದೆ. ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ದೂದಪೀರ್ ಮುಲ್ಲಾ, ಸಿಪಿಐ ಶ್ರೀಶೈಲ್ ಬ್ಯಾಕೋಡ, ಪಿಎಸ್ಐ ರಾಜು ಪೊಜೇರಿ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.