ಬೆಳಗಾವಿ-೩೧:‘ಅಸ್ಮಿತೆ’ ವ್ಯಾಪಾರ ಮೇಳ-2024
ಬೆಳಗಾವಿ ನಗರದಲ್ಲಿ ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳು ಹಾಗೂ ಖಾದಿ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ
ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ ಮತ್ತು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಮತ್ತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ, ಬೆಳಗಾವಿ ರವರ ಸಹಭಾಗಿತ್ವದಲ್ಲಿ ಬೆಳಗಾವಿ ನಗರದಲ್ಲಿ ದಿನಾಂಕಃ26.12.2024 ರಿಂದ 04.01.2025 ರವರೆಗೆ ಬೆಳಗಾವಿಯ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ಮತ್ತು ಖಾದಿ ಉತ್ಪನ್ನಗಳ ಬೃಹತ್ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ.
ದಿನಾಂಕ: 26.12.2024 ರಂದು ರಾಜ್ಯ ಮಟ್ಟದ ಈ ಮೇಳವನ್ನು ಶ್ರೀ ಸಿದ್ಧರಾಮಯ್ಯ ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ರವರು ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಮಾರಾಟ ಮಳಿಗೆಗಳನ್ನು ಉದ್ಘಾಟಿಸಿ, ಶುಭ ಕೋರಿದರು. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಡಿ.ಕೆ.ಶಿವಕುಮಾರ ಮಾನ್ಯ ಉಪ ಮುಖ್ಯಮಂತ್ರಿಗಳು ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಮಾನ್ಯ ಸಚಿವರುಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖಾ ಸಚಿವರಾದ ಶ್ರೀ. ಶರಣಪ್ರಕಾಶ ಪಾಟೀಲ, ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪೂರ ಹಾಗೂ ಶ್ರೀ. ಆಸಿಫ್ (ರಾಜು) ಸೇಠ್ ಮಾನ್ಯ ಶಾಸಕರು, (ವಿಧಾನಸಭೆ), ಬೆಳಗಾವಿ ಉತ್ತರ, ಶ್ರೀಮತಿ ಉಮಾ ಮಹಾದೇವನ್,ಭಾ.ಆ.ಸೇ. ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು ಮತ್ತು ಶ್ರೀಮತಿ ಪಿ.ಐ.ಶ್ರೀವಿದ್ಯಾ,ಭಾ.ಆ.ಸೇ., ಮಾನ್ಯ ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಜೀವನೋಪಾಯ ಅಭಿಯಾನ ರವರು ಉಪಸ್ಥಿತರಿದ್ದರು.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸ್ವ-ಸಹಾಯ ಗುಂಪಿನ ಮಹಿಳೆಯರು ತಮ್ಮ ಜಿಲ್ಲೆಯ ಪ್ರಮುಖ ಉತ್ಪನ್ನಗಳೊಂದಿಗೆ ಭಾಗವಹಿಸುತ್ತಿದ್ದು, ಒಟ್ಟು 150 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ 10 ಆಹಾರ ಮೇಳದ ಮಳಿಗೆಗಳು ಮತ್ತು 50 ಖಾದಿ ಉತ್ಪನ್ನಗಳ ಮಳಿಗೆಗಳನ್ನು ಒಳಗೊಂಡಿದೆ. ಈ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ದಿನಾಂಕ: 04.01.2025 ರವರೆಗೆ ಪ್ರತೀ ದಿನ ಬೆಳಿಗ್ಗೆ 10.30 ಯಿಂದ ರಾತ್ರಿ 9.30 ರವರೆಗೆ ಪ್ರದರ್ಶನ ಮತ್ತು ಮಾರಾಟಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ದಿನಾಂಕ:26.12.2024 ರಿಂದ ಪ್ರಾರಂಭವಾಗಿರುವ ಈ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಪ್ರತಿದಿನ ತಂಡೋಪತಂಡವಾಗಿ ಬಂದು ಮಳಿಗೆಗಳ ಉತ್ಪನ್ನಗಳ ಬಗ್ಗೆ ಮಹಿಳೆಯರೊಂದಿಗೆ ಚರ್ಚಿಸಿ ಸ್ವ-ಸಹಾಯ ಗುಂಪಿನ ಮತ್ತು ಖಾದಿ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ದಿನಾಂಕ: 29.12.2024 ರ ವರೆಗೆ (4 ದಿನಗಳಲ್ಲಿ) ಒಟ್ಟು ರೂ. 50.67 ಲಕ್ಷ ಮಹಿಳಾ ಸ್ವ-ಸಹಾಯ ಗುಂಪಿನ ಉತ್ಪನ್ನಗಳು ಮತ್ತು ರೂ. 50.06 ಲಕ್ಷ ಖಾದಿ ಉತ್ಪನ್ನಗಳು ಮಾರಾಟವಾಗಿದ್ದು, ಒಟ್ಟು ರೂ. 100.73 ಲಕ್ಷ ಗಳ ಮಾರಾಟದ ದಾಖಲೆಯಾಗಿರುತ್ತದೆ.
ದಿನಾಂಕ: 02.01.2025 ಹಾಗೂ 03.01.2025 ರಂದು ಮೇಳದ ವೇದಿಕೆಯಲ್ಲಿ ಸಾಯಂಕಾಲ 06:30 ರಿಂದ ರಾತ್ರಿ 09:00 ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ದಿನಾಂಕ: 02.01.2025 ರಂದು ಸವಾರಿ ಬ್ಯಾಂಡ್ (Savaari Band), ಬೆಂಗಳೂರು ಹಾಗೂ 03.01.2025 ರಂದು ಸ್ಟ್ಯಾಕೇಟೊ ಕೆಫೆ (Stacatoo Cafe) ರವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿರುತ್ತದೆ.
ಬೆಳಗಾವಿಯ ಈ ಮೇಳದ ಮಳಿಗೆಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳಾದ ಚನ್ನಪಟ್ಟಣದ ಮರದ ಗೊಂಬೆಗಳು, ಕೊಪ್ಪಳದ ಕಿನ್ನಾಳ ಆಟದ ಸಾಮಾನುಗಳು, ಇಳಕಲ್ ಸೀರೆಗಳು, ಕೊಪ್ಪಳದ ಬಾಳೆ ನಾರಿನ ಉತ್ಪನ್ನಗಳು, ಉತ್ತರಕನ್ನಡದ ಚಿತ್ತಾರ ಕಲೆ ಉತ್ಪನ್ನಗಳು, ಚಿಕ್ಕಬಳ್ಳಾಪುರ ಚರ್ಮದಿಂದ ತಯಾರಿಸಿದ ವಿವಿಧ ವಿನ್ಯಾಸದ ಅಲಂಕಾರಿಕ ದೀಪಗಳು, ವಿಜಯನಗರ ಕಂಬಳಿ ಮತ್ತು ಢಮರು, ರಾಯಚೂರಿನ ಮುತ್ತಿನಹಾರ, ಶಿವಮೊಗ್ಗ ಮಣಿಸರಗಳು, ಬೀದರ ಬಿದರಿ, ಸಂಡೂರ ಲಂಬಾಣಿ ಉತ್ಪನ್ನಗಳು, ಮೈಸೂರು ಇನ್–ಲೇ, ನವಲಗುಂದ ಧರಿ ಹಾಗೂ ರೇಷ್ಮೆ ಸೀರೆಗಳು, ವಿವಿಧ ನವಾಕರ್ಷಣೆಯ ಬಟ್ಟೆಗಳು, ವಿವಿಧ ವಿನ್ಯಾಸದ ಬ್ಯಾಗ್ ಗಳು ಮತ್ತು ಗೃಹಾಲಂಕಾರಿಕ ವಸ್ತುಗಳು, ಪಾರಂಪರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ನವೀನ ವಿನ್ಯಾಸದ ಆಭರಣಗಳು, ಆಹಾರ ಉತ್ಪನ್ನಗಳು ಮುಂತಾದವುಗಳು ಸಾರ್ವಜನಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ.
ಬೆಳಗಾವಿಯ ಖಡಕ್ ರೊಟ್ಟಿ, ಚಟ್ನಿ, ಹಪ್ಪಳ, ಸಂಡಿಗೆ, ಕುಂದಾ, ಗೋಕಾಕ ಕರದಂಟ, ಬಳ್ಳಾರಿ ಅಂಜೂರು ಹಣ್ಣಿನ ಉತ್ಪನ್ನ, ಚಿತ್ರದುರ್ಗ ಅಡುಗೆ ಎಣ್ಣೆ, ಚಾಮರಾಜನಗರ ಜೇನು ತುಪ್ಪ ಸೇರಿದಂತೆ ಮಸಾಲಾ ಉತ್ಪನ್ನಗಳು, ಸಿರಿ ಧಾನ್ಯ ಉತ್ಪನ್ನಗಳು, ಮೌಲ್ಯವರ್ಧಿತ ಕರಾವಳಿ ಉತ್ಪನ್ನಗಳು ಈ ಮೇಳದ ವಿಶೇಷ ಆಹಾರ ಉತ್ಪನ್ನಗಳಾಗಿವೆ.
ಖಾದಿ ಮಳಿಗೆಗಳಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ಬೇರೆ ಬೇರೆ ರಾಜ್ಯಗಳ ಖಾದಿ ಉತ್ಪನ್ನಗಳ ಮಾರಾಟ ಮಾಡಲಾಗುತ್ತಿದೆ. ಪ್ರಮುಖವಾಗಿ ಬೆಳಗಾವಿಯ ಸಂಕೇಶ್ವರದ ಕಂಬಳಿಗಳು, ಬಳ್ಳಾರಿ ಜೀನ್ಸ್, ಗದಗ-ಬೆಟಗೇರಿ, ಜಮಖಂಡಿ, ಧಾರವಾಡ, ವಿಜಯಪುರ ಪ್ರಸಿದ್ಧ ಖಾದಿ ಉತ್ಪನ್ನಗಳು, ಮೈಸೂರು ಚಾಪೆ, ಬಿಹಾರ ಮತ್ತು ಉತ್ತರ ಪ್ರದೇಶ ಖಾದಿ ವಸ್ತ್ರಗಳು, ಕಾಶ್ಮೀರ ಸೀರೆಗಳು, ರೇಷ್ಮೆ ಜಾಕೇಟ್ ಗಳು, ಆಂಧ್ರಪ್ರದೇಶದ ಕರಕುಶಲ ವಸ್ತುಗಳು ಸೇರಿದಂತೆ ಮಕ್ಕಳು, ಯುವಕ/ ಯುವತಿಯರು, ಮಹಿಳೆಯರು, ವಯಸ್ಕರರು ಹಾಗೂ ಹಿರಿಯರು ಸೇರಿದಂತೆ ಎಲ್ಲಾ ವಯೋಮಾನದವರ ಅಳತೆಗನುಗುಣವಾಗಿ ವಿವಿಧ ವಿನ್ಯಾಸದ ಸಿದ್ಧ ಉಡುಪುಗಳು ಲಭ್ಯವಿವೆ.
ಅಕ್ಕ ಕೆಫೆ ಲಾಂಛನದಡಿ ಒಟ್ಟು 10 ಆಹಾರ ಮಳಿಗೆಗಳಲ್ಲಿ ಉತ್ತರ ಕರ್ನಾಟಕದಲ್ಲಿ ಹೆಸರುವಾಸಿಯಾದ ಗಿರಮಿಟ್/ಚುರುಮರಿ ಮಂಡಕ್ಕಿ, ಮಿರ್ಚಿ ಬಜಿ, ಜೋಳದ ಖಡಕ್ ರೊಟ್ಟಿ ಚಟ್ನಿ ಸೇರಿದಂತೆ ಹೋಳಿಗೆ, ಮಂಗಳೂರು ನೀರ್ದೋಸೆ, ಮೈಸೂರು ಮಸಾಲಾ, ದಾವಣಗೆರೆ ಬೆಣ್ಣೆದೋಸಾ, ಆಲೂ ರೋಲ್, ಚಿಕನ್ ಬಿರಿಯಾನಿ ಮತ್ತು ಬ್ಯಾಂಬು ಬಿರಿಯಾನಿ, ಫ್ರೂಟ್ ಸಲಾಡ್ ಮತ್ತು ಫ್ರೂಟ್ ಜ್ಯೂಸ್ ಮುಂತಾದವುಗಳನ್ನು ಸ್ಥಳದಲ್ಲೇ ಸ್ವಾದಿಷ್ಟಕರ ಮತ್ತು ಶುಚಿರುಚಿಯಾಗಿ ತಯಾರಿಸಿ ಕೊಡಲಾಗುತ್ತಿದೆ.
ರಾಜ್ಯದಲ್ಲಿ ಅಭಿಯಾನದಡಿ 2.79 ಲಕ್ಷ ಸ್ವ-ಸಹಾಯ ಗುಂಪುಗಳಡಿ 29.66 ಲಕ್ಷ ಕುಟುಂಬಗಳನ್ನು ಗ್ರಾಮೀಣ ಹಾಗೂ ನಗರ ಜೀವನೋಪಾಯ ಅಭಿಯಾನದಡಿ ಹಾಗೂ 45 ಸಾವಿರ ಸ್ವ-ಸಹಾಯ ಗುಂಪುಗಳಡಿ 4.50 ಲಕ್ಷ ಕುಟುಂಬಗಳನ್ನು ನಗರ ಅಭಿಯಾನದಡಿ ಸಂಘಟಿಸಲಾಗಿದ್ದು, ಪ್ರತಿಯೊಬ್ಬ ಮಹಿಳೆಯು ಸ್ವಾವಲಂಬನೆಯ ಬದುಕಿನೊಂದಿಗೆ ತನ್ನ ಕುಟುಂಬವನ್ನು ಆರ್ಥಿಕ ಸಬಲತೆಯತ್ತ ಕೊಂಡೊಯ್ಯುವಲ್ಲಿ ಅನುಕೂಲವಾಗಲು ಪಂಚಾಯತಿ, ಎಲ್ಲಾ ತಾಲೂಕು, ಜಿಲ್ಲೆ, ವಿಭಾಗ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಈ ರೀತಿಯ ಮೇಳಗಳನ್ನು ಏರ್ಪಡಿಸಿ ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳ ಮಾರಾಟಕ್ಕೆ ಅನುಕೂಲ ಒದಗಿಸಲಾಗುತ್ತಿದೆ.
ಬೆಳಗಾವಿಯಲ್ಲಿ ಆಯೋಜಿಸಲಾಗುತ್ತಿರುವ ಸತತ 4ನೇ ವರ್ಷದ ಈ ಮೇಳದಲ್ಲಿ ಪ್ರಮುಖವಾಗಿ ನಗರ ಹಾಗೂ ಗ್ರಾಮೀಣ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿದ ಉತ್ಪನ್ನಗಳು ಮತ್ತು ಖಾದಿ ಉತ್ಪನ್ನಗಳು ಮಾರಾಟ ಮಾಡುತ್ತಿರುವುದರಿಂದ ಹೆಚ್ಚು ಹೆಚ್ಚು ಸಾರ್ವಜನಿಕರು ಈ ಮೇಳದ ಸದುಪಯೋಗವನ್ನು ಪಡೆದುಕೊಂಡು ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳನ್ನು ಖರೀದಿಸಿ, ಹೆಚ್ಚಿನ ವಹಿವಾಟದೊಂದಿಗೆ ಅವರ ಆರ್ಥಿಕ ಸಬಲತೆಗೆ ಬೆಂಬಲಿಸಲು ನಾಡಿನ ಹಾಗೂ ಬೆಳಗಾವಿಯ ಸಾರ್ವಜನಿಕರಲ್ಲಿ ಕೇಳಿಕೊಳ್ಳುತ್ತಾ, ಈ ನಿಟ್ಟಿನಲ್ಲಿ ಬೆಳಗಾವಿಯ ಎಲ್ಲಾ ಸಮೂಹ ಮಾಧ್ಯಮಗಳು ಈ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಕುರಿತು ಹೆಚ್ಚಿನ ಮಟ್ಟದಲ್ಲಿ ಸುದ್ದಿಗಳ ಪ್ರಕಟಣೆ ಮತ್ತು ಸುದ್ದಿ ಪ್ರಸಾರ ಮಾಡುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ಒದಗಿಸಿ ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳ ಹಾಗೂ ಖಾದಿ ಉತ್ಪನ್ನಗಳ ಮಾರಾಟಕ್ಕೆ ಬೆಂಬಲಿಸಲು ಕೋರಿದೆ.