23/12/2024
IMG-20241205-WA0000

ಬೆಳಗಾವಿ-೦೫:ಕರ್ನಾಟಕ ಘನ ಸರ್ಕಾರದ ಆದೇಶದ ಮೇರೆಗೆ ಹಾಗೂ ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಪೋಲಿಸ್ ಮಹಾನಿರ್ದೇಶಕರ ಆದೇಶದಂತೆ 14 ಜನ ಸಜಾ ಬಂದಿಗಳನ್ನು ಬಿಡುಗಡೆಗೊಳಿಸಿದ್ದು, ಬಿಡುಗಡೆ ನಂತರ ಸಮಾಜದಲ್ಲಿ ಒಮ್ಮೆ ಮಾಡಿದ ತಪ್ಪನ್ನು ಮರಳಿ ಮಾಡದೇ ಸಮಾಜಕ್ಕೆ ಮಾದರಿಯಾಗುವಂತೆ ಬದುಕಿ ಬಾಳಬೇಕು ಎಂದು (ನವೆಂಬರ್. 27) ರಂದು ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿ ಕಾರಾಗೃಹದ ಪ್ರಭಾರಿ ಮುಖ್ಯ ಅಧೀಕ್ಷಕರಾದ ಶ್ರೀ. ವಿ. ಕೃಷ್ಣಮೂರ್ತಿ ಅವರು ತಿಳುವಳಿಕೆ ಹೇಳಿದರು.

ಸಂಸ್ಥೆಯ ವಿವಿಧ ವಿಭಾಗಗಳಾದ ಮರಗೆಲಸ, ಟೇಲರಿಂಗ, ನೇಯ್ದೆ ವಿಭಾಗ, ಗಾರ್ಮೆಂಟ್ಸ್ ವಿಭಾಗ, ಕಿಚನ್ ವಿಭಾಗ ಒಳತೋಟ ಹಾಗೂ ಹೊರ ತೋಟಗಳಲ್ಲಿ ತಮ್ಮಗೆ ವಹಿಸಿದ ಕೆಲಸಗಳನ್ನು ಉತ್ತಮ ರೀತಿಯಾಗಿ ನಿರ್ವಹಿಸಿದಿರಿ ಎಂದು ಕಳೆದ 12-13 ವರ್ಷಗಳಿಂದ ಈ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿ ಬಿಡುಗಡೆ ಹೊಂದುತ್ತಿರುವ ಸಜಾ ಬಂದಿಗಳನ್ನು ಉದ್ದೇಶಿಸಿ ಮಾತನಾಡಿದರು.

ಇಷ್ಟು ವರ್ಷ ಕುಟುಂಬಸ್ಥರಿಂದ ದೂರವಿದ್ದು ಈಗ ಅವರೊಂದಿಗೆ ಪ್ರೀತಿಯಿಂದ ಬಾಳುತ್ತಾ ಸನ್ನಡತೆಯಿಂದ ಬಿಡುಗಡೆಗೊಂಡ ತಾವು ಸಮಾಜದಲ್ಲಿ ಉತ್ತಮ ನಡತೆಯಿಂದ ಬಾಳಿ ಇತರರಿಗೆ ಮಾದರಿಯಾಗಬೇಕು. ಹಾಗೂ ಶಾಂತಿ ಅಹಿಂಸೆ, ಸಮನ್ವಯತೆ ಬಗ್ಗೆ ಇತರರಿಗೆ ತಿಳಿಸಬೇಕು. ನಿಮ್ಮ ಮುಂದಿನ ಜೀವನ ಸಂತೋಷದಿಂದ ಕಳೆಯಿರಿ, ದೇವರು ತಮಗೆಲ್ಲ ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಸಿದರು.

ಕಾರಾಗೃಹದ ಪ್ರಭಾರಿ ಮುಖ್ಯ ಅಧೀಕ್ಷಕರಾದ ಶ್ರೀ ವಿ. ಕೃಷ್ಣಮೂರ್ತಿ 14 ಜನ ಸಜಾ ಬಂದಿಗಳಿಗೆ ಬಿಡುಗಡೆ ಪ್ರಮಾಣ ಪತ್ರ ವಿತರಿಸಿದರು. ಸದರಿ ಶಿಕ್ಷಾ ಬಂದಿಗಳ ಕಾರಾಗೃಹದಲ್ಲಿ ಉತ್ತಮ ಕೆಲಸ ಮತ್ತು ಉತ್ತಮ ನಡವಳಿಕೆಯನ್ನು ಪರಿಗಣಿಸಿ 14 ವರ್ಷಗಳ ಶಿಕ್ಷೆಯನ್ನು ಅನುಭವಿಸಿದ ಸಜಾ ಬಂದಿಗಳ ಬಿಡುಗಡೆ ಕಡತಗಳನ್ನು
ಕಾರಾಗೃಹದ ಸ್ಥಾಯಿ ಸಲಹಾ ಮಂಡಳಿಯ ಶಿಪಾರಸ್ಸಿನಂತೆ ಸರ್ಕಾರ ಹಾಗೂ ಬೆಂಗಳೂರು ಪ್ರಧಾನ ಕಛೇರಿಗೆ ಕಳುಹಿಸಲಾಗಿತ್ತು.

ಈ ವೇಳೆ ಸಹಾಯಕ ಅಧೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಕೊನ್ನೂರ, ಜೈಲರಗಳಾದ ಶ್ರೀ ರಾಜೇಶ ಧರ್ಮಟ್ಟಿ ಹಾಗೂ ಶ್ರೀ ರಮೇಶ ಕಾಂಬಳೆ ಉಪಸ್ಥಿತರಿದ್ದರು

 

Leave a Reply

Your email address will not be published. Required fields are marked *

error: Content is protected !!