23/12/2024
IMG-20241201-WA0003

“ಕೊಪ್ಪಳದ ಕಾರಾಗೃಹದಲ್ಲೊಂದು ಸನ್ಮಾನ

– ಬಂಧೀಖಾನೆಯಲ್ಲೂ ಬೆಳಗಿದ ಅಕ್ಷರ ಬಂಧನ”

ಬಿಜಾಪುರದ ಪುಸ್ತಕ ಪರಿಷತ್ತಿನವರು ನೀಡುವ ಪುಸ್ತಕ ಜಗದ್ಗುರು “ಸಿದ್ದಲಿಂಗ ಶ್ರೀ” ಪ್ರಶಸ್ತಿ ಸ್ವೀಕರಿಸಲು, ನಿನ್ನೆಯ ದಿನ ಗುಬ್ಬಿಯಿಂದ ಬಿಜಾಪುರಕ್ಕೆ ಪಯಣಿಸುವಾಗ, ಕೊಪ್ಪಳದ ಬಳಿ ಆತ್ಮೀಯ ಅಕ್ಷರಬಂಧು, ಹಲವು ವರ್ಷಗಳ ಕಾವ್ಯಲೋಕದ ಒಡನಾಡಿಗಳು, ಪರಮಾಪ್ತ ಸಾಹಿತ್ಯಿಕ ಮಿತ್ರರು, ಸ್ವತಃ ಪ್ರತಿಭಾವಂತ ಬರಹಗಾರರು ಆಗಿರುವ ಕವಿ ಹೃದಯದ ಕೊಪ್ಪಳ ಕಾರಾಗೃಹ ಅಧೀಕ್ಷರಾದ(Jail superintendent) ಶ್ರೀ ಅಂಬರೀಷ್ ಪೂಜಾರಿ ಅವರ ಅಕ್ಕರೆಯ ಒತ್ತಾಯ, ಪ್ರೀತಿಯ ಆಗ್ರಹಕ್ಕೆ ಶರಣಾಗಿ ಕೊಪ್ಪಳ ಜಿಲ್ಲಾ ಕಾರಾಗೃಹಕ್ಕೆ ಭೇಟಿಕೊಡುವಂತಾಯಿತು.

ಬಂಧೀಖಾನೆಯ ತಮ್ಮ ಕಛೇರಿಯಲ್ಲಿ ನನ್ನನ್ನು ಮತ್ತು ನನ್ನ ಶ್ರೀಮತಿಯನ್ನು ಶಾಲು, ಹಾರ, ತುರಾಯಿಗಳೊಂದಿಗೆ ಸನ್ಮಾನಿಸಿ, ತಮ್ಮ ಇತ್ತೀಚಿನ ಕಾವ್ಯಕೃತಿಯನ್ನು ನೀಡಿ ಪುರಸ್ಕರಿಸಿದ ಅಂಬರೀಷರ ಸಹೃದಯತೆ, ಹಾಗೂ ಅವರ ಸಿಬ್ಬಂದಿಯವರ ಆತಿಥ್ಯಕ್ಕೆ ನಾನು ಅಕ್ಷರಶಃ ಮೂಕವಿಸ್ಮಿತ.

ಕಡಕ್ ಖಾಕಿ ಕಂಗಳಲ್ಲೂ ಕಾವ್ಯದ ಮಿನುಗು, ಗುಡುಗುವ ಆರಕ್ಷಕ ಗುಂಡಿಗೆಗಳಲ್ಲೂ ಅಕ್ಷರ ಪ್ರೀತಿಯ ಬೆರಗು, ಕಾರಾಗೃಹದಲ್ಲೂ ಸಾಹಿತ್ಯದ ಮೆರಗು.. ಶ್ರೀ ಅಂಬರೀಷ್ ಸಾರ್ ಹಾಗೂ ಅವರ ಸಿಬ್ಬಂದಿಯ ಅಕ್ಷರದ ಒಲವು, ಕಾರಾಗೃಹದ ಗ್ರಂಥಾಲಯದಲ್ಲಿನ ಸಾಹಿತ್ಯಿಕ ಚೆಲುವು, ಅಕ್ಕರೆ ಅಂತಃಕರಣಗಳ ನಿಲುವು ನಮ್ಮ ಹೃನ್ಮನಗಳನ್ನು ನಿಬ್ಬೆರಗಾಗಿಸಿತು.

ಅನಿರೀಕ್ಷಿತವಾಗಿ ಈ ಅವಿಸ್ಮರಣೀಯ ಕ್ಷಣಗಳನ್ನು ಕಟ್ಟಿಕೊಟ್ಟ, ಇಂತಹ ಅಪೂರ್ವ ಅವಕಾಶ ಕಲ್ಪಿಸಿದ ಶ್ರೀ ಅಂಬರೀಷ್ ಸಾರ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು. ಶ್ರೀ ಹಾವೋಜಿ, ಶ್ರೀ ವಸಂತ್ ಹಾಗೂ ಸಮಸ್ತ ಸಿಬ್ಬಂದಿಗೆ ನಾನು ಅಭಾರಿ.

ಇಂತಹ ಅಕ್ಷರಬಂಧುಗಳ ಚೈತನ್ಯ ಇರುವಲ್ಲಿ, ಅಕ್ಷರಪ್ರೀತಿಯ ಕಾರುಣ್ಯ ಹರಿವಲ್ಲಿ, ಶಾರದೆಯ ಸಾಹಿತ್ಯವೀಣೆ ಅನುರಣಿಸುವಲ್ಲಿ ಕಾರಾಗೃಹವೂ ಕರುಣೆಯ ತವರಾದೀತು, ಅಪರಾಧಿಗಳ ಬದಲಿಸುವ ದೇಗುಲವಾದೀತು, ಬದುಕು ಬೆಳಗುವ ಬೆಳದಿಂಗಳ ನಂದನವಾದೀತು.. ಏನಂತೀರಾ..? ” – ಪ್ರೀತಿಯಿಂದ

ಎ.ಎನ್.ರಮೇಶ್. ಗುಬ್ಬಿ.

Leave a Reply

Your email address will not be published. Required fields are marked *

error: Content is protected !!