ಬೆಳಗಾವಿ-೩೦: ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡಿಸಲು ಜಿಲ್ಲಾ ಪಂಚಾಯತ್ ವತಿಯಿಂದ ನಡೆಸಲಾಗುತ್ತಿರುವ “ಟ್ಯಾಲೆಂಟ್ ಸರ್ಚ್” ಪರೀಕ್ಷೆಯ ಪ್ರಯುಕ್ತ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಏಕಕಾಲದಲ್ಲಿ ತಾಲೂಕ ಮಟ್ಟದಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಅದರ ಪ್ರಯುಕ್ತ ಶನಿವಾರ ಬೆಳಗಾವಿ ನಗರದ ರಾಮತೀರ್ಥ ನಗರದ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ವಂಟಮೂರಿಯ ಸರಕಾರಿ ಪ್ರೌಢ ಶಾಲೆ ಪರೀಕ್ಷಾ ಕೇಂದ್ರಗಳಿಗೆ ಜಿಪಂ ಸಿಇಒ ರಾಹುಲ್ ಶಿಂದೆ ರವರು ಭೇಟಿ ನೀಡಿದರು.
ಜಿಪಂ ಸಿಇಒ ರಾಹುಲ್ ಶಿಂಧೆ ರವರು ಕರ್ನಾಟಕ ಪಬ್ಲಿಕ್ ಶಾಲೆ ರಾಮತೀರ್ಥನಗರ ಹಾಗೂ ಸರಕಾರಿ ಪ್ರೌಢ ಶಾಲೆ ವಂಟಮೂರಿ ಶಾಲೆಗಳಲ್ಲಿ ಪರೀಕ್ಷೆ ಬರೆಯುತ್ತಿದ್ದ ಮಕ್ಕಳೊಂದಿಗೆ ಚರ್ಚಿಸಿದಾಗ ಮಕ್ಕಳು ಈ “ಟ್ಯಾಲೆಂಟ್ ಸರ್ಚ್ ಪರೀಕ್ಷೆ”ಯ ಕುರಿತಾಗಿ ತುಂಬಾ ಹರ್ಷ ವ್ಯಕ್ತಪಡಿಸಿದರು. ಹಾಗೂ ತಮ್ಮ ಭಾವಿ ಜೀವನಕ್ಕೆ ಹಾಗೂ ಮುಂಬರುವ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಈ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದ್ದು, ಎಲ್ಲರಲ್ಲೂ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಇದು ತುಂಬಾ ಸಹಾಯವಾಗುತ್ತದೆ ಎಂದು ತಮ್ಮ ಅಭಿಪ್ರಾಯಗಳನ್ನುಅತ್ಯಂತ ಉತ್ಸಾಹದಿಂದ ವ್ಯಕ್ತಪಡಿಸಿದರು.
ಅದೇ ರೀತಿಯಾಗಿ ವಿದ್ಯಾರ್ಥಿಗಳಿಗೆ 9ನೇ ತರಗತಿಗಳಿಂದಲೇ ಈ ಪರೀಕ್ಷೆಗಳನ್ನು ನಡೆಸುವ ಮೂಲಕ ಅವರು ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಆತ್ಮಸ್ಥೈರ್ಯವು ಇನ್ನಷ್ಟು ಗಟ್ಟಿಯಾಗುವಂತೆ ಮಾಡಲು ಈ ಪರೀಕ್ಷೆ ಅತ್ಯಂತ ಸೂಕ್ತವಾಗಿದೆ ಎಂಬ ಅಭಿಪ್ರಾಯವನ್ನು ಎಲ್ಲ ಶಿಕ್ಷಕರು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಪ ನಿರ್ದೇಶಕರು ಲೀಲಾವತಿ ಹಿರೇಮಠ, ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ, ಬಸವರಾಜ್ ನಲವತ್ವಾಡ ಪ್ರಾಂಶುಪಾಲರು ಡಯಟ್ ಬೆಳಗಾವಿ, ಉಪ ಪ್ರಾಂಶುಪಾಲರು ಹಾಗೂ ನೂಡಲ್ ಅಧಿಕಾರಿ ಟ್ಯಾಲೆಂಟ್ ಸರ್ಚ್ ಪರೀಕ್ಷೆ ಆಂಜನೇಯ ಆರ್. ಕೆ, ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ (ನಗರ ವಲಯ) ಬೆಳಗಾವಿ ಇತರರು ಹಾಜರಿದ್ದರು.