23/12/2024
IMG_20241123_184615

ಬೆಳಗಾವಿ-೨೩: ಪ್ರಸಕ್ತ ಸಾಲಿನ ಚಳಿಗಾಲದ ಅಧಿವೇಶನ ಯಶಸ್ವಿಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅಧಿವೇಶನಕ್ಕೆ ಆಗಮಿಸುವ ಸಚಿವರು, ಶಾಸಕರು, ಅಧಿಕಾರಿ, ಸಿಬ್ಬಂದಿಗಳಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸೂಚಿಸಿದರು. ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಶುಕ್ರವಾರ ನಡೆದ ಚಳಿಗಾಲ ಅಧಿವೇಶನ೨೦೨೪ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಧಿವೇಶನಕ್ಕಾಗಿ ಆಗಮಿಸುವ ಸಚಿವಲಾಯದ ಸಿಬ್ಬಂದಿ, ಸರ್ಕಾರದ ಹಿರಿಯ ಅಧಿಕಾರಿ ಹಾಗೂ ಸಚಿವರುಗಳಿಗೆ ಸುವರ್ಣ ವಿಧಾನ ಸೌಧದ ಕೊಠಡಿಗಳಲ್ಲಿ ಸುಸ್ಥಿತಿಯಲ್ಲಿರುವಂತಹ ಗಣಕ ಯಂತ್ರಗಳನ್ನು ಅಳವಡಿಸುವದರ ಜೊತೆಗೆ ಅಗತ್ಯದ ಸಿಬ್ಬಂದಿಗಳನ್ನು ನಿಯೋಜಿಸಲು ತಿಳಿಸಿದರು. ಸುವರ್ಣ ವಿಧಾನ ಸೌಧದಲ್ಲಿ ಅಂತರ್ಜಾಲದ ತೊಂದರೆ ಆಗದಂತೆ ಕಾಳಜಿ ವಹಿಸಬೇಕು. ಪ್ರತಿದಿನ ಅಧಿವೇಶನ ವೀಕ್ಷಣೆಗೆ ಆಗಮಿಸುವ ವಿಧ್ಯಾರ್ಥಿಗಳಿಗೆ ಸಮರ್ಪಕ ವ್ಯವಸ್ಥೆ ಮಾಡುವಂತೆ ತಿಳಿಸಿದರು. ವಿಧಾನ ಮಂಡಲದ ಕಲಾಪಗಳನ್ನು ವೀಕ್ಷಿಸಲು ಪ್ರವೇಶ ಪತ್ರಗಳೊಂದಿಗೆ ಆಗಮಿಸುವ ಸಾರ್ವಜನಿಕರನ್ನು ಭದ್ರತಾ ತಪಾಸಣೆಗೊಳಪಡಿಸಿ ಒಳ ಬಿಡುವ ಕಾರ್ಯವಾಗಬೇಕು ಎಂದರು. ಅಧಿವೇಶನ ಕಾರ್ಯಕ್ಕೆ ನಿಯೊಜಿತ ಅಧಿಕಾರಿ, ಸಿಬ್ಬಂದಿ, ಸಚಿವಾಲಯದ ಸಿಬ್ಬಂದಿಗಳಿಗೆ ಸುವರ್ಣ ವಿಧಾನ ಸೌಧದಲ್ಲಿ ಪ್ರತ್ಯೇಕ ಊಟದ ವ್ಯವಸ್ಥೆಗೆ ಕ್ರಮ ವಹಿಸುವದರ ಜೊತೆಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಹತ್ತು ದಿನಗಳ ಕಾಲ ಜರುಗುವ ಅಧಿವೇಶನದಲ್ಲಿ ಪ್ರತಿದಿನ ಸಾಂಸ್ಕಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಹಾಗೂ ಕಾಂಗ್ರೇಸ್ ಅಧಿವೇಶನದ ಶತಮಾನೋತ್ಸವದ ಹಿನ್ನಲೆಯಲ್ಲಿ ಸುವರ್ಣ ವಿಧಾನ ಸೌಧದಲ್ಲಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲು ಅಗತ್ಯದ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು. ವಿಧಾನಸಭೆ ಕಾರ್ಯದರ್ಶಿಗಳಾದ ಎಂ.ಕೆ. ವಿಶಾಲಾಕ್ಷಿ ಅವರು ಮಾತನಾಡಿ ಬೆಳಗಾವಿಯಲ್ಲಿ ಜರುಗಲಿರುವ ಚಳಿಗಾಲ ಅಧಿವೇಶನದಲ್ಲಿ ಯಾವುದೇ ಕೊರತೆಗಳು ಆಗದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ತಿಳಿಸಿದರು. ಅಧಿವೇಶನಕ್ಕೆ ಆಗಮಿಸುವ ಸಚಿವರು, ಶಾಸಕರುಗಳಿಗೆ ಪ್ರತಿ ವರ್ಷದಂತೆ ಸಮರ್ಪಕ ವಸತಿ ವ್ಯವಸ್ಥೆ ಒದಗಿಸಲು ಕ್ರಮ ವಹಿಸಲಾಗುವದು. ಅಲ್ಲದೇ ಸಚಿವಾಲಯದ ಸಿಬ್ಬಂದಿಗಳಿಗೂ ವಸತಿ ವ್ಯವಸ್ಥೆ ಮಾಡುವಂತೆ ತಿಳಿಸಿದರು. ಅಧಿವೇಶನ ಪ್ರಾರಂಭಕ್ಕೂ ಎರಡು ದಿನ ಮುಂಚಿತವಾಗಿ ಆಗಮಿಸುವ ಸಚಿವಾಲಯದ ಅಧಿಕಾರಿ ಸಿಬ್ಬಂದಿಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆ ಮಾಡಲು ವಿಧಾನ ಸಭೆ ಕಾರ್ಯದರ್ಶಿಗಳಾದ ಎಂ.ಕೆ.ವಿಶಾಲಾಕ್ಷಿ ಅವರು ತಿಳಿಸಿದರು. ಸಭೆಯಲ್ಲಿ ಪೋಲಿಸ್ ಆಯುಕ್ತರಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾಪೊಲಿಸ್ ವರಿಷ್ಠಾಧಿಕಾರಿ ಡಾ.ಭೀಮಾ ಶಂಕರ ಗುಳೇದ, ಜಿಲ್ಲಾಪಂಚಾಯತ ಸಿ.ಇ.ಓ ರಾಹುಲ ಶಿಂಧೆ, ಸಚಿವಾಲಯದ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

error: Content is protected !!