ಬೆಳಗಾವಿ-೧೨: ಗ್ರಾಮೀಣ ಪ್ರತಿಭೆಗಳು ಸಾಧನೆಯ ಹಾದಿಯಲ್ಲಿ ಸಾಗಿದರೆ ಅವಕಾಶಗಳು ತಾನಾಗಿಯೇ ಒದಗಿ ಬರುತ್ತವೆ ಎನ್ನುವುದಕ್ಕೆ ಈ ವಿದ್ಯಾರ್ಥಿಯೇ ಸಾಕ್ಷಿಯಾಗಿದ್ದಾನೆ.
ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ವಿದ್ಯಾರ್ಥಿ ಶಿವಾನಂದ ಜಾಲಿಂದರ ಕೋಳಿ (17) ತಮಿಳುನಾಡಿನ ಈರೋಡಿಯಲ್ಲಿ ಇತ್ತಿಚಿಗೆ ನಡೆದ ರಾಷ್ಟ್ರಮಟ್ಟದ ಅಟ್ಯಾಪಟ್ಯಾ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಲ್ಲದೆ ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.
ಪ್ರಥಮ ಪಿಯುಸಿ ಓದುತ್ತಿರುವ ಶಿವಾನಂದ ಕೋಳಿ ಮೊದಲಿನಿಂದಲೂ ವಿದ್ಯಾಭ್ಯಾಸದಲ್ಲಿಯೂ ಮುಂಚೂಣಿಯಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾನೆ.
ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಸಹ ತನ್ನದೇ ಛಾಪು ಮೂಡಿಸುವ ಮೂಲಕ ಜಿಲ್ಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾನೆ.
ರಾಷ್ಟ್ರಮಟ್ಟದ ಅಟ್ಯಾಪಟ್ಯಾ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ತಂಡದ ಮಾರ್ಗದರ್ಶಕರಾದ ಲಕ್ಷ್ಮಣ್ ಲಮಾಣಿಯವರು ಚಂದರಗಿಯಲ್ಲಿ ನೀಡಿದ್ದ 14 ದಿನಗಳ ಕಾಲ ಉತ್ತಮ ತರಬೇತಿಯ ಫಲವಾಗಿ ಮಹಾರಾಷ್ಟ್ರ ರಾಜ್ಯದ ತಂಡದ ವಿರುದ್ಧ ಅಂತಿಮ ಪಂದ್ಯದಲ್ಲಿ 2-3 ಸೆಟ್ ಗಳ ಅಂತರದಲ್ಲಿ ಕರ್ನಾಟಕ ತಂಡವು ರಾಷ್ಟ್ರಮಟ್ಟದಲ್ಲಿ ಮೂರನೇ ಸ್ಥಾನ ಪಡೆಯುವಲ್ಲಿ ಸಫಲವಾಯಿತು.
ತನ್ನ ಪರಿಶ್ರಮ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ರಾಷ್ಟ್ರಮಟ್ಟದಲ್ಲಿ ಗೆದ್ದು ಬೀಗಿರುವ ಗ್ರಾಮೀಣ ಪ್ರತಿಭೆಯ ಸಾಧನೆಗೆ ಕ್ರೀಡಾ ವಲಯ ಸೇರಿದಂತೆ ಎಲ್ಲೆಡೆಯಲೂ ಅಭಿನಂದನೆಗಳು ಹರಿದು ಬರುತ್ತಿವೆ.
ಶಿವಾನಂದನ ಈ ಸಾಧನೆಗೆ ಗ್ರಾಮದ ಸಾಮಾಜಿಕ ಸಂಘಟನೆಯಾದ ಯೂಥ್ ಫೌಂಡೇಶನ್, ಗ್ರಾಮಸ್ಥರು, ಸೇರಿದಂತೆ ಕುಟುಂಬಸ್ಥರು ಹಾಗೂ ಭಾರತೀಯ, ಕರ್ನಾಟಕ ಹಾಗೂ ತಮಿಳುನಾಡು ಅಟ್ಯಾಪಟ್ಯಾ ಅಸೋಸಿಯೇಷನ್ ಗಳಿಂದ ವ್ಯಾಪಕ ಪ್ರಶಂಸೆಯ ವ್ಯಕ್ತವಾಗುತ್ತಿದೆ.
ಶಿಕ್ಷಕರ ಮಾರ್ಗದರ್ಶನ ಹಾಗೂ ಪಾಲಕರ ಸತತ ಸಹಕಾರವೇ ನನ್ನನ್ನು ಇಲ್ಲಿಗೆ ಕರೆತಂದಿದೆ ಎಂದು ವಿದ್ಯಾರ್ಥಿ ಶಿವಾನಂದ ತನ್ನ ಸಂತಸ ಹಂಚಿಕೊಂಡಿದ್ದಾನೆ. ಹಳ್ಳಿ ಪ್ರತಿಭೆಯ ಈ ಸಾಧನೆಗೆ ಚಂದರಗಿ ಕ್ರೀಡಾ ಶಾಲೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ಶುಭ ಕೋರಿದ್ದಾರೆ.