ಬೆಳಗಾವಿ-೩೦: ಸರ್ಕಾರದ ನಿರ್ದೇಶನ ಹಾಗೂ ಕನ್ನಡ ಪರ ಹೋರಾಟಗಾರರ ಎಚ್ಚರಿಕೆ ಬಳಿಕವೂ ಕುಂದಾನಗರಿಯಲ್ಲಿನ ಬಹುತೇಕ ವಾಣಿಜ್ಯ ಮಳಿಗೆಗಳು ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಲು ಹಿಂದೇಟು ಹಾಕುತ್ತಿವೆ. ಆಂಗ್ಲ( ಇಂಗ್ಲೀಷ್) ನಾಮಫಲಕಗಳು ಮಳಿಗೆಗಳ ಕೇಂದ್ರ ಸ್ಥಾನದಲ್ಲಿಯೇ ಈಗಲೂ ರಾರಾಜಿಸುತ್ತಿವೆ, ಕನ್ನಡ ನಾಮಫಲಕಗಳನ್ನು ‘ಮೂಲೆ ಗುಂಪು’ ಮಾಡುತ್ತಿವೆ.
ಇನ್ನೇರಡು ದಿನಗಳಲ್ಲಿ ಕುಂದಾನಗರಿಯಲ್ಲಿ ನ. 1ರಂದು ಅದ್ದೂರಿ ರಾಜೋತ್ಸವ ಆಚರಣೆ ಮಾಡಲು ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಇನ್ನೊಂದೆಡೆ ಚನ್ನಮ್ಮ ವೃತ್ತದ ಬಳಿ ಕೂಗಳೆಯಲ್ಲಿರುವ ವಾಣಿಜ್ಯ ಮಳಿಗೆಗಳು ನಾಮಫಲಕಗಳಲ್ಲಿ 60ರಷ್ಟು ಕನ್ನಡ ಭಾಷೆ ಅಳವಡಿಸಿಕೊಳ್ಳಲು ನಿರಾಸಕ್ತಿ ತಾಳಿವೆ.
ಕನ್ನಡಕ್ಕೆ ಮೊದಲ ಆಧ್ಯತೆ ನೀಡಿ: ಬೆಳಗಾವಿ ಬಗಹುತೇಕ ರಸ್ತೆಗಳಲ್ಲಿ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ದೊರೆತಿಲ್ಲ. ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60 ಕನ್ನಡ ಬಳಸಬೇಕು ಎಂದು ಸೂಚನೆಯನ್ನು ಸರ್ಕಾರ ನೀಡಿದರೂ ಸಹ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಭಾಷೆ ಬಳಕೆಯಾಗಿಲ್ಲ. ಕೂಡಲೇ ರಾಜ್ಯೋತ್ಸವ ಒಳಗಡೆ ಇಂಗ್ಲಿಷ್ ನಾಮಫಲಕಗಳನ್ನು ತೆರವುಗೊಳಿಸಿ ಕನ್ನಡಕ್ಕೆ ಮೊದಲ ಆಧ್ಯತೆ ನೀಡಬೇಕು ಎಂದು ಹಿರಿಯ ಪ್ರಜ್ಞಾವಂತರೂ ಒತ್ತಾಯಿಸಿದ್ದಾರೆ.
ಹೆಚ್ಚಾದ ಅಸಮಾಧಾನ: ಬೆಳಗಾವಿಯಲ್ಲಿ ಅಧಿಕ ಮಳಿಗೆಗಳು ಶೇ 60ರಷ್ಟು ಕನ್ನಡ ಭಾಷೆ ಬಳಕೆಯ ನಾಮಫಲಕಗಳನ್ನು ಅಳವಡಿಸಿಕೊಂಡಿಲ್ಲ. ಸರ್ಕಾರ ಗಡುವು ನೀಡಿದ ಬಳಿಕ ಹಲವು ಮಳಿಗೆಗಳು ನಾಮಫಲಕಗಳಲ್ಲಿ ಕನ್ನಡ ಅಳವಡಿಸಿಕೊಂಡರೂ ಶೇ 60 ರಷ್ಟು ಆದ್ಯತೆ ನೀಡಿಲ್ಲ. ಇದು ಕನ್ನಡ ಪರ ಹೋರಾಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ.
ಅಕ್ಕಪಕ್ಕದಲ್ಲಿ ಅಳವಡಿಕೆ: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಮಸೂದೆ–2024ಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದೆ. ಇದರ ಪ್ರಕಾರ ನಾಮಫಲಕಗಳ ಒಟ್ಟಾರೆ ವಿಸ್ತೀರ್ಣದಲ್ಲಿ ಕನ್ನಡ ಭಾಷೆಯನ್ನು ಶೇ 60 ರಷ್ಟು ಪ್ರದರ್ಶಿಸುವುದು ಕಡ್ಡಾಯ. ಆದರೆ, ಸದ್ಯ ಬಹುತೇಕ ನಾಮಫಲಕಗಳಲ್ಲಿ ಶೇ 60 ರಷ್ಟು ಇಂಗ್ಲಿಷ್ ಇದ್ದು, ಶೇ 40 ಹಾಗೂ ಅದಕ್ಕಿಂತ ಕಡಿಮೆ ಪ್ರಮಾಣ ಕನ್ನಡಕ್ಕೆ ಆದ್ಯತೆ ನೀಡಲಾಗುತ್ತಿದೆ. ಈ ಮೊದಲಿದ್ದ ಇಂಗ್ಲಿಷ್ ನಾಮಫಲಕಗಳನ್ನು ಹಾಗೇ ಉಳಿಸಿಕೊಳ್ಳುತ್ತಿದ್ದು, ಅದರ ಮೇಲೆ ಅಥವಾ ಕೆಳಗೆ ಸಣ್ಣದಾಗಿ ಅಥವಾ ಸಮಾನವಾಗಿ ಕನ್ನಡದ ನಾಮಫಲಕಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.
ಇನ್ನೂ ಕೆಲವೆಡೆ ಹಾಲಿ ನಾಮಫಲಕದ ಪಕ್ಕದಲ್ಲಿ ಕನ್ನಡದ ನಾಮಫಲಕವನ್ನು ಹಾಕಲಾಗಿದೆ. ಒಟ್ಟಾರೆಯಾಗಿ ಬೆಳಗಾವಿಯಲ್ಲಿ 69ನೇ ಕನ್ನಡ ರಾಜ್ಯೋತ್ಸವನ್ನು ಸಂಭ್ರಮದಿಂದ ಆಚರಣೆ ಮಾಡಲು ಸಕಲ ಸಿದ್ದತೆ ಮಾಡಲಾಗುತ್ತಿದ್ದು, ಪಾಲಿಕೆ ಅಧಿಕಾರಿಗಳು ಕನ್ನಡಿಗರ ಕಣ್ಣು ಕೆಂಪಾಗದಂತೆ ಕ್ರಮ ಕೈಗೊಂಡು ಎಲ್ಲ ವಾಣಿಜ್ಯ ಮಳಿಗೆಗಳು ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ನಾಮಫಲಕ ಅಳವಡಿಸಿಲು ಮುಂದಾಗಬೇಕು ಎಂಬುವುದು ಕನ್ನಡಿಗರ ಒತ್ತಾಯವಾಗಿದೆ.
ನಾಮಫಲಕಗಳ ಮೇಲೆ ಕನ್ನಡ ‘ಮೂಲೆ ಗುಂಪು’-ಇಂಗ್ಲಿಷ್ ನಾಮಫಲಕ ತೆರವು ಕಾರ್ಯಾಚರಣೆ ಮಾಡದ ಪಾಲಿಕೆಯಿಂದ ಕನ್ನಡಿಗರಿಗೆ ʻಶುಭʼ ಸುದ್ದಿ ಎಂದು.?ಕಾದು ನೋಡಬೇಕು…?