ಬೆಳಗಾವಿ-೨೧: ಇ-ಹಾಜರಾತಿ ಸಮಸ್ಯೆ ಪರಿಹರಿಸುವುದು ಹಾಗೂ ವಿಶೇಷಚೇತನರ ಗೌರವಧನ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ನವ ಕರ್ನಾಟಕ ಸಂಘದ ವತಿಯಿಂದ ಪ್ರತಭಟಿಸಲಾಯಿತು.
ಸೋಮವಾರ ನಗರದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ, ಜಿಲ್ಲಾ ಪಂಚಾಯಿತಿ ಸಿಇಓ ರಾಹುಲ್ ಶಿಂಧೆ ಅವರಿಗೆ ಹಾಗೂ ಡಿಸಿ ಕಚೇರಿಗೆ ಮನವಿ ಅರ್ಪಿಸಿದರು.
ಇ-ಹಾಜರಾತಿಯಿಂದ ಕಾರ್ಯಕರ್ತರ ಗೌರವಧನ ಕಡಿತಗೊಳಿಸುವುದನ್ನು ನಿಲ್ಲಿಸಬೇಕು.ಕಾರ್ಯಕರ್ತರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಇಲಾಖೆಯಿಂದ ನೀಡುವ ಯಂತ್ರಚಾಲಿತ ವಾಹನಕ್ಕಾಗಿ ಅರ್ಜಿ ಸಲ್ಲಿಸಿರುವ ಕಾರ್ಯಕರ್ತರಿಗೆ ಮೊದಲ ಆದ್ಯತೆ ಮೇರೆಗೆ ಆಯ್ಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಹಾಗೂ ತಾಲೂಕ ಪಂಚಾಯಿತಿ ಗಳಲ್ಲಿ ಪ್ರಭಾರವಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರಿಗೆ ಸರಕಾರ ಆದೇಶದಂತೆ ಶೇ.50ರಷ್ಟು ಪ್ರಭಾರ ಭತ್ಯೆಯನ್ನು ನೀಡಬೇಕು. ವಿವಿಧ ಇಲಾಖೆಗಳಲ್ಲಿ ವಿಶೇಷ ಚೇತನರಿಗಾಗಿ ಮೀಸಲಿರುವ ಶೇ.5 ರಷ್ಟು ಅನುದಾನವನ್ನು ವಿಶೇಷ ಚೇತನ ಕಲ್ಯಾಣ ಕಾರ್ಯಕ್ರಮಗಳಿಗೆ ಮಾತ್ರ ಬಳಕೆ ಮಾಡಬೇಕು ಎಂದು ಒತ್ತಾಯಿಸಿದರು.
ಪುನರ್ವಸತಿ ಕಾರ್ಯಕರ್ತರು ಇ-ಹಾಜರಾತಿ ಸರಿಯಾಗಿ ನೀಡುತ್ತಿದ್ದು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ, ಇಂಟರ್‌ನೆಟ್ ಸಮಸ್ಯೆ, ಕ್ಷೇತ್ರ ಬೇಟಿ, ವಿಶೇಷ ಚೇತನರ ಮನೆಗಳಿಗೆ ಬೇಟಿ, ವಿವಿಧ ಇಲಾಖೆಗಳಿಗೆ ತೆರಳಿ ಮಾಹಿತಿ ಸಲ್ಲಿಸುವಿಕೆ ಹಾಗೂ ಸಭೆ ಸಭೆಗಳಿಗೆ ಹಾಜರಾಗುವುದು ಹೇಗೆ ಹತ್ತು ಹಲವು ಕೆಲಸಗಳು ಇರುತ್ತವೆ. ಈ ಸಮಯದಲ್ಲಿ ಕೆಲವೊಮ್ಮೆ ಸರಿಯಾಗಿ ಇ-ಹಾಜರಾತಿ ನೀಡುವುದು ಸ್ವಲ್ಪ ವಿಳಂಬವಾಗಿರುವ ಕಾರಣಕ್ಕಾಗಿ ಸದ್ಯ ಇರುವಂತಹ ಗೌರವಧನ ಕಡಿತಗೊಳಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅನೇಕರು ಪ್ರತಿಭಟನೆ ಯಲ್ಲಿ ಉಪಸ್ಥಿತರಿದ್ದರು.