ಬೆಳಗಾವಿ-೧೩: ಜನರಿಗೆ ನೂರಾರು ಭರವಸೆಗಳನ್ನು ನೀಡಿ ನಾವು ಶಾಸಕರಾಗಿರುತ್ತೇವೆ. ಆದರೆ ಅವರಿಗೆ ಸರಿಯಾದ ರೀತಿಯಲ್ಲಿ ಸ್ಪಂದನೆ ದೊರೆಯದಿದ್ದಲ್ಲಿ ಯಾಕೆ ನಾವು ಶಾಸಕರಾಗಿ ಮುಂದುವರೆಯಬೇಕು ಎಂದು ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ ತಮ್ಮದೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸಮರ್ಪಕವಾದ ಅನುದಾನ ನೀಡಿ ಇಲ್ಲವಾದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಈಗಾಗಲೇ ವಿಧಾನಸೌಧದಲ್ಲಿ ಮಂತ್ರಿಗಳಿಗೆ ಎಚ್ಚರಿಕೆ ನೀಡಿದ್ದೇನೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧವೇ ರಾಜು ಕಾಗೆ ವಾಗ್ದಾಳಿ ನಡೆಸಿದ್ದಾರೆ.
ರೈತರ ಯಾವುದೇ ಯೋಜನೆಗಳು ಜಾರಿಯಾಗುತ್ತಿಲ್ಲ. ನಾವು ಸುಳ್ಳು ಹೇಳಿ ನಾಟಕೀಯ ವರ್ತನೆ ಮಾಡುತ್ತಿದೀವೇನ್ರೀ? ಒಂದು ವರ್ಷ ದುಡಿಮೆಯನ್ನು ನಿಲ್ಲಿಸಿದೀವಿ, ಜೋಳ, ಗೋಧಿ, ಭತ್ತ ಬೆಳೆಯಲಿಲ್ಲ ಅಂದ್ರೆ ಏನು ತಿನ್ನಬೇಕು? ಹಣ ಸಾಕಷ್ಟು ಇದ್ದರೂ ಅದನ್ನು ತಿಂದು ಬದುಕಲು ಸಾಧ್ಯವಾಗುತ್ತದೆಯಾ? ರೈತರನ್ನು ಮೊದಲು ಬದುಕಿಸಬೇಕು ಅಂದಾಗ ಮಾತ್ರ ಈ ದೇಶ ಪ್ರಗತಿಯತ್ತ ಸಾಗಲು ಸಾಧ್ಯ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈ ಸರ್ಕಾರದಲ್ಲಿ ಶಾಸಕನಾದರೂ ಸಹ ಒಂದು ವರ್ಷದಿಂದ ನನ್ನ ಗೋಳು ಕೇಳುವವರೇ ಇಲ್ಲವಾಗಿದ್ದಾರೆ. ವಿಧಾನಸೌಧದ ಎದುರು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮಂತ್ರಿಗಳಿಗೆ ಹೇಳಿ ಬಂದಿದ್ದೇನೆ.ಆದರೂ ಯಾರೊಬ್ಬರೂ ಕ್ಯಾರೇ ಎನ್ನುತ್ತಿಲ್ಲ. ನಾವು ಬೆಂಗಳೂರಿಗೆ ಹೋಗಿ ಚೈನಿ ಮಾಡುವುದಿಲ್ಲ. ಒಮ್ಮೊಮ್ಮೆ ಊಟನೂ ಇಲ್ಲದೆ ಕ್ಷೇತ್ರದ ಜನರ ಕಷ್ಟ ಸುಖಗಳನ್ನು ವಿಧಾನಸೌಧದಲ್ಲಿ ಎತ್ತಿ ಹೇಳುತ್ತಿದ್ದೇವೆ ಎಂದು ಕಾಗೆ ತಮ್ಮ ಗೋಳು ತೋಡಿಕೊಂಡಿದ್ದಾರೆ.
ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿವೆ ಆದರೂ ಕೂಡ ಸರ್ಕಾರದವರು ನಮಗೆ ಸ್ಪಂದನೆ ಮಾಡುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಯಾವ ಕಾರಣಕ್ಕಾಗಿ ನಾವು ಶಾಸಕರಾಗಿ ಅಧಿಕಾರದಲ್ಲಿ ಇರಬೇಕು? ಆಡಳಿತ ಪಕ್ಷದಲ್ಲಿದ್ದು ಒಬ್ಬ ಶಾಸಕನಾಗಿ ನಾನೇ ಅಸಹಾಯಕನಾಗಿದ್ದೀನಿ ಎಂದರೆ ಈ ವ್ಯವಸ್ಥೆಯಲ್ಲಿ ನಾವು ಹೇಗೆ ಬದುಕುತ್ತಿದ್ದೇವೆ ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕು. ನಮ್ಮ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ರಾಜೀನಾಮೆ ಕೊಟ್ಟು ಹೊರಗೆ ಬರುತ್ತೇನೆ ಎಂದು ರಾಜು ಕಾಗೆ ಗ್ಯಾರಂಟಿ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ.
ಕ್ಷೇತ್ರದ ಜನರಿಗೆ ನೀರು ಕೊಟ್ಟು ಸಾಯುವೆ: ಕಾಗೆ ಭಾವುಕ
ಬಸವೇಶ್ವರ ಏತ ನೀರಾವರಿ ಯೋಜನೆಯಲ್ಲಿ ಎಲೆಕ್ಟ್ರಿಕ್ ಕೆಲಸಕ್ಕಾಗಿ ಆರು ತಿಂಗಳುಗಳಿಂದ ಪರದಾಡುತ್ತಿದ್ದರೂ ಸಂಬಂಧಪಟ್ಟವರು ಕೇವಲ ಇಂದು ನಾಳೆ ಎಂದು ದಿನದೂಡುತ್ತಿದ್ದಾರೆ. ಒಂದು ವೇಳೆ ಈ ಯೋಜನೆ ಜಾರಿಗೆ ಬಂದರೆ ಇದರ ಶ್ರೇಯಸ್ಸು ರಾಜು ಕಾಗೆಗೆ ಸಲ್ಲುತ್ತದೆ. ಹೀಗಾಗಿ ಇದಕ್ಕೆ ಕಂಡು ಕಾಣದ ಕೈಗಳು ವಿರೋಧಿಸುತ್ತಿವೆಯಾ ಎಂಬ ಅನುಮಾನಗಳು ಕಾಡುತ್ತಿವೆ ಎಂದು ಕಿಡಿಕಾರಿದ್ದಾರೆ.
ಇದನೆಲ್ಲ ನೋಡಿ ನನ್ನ ಮನಸ್ಸಿಗೆ ನೋವಾಗುತ್ತಿದೆ. ನನಗೆ ಮುಂದಿನ ಬಾರಿ ಶಾಸಕನಾಗುವ ಆಸೆ ಇಲ್ಲ. ಆದರೆ ಜನರಿಗೆ ಕೊಟ್ಟ ಮಾತುಗಳನ್ನು ಈಡೇರಿಸಬೇಕು. ಅವರ ವಿಶ್ವಾಸ ಉಳಿಸಿಕೊಂಡು ಹೋಗುವೆ. ಈ ಕ್ಷೇತ್ರದಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆ ಜಾರಿಗೆಯಾಗಿ ರೈತರ ಜಮೀನುಗಳಿಗೆ ನೀರು ಕೊಟ್ಟು ನಾನು ಸಾಯಬೇಕು ಎಂದು ಕಾಗೆ ಭಾವುಕರಾಗಿ ನುಡಿದಿದ್ದಾರೆ.
ಜೀವನದಲ್ಲಿ ಬದುಕಿನ ರೀತಿ ಮನುಷ್ಯನಂತೆಯೇ ಇರಬೇಕು. ಬದಲಾಗಿ ರಾಕ್ಷಸನಂತಿದ್ದು ಸಾಯುವುದರಲ್ಲಿ ಅರ್ಥವೇ ಇಲ್ಲ, ಆ ಸಾವು ನನಗೆ ಬೇಡ ಎಂದು ಶಾಸಕ ರಾಜು ಕಾಗೆ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ನವರಸ ಮಿಶ್ರಿತವಾಗಿಯೇ ವಿವರಿಸಿದ್ದಾರೆ.