ಬೆಳಗಾವಿ-೧೦: ಹಲವು ಆಚರಣೆಗಳ ನೆಲೆಯಾಗಿರುವ ದೇಶದಲ್ಲಿ ವಿವಿಧತೆಯಲ್ಲಿ ವೈವಿಧ್ಯಮಯ ಸಂಪ್ರದಾಯ ಏಕತೆ ಕಾಣುತ್ತೇವೆ. ಇದಕ್ಕೆ ಹಬ್ಬ-ಹರಿದಿನಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ. ಅಂಥ ಆಚರಣೆಗಳಲ್ಲಿ ನವರಾತ್ರಿ ಹಬ್ಬವು ವಿಶಿಷ್ಟ ಎನಿಸಿಕೊಂಡಿದೆ. ನವರಾತ್ರಿ ಎಂದ ತಕ್ಷಣ ಸತತ 9 ದಿನಗಳ ಕಾಲ ಶಕ್ತಿ ದೇವತೆಯ ಆರಾಧನೆ ಎಷ್ಟು ಮುಖ್ಯವೋ, ದಾಂಡಿಯಾ ನೃತ್ಯವು ವರ್ಷದಿಂದ ವರ್ಷಕ್ಕೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ.
ನಾಡಿನಾಧ್ಯಂತ ನವರಾತ್ರಿ ಉತ್ಸವದ ಸಂಭ್ರಮ ಮುಗಿಲು ಮುಟ್ಟಿದ್ದು, ಕುಂದಾನಗರಿ ಬೆಳಗಾವಿಯಲ್ಲಿ ದಸರಾ ಹಬ್ಬ ಕಳೆಗಟ್ಟಿದೆ. ಗಲ್ಲಿ ಗಲ್ಲಿಯಲ್ಲಿ ದಾಂಡಿಯಾ ನೃತ್ಯದ ಹವಾ ಜೋರಾಗಿದೆ. ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ನವ ದುರ್ಗೆಯ ಆರಾಧನೆ ಮಾಡುವ ಮಹಿಳಾಮಣಿಗಳು, ಸಾಯಂಕಾಲ ಆದರೆ ಸಾಕು ದಾಂಡಿಯಾದಲ್ಲಿ ಪಾಲ್ಗೊಂಡು ಕುಣಿದು, ಕುಪ್ಪಳಿಸಿರುತ್ತಾರೆ.
ಗುಜರಾತಿ ಮೂಲದ ದಾಂಡಿಯಾ ಬೆಳಗಾವಿಗೆ ಯಾವಾಗ ಲಗ್ಗೆ ಇಟ್ಟಿತು ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಆದರೆ, ಯಾವಾಗ ಗುಜರಾತ ಸೇರಿ ಉತ್ತರ ಭಾರತದ ವಿವಿಧ ರಾಜ್ಯಗಳಿಂದ ವ್ಯಾಪಾರಿಗಳು ಬೆಳಗಾವಿಗೆ ಬದುಕು ಕಟ್ಟಿಕೊಳ್ಳಲು ಬರುವರೋ, ಆಗ ಅವರ ಜೊತೆಗೆ ಅವರ ಸಂಸ್ಕೃತಿ, ಆಚರಣೆಗಳು ಕುಂದಾನಗರಿಗೆ ಕಾಲಿಟ್ಟವು. ಅದರಲ್ಲಿ ದಾಂಡಿಯಾ ಕೂಡ ಒಂದು. ಬೆಳಗಾವಿಯ ರಾಮತೀರ್ಥ ನಗರ, ರಾಣಿ ಚನ್ನಮ್ಮ ನಗರ, ಸದಾಶಿವನಗರ, ಅನಗೋಳ, ಗುಜರಾತ್ ಭವನ, ಟಿಳಕವಾಡಿ ಸೇರಿ ವಿವಿಧೆಡೆ ಅದ್ಧೂರಿ ದಾಂಡಿಯಾ ಆಯೋಜಿಸಲಾಗಿದೆ. ಅದೇ ರೀತಿ ಕೆಲ ಖಾಸಗಿ ಹೋಟೆಲ್ ಗಳಲ್ಲೂ ದಾಂಡಿಯಾ ಸದ್ದು ಮಾಡುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ದೇಶಿ ಉಡುಗೆ ತೊಟ್ಟು, ಕೈಯಲ್ಲಿ ಕೋಲು ಹಿಡಿದು ನೃತ್ಯ ಮಾಡುವ ದೃಶ್ಯ ಎಲ್ಲರ ಗಮನ ಸೆಳೆಯುತ್ತಿದೆ.