ಬೆಳಗಾವಿ-೦೫: ಅವಿಭಕ್ತ ಕುಟುಂಬ ಪದ್ಧತಿ ಇರುವಾಗ ಕುಟುಂಬದವರು ತಪ್ಪುದಾರಿ ಹಿಡಿದಾಗ ಬುದ್ಧಿವಾದ ಹೇಳುವ ಹಿರಿಯರಿರುತ್ತಿದ್ದರು.ಮನೆಯಲ್ಲಿನ ಸಂಸ್ಕಾರ ಕೊರತೆಯಿಂದ ಚಿಕ್ಕ ಚಿಕ್ಕ ಮಕ್ಕಳು ದುಶ್ಚಗಳಿಗೆ ದಾಸರಾಗುತ್ತಿದ್ದಾರೆ. ಹೀಗಾಗಿ ಮಕ್ಕಳಿಗೆ ಸಂಸ್ಕಾರ ನೀಡಿಬೇಕು ಎಂದು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಅಧ್ಯಕ್ಷರಾದ ರಾಜಣ್ಣ ಕೊರವಿ ಹೇಳಿದರು
ಕಂಗ್ರಾಳಿ ಕೆ ಎಚ್ ನ ಶ್ರೀ ರಾಮಕೃಷ್ಣ ಹರಿ ಮಂಗಲ ಕಾರ್ಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ (ರಿ) ಬೆಳಗಾವಿ ಜಿಲ್ಲೆ,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ (ರಿ) ಬೆಳಗಾವಿ ಜಿಲ್ಲೆ ಇವರ ಸಹಯೋಗದೊಂದಿಗೆ
ನಡೆದ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ಗಾಂಧಿ ಸ್ಮೃತಿ,ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಮಶಾನಕಡೆ ಮುಖಮಾಡಿದವರನ್ನು ಸಮಾಜದ ಕಡೆ ಮುಖ ಮಾಡಿಸುವ ಕೆಲಸವನ್ನು ಜನಜಾಗೃತಿ ವೇದಿಕೆ ಮಾಡುತ್ತಿದೆ. ಮಾನ ಮರ್ಯಾದೆ ಹೋದ ಜಾಗದಲ್ಲಿ ಸ್ಥಾನಮಾನ ಸನ್ಮಾನ, ಗೌರವ ಕೊಡಿಸುವ ಕೆಲಸ ವನ್ನು ಈ ವೇದಿಕೆ ಮೂಲಕ ಮಾಡಲಾಗುತ್ತಿದೆ. ಸ್ವಸ್ಥ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾದಾಗ ಮಾತ್ರ ಸಮಾಜ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹೇಳಿದರು.
ಪರಮಪೂಜ್ಯರು ಹಗಲಿರುಳೆನ್ನದೆ ನವ ಸಮಾಜ ನಿರ್ಮಾಣ ಮಾಡುವ ಕೆಲಸವನ್ನು ಮದ್ಯ ವ್ಯಸನ ಶಿಬಿರ,ಜನಜಾಗೃತಿ ಜಾಥ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಎಂದರು.
ಕಂಗ್ರಾಳಿ ಕೆ ಎಚ್ ನ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಬೃಹತ್ ಜನಜಾಗೃತಿ ಜಾಥಾವನ್ನು ಕಂಗ್ರಾಳಿ ಕೆ ಎಚ್ ನ ಗ್ರಾಮ ಪಂಚಾಯತ ಅಧ್ಯಕ್ಷರಾದ ದೊಡ್ಡವ್ವ ಸಿದ್ಧಪ್ಪ ಮಾಳಗಿಯವರು ಚಾಲನೆ ನೀಡಿದರು.
ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ದಯಾಶೀಲರವರು ಮಾತನಾಡಿ, ದುಶ್ಚಟ ದುರಭ್ಯಾಸ ದೂರ ಮಾಡಲು ಮದ್ಯದಂಗಡಿ ಗಳನ್ನು ಮುಚ್ಚಿಸಿದರೆ ಸಾಧ್ಯವಾಗುವುದಿಲ್ಲ .
ಕುಡಿಯುವ ವ್ಯಕ್ತಿಯ ಮನಃಪರಿವರ್ತನೆ ಆದಾಗ ಮಾತ್ರ ಪಾನಮುಕ್ತರಾಗಲು ಸಾಧ್ಯ.ಸಹವಾಸ ದೋಷ,ತಿಳುವಳಿಕೆ ಕೊರತೆಯಿಂದ ಕೆಟ್ಪಚಟಗಳಿಗೆ ಬಲಿಯಾಗಿ ಕೆಟ್ಟವ್ಯಕ್ತಿಗಳಾಗುತ್ತಾರೆ. ಅಂತವರನ್ನ ಸಮಾಜದ ಮುಖ್ಯವಾಹಿನಿಗೆ ತರುವ ಮತ್ತು ಗಾಂಧಿಜೀಯವರ ರಾಮರಾಜ್ಯದ ಕೆಲಸವನ್ನು ಪೂಜ್ಯರು ಮಾಡುತ್ತಿದ್ದಾರೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಬಸವರಾಜ ಸೊಪ್ಪಿಮಠ ಇವರು ವಹಿಸಿದ್ದರು.ಕಾರ್ಯಕ್ರಮದಲ್ಲಿ ವಿಜಯ ಆರ್ಥೋ ಥರ್ಮೋ ಸೆಂಟರ್ ಆಸ್ಪತ್ರೆಯ ಡಾ. ರವಿ ಪಾಟೀಲ, ಕಂಗ್ರಾಳಿ ಕೆ ಎಚ್ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಕಲ್ಲಪ್ಪ ನಾಗೋಜಿ ಪಾಟೀಲ, ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ವಿಠ್ಠಲ ಪಿಶೆ, ಜಗದೀಶ ಹಾರಗೊಪ್ಪ,ಜನಜಾಗೃತಿ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.
ಜಿಲ್ಲಾ ನಿರ್ದೇಶಕರಾದ ಸತೀಶ ನಾಯ್ಕ ಸ್ವಾಗತಿಸಿದರು.
ಮೇಲ್ವಿಚಾರಕಿ ವೈಶಾಲಿ ಕಾರ್ಯಕ್ರಮ ನಿರೂಪಿಸಿದರು.
ಯೋಜನಾಧಿಕಾರಿ ನಾಗರಾಜ ಹದ್ಲಿ ರವರು ವಂದಿಸಿದರು