23/12/2024
IMG-20240926-WA0003

ಬೆಳಗಾವಿ-೨೬: ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಮ್ಮೇಳನ ಮತ್ತು ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರ ಸಮಿತಿ ಸಭೆ ಸೆ.೨೯,೩೦ರಂದು ಕಲಬುರಗಿ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಸಂಚಾಲಕ ಎನ್.ಎಲ್.ಭರತ್‌ರಾಜ್ ಅವರು ತಿಳಿಸಿದರು.

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿಯ ಲ್ಲಿ ನಡೆಯುವ ಎರಡು ದಿನದ ಸಮ್ಮೇಳನದಲ್ಲಿ ದೇಶದ ಕಬ್ಬು ಬೆಳೆಗಾರರ ತಿಥಿ-ಗತಿ, ಮುಂದಿನ ಹೋರಾಟದ ಪೂರ್ವಭಾವಿ ರೂಪರೇಷೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಈ ಸಭೆಯಲ್ಲಿ ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಡಿ. ರವಿಚಂದ್ರನ್, ಅಖಿಲ ಭಾರತ ಕಿಸಾನ್ ಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ವಿಜು ಕೃಷ್ಣನ್ ಹಾಗೂ ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಎನ್‌ ಕೆ. ಶುಕ್ಲಾ ಸೇರಿದಂತೆ ಕರ್ನಾಟಕ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರ, ತಮಿಳುನಾಡು, ಬಿಹಾರ‌ ರಾಜ್ಯಗಳ ಕಬ್ಬು ಬೆಳೆಗಾರರ ಸಂಘದ ರಾಜ್ಯ-ರಾಷ್ಟ್ರಮಟ್ಟದ ಮುಖಂಡರು ಪಾಲ್ಗೊಳಲ್ಲಿದ್ದಾರೆ ಎಂದರು.

ಕೇಂದ್ರ ಸರಕಾರ ಪ್ರತಿ ಟನ್ ಕಬ್ಬಿಗೆ 5. ಸಾವಿರ ಎಫ್ಆರ್‌ಪಿ, ಹಾಗೂ ರಾಜ್ಯ ಸರಕಾರ ಪ್ರತಿ ಟನ್ ಗೆ 500 ರೂ. ಎಸ್‌ಎಪಿ ನಿಗದಿಪಡಿಸಬೇಕಿತ್ತು. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಹೊಂದಾಣಿಕೆಯಾಗಿ ರೈತರಿಗೆ ವಂಚನೆ ಮಾಡುತ್ತಿವೆ ಎಂದು ದೂರಿದರು.

ಮುಂಚೆ ಶೇ.8.5 ಇಳುವರಿ ಆಧರಿಸಿ, ಕಬ್ಬಿಗೆ ಎಫ್‌ಆರ್‌ಪಿ ನಿಗದಿಪಡಿಸುತ್ತಿದ್ದರು.ಬಳಿಕ ಶೇ. 9.5 ಇಳುವರಿ ಆಧಾರದಲ್ಲಿ ಬೆಲೆ ನಿಗದಿಗೊಳಿಸಿದರು. ಈಗ ಶೇ.10.25 ಇಳುವರಿ ಆಧರಿಸಿ, ಟನ್‌ ಕಬ್ಬಿಗೆ 3,150 ರಿಂದ 3,400 ಬೆಲೆ ನೀಡುತ್ತಿದ್ದಾರೆ.ಇದು ಸರಿಯಾದ ಕ್ರಮವಲ್ಲ ಎಂದ ಅವರು ಎಂ.ಎಸ್‌.ಸ್ವಾಮಿನಾಥನ್‌ ಆಯೋಗದ ವರದಿಯಂತೆ ಪ್ರತಿ ಟನ್‌ ಕಬ್ಬಿಗೆ 5,370 ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿರುವ ಬಿಜೆಪಿ,ಕಾಂಗ್ರೆಸ್ ಜೆಡಿಎಸ್, ಪಕ್ಷದ ಶಾಸಕ ಸಚಿವರುಗಳೆ ಸಕ್ಕರೆ ಕಾರ್ಖಾನೆಗಳ ಮಾಲೀಕರಿದ್ದಾರೆ. ಅವರು ಆರ್ಥಿಕವಾಗಿ, ರಾಜಕೀಯವಾಗಿ ಸದೃಢ ಇರುವ ಕಾರಣ ಕಬ್ಬಿನ ಬೆಲೆ ಹೆಚ್ಚಿಸುವು ಕಷ್ಟ ಸಾಧ್ಯವಾಗಿದೆ. ಹೀಗಾಗಿ ಅವರಿಗೆ ಸರಿಸಮವಾಗಿ ಚಾಟಿ ಬೀಸಲು ದೇಶದ ಎಲ್ಲ ಕಬ್ಬು ಬೆಳೆಗಾರರು ಒಂದಾಗಬೇಕು ಎಂದು ಅಭಿಪ್ರಾಯಪಟ್ಟರು.

ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಹ ಸಂಚಾಲಕರಾದ ಬಿ.ಎಸ್‌.ಸೊಪ್ಪಿನ, ಜಿ ನಾಗರಾಜ್ ಕಾರ್ಮಿಕ ಮುಖಂಡ ಜಿ.ಎಂ.ಜೈನೇಖಾನ್‌, ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ, ರೈತ ಮುಖಂಡ ಚಂದ್ರಗೌಡ ಪಾಟೀಲ,ಶಿವಲೀಲಾ ಸೇರಿದಂತೆ ಇತರರು ಹಾಜರಿದ್ದರು.

error: Content is protected !!